ವಿಜಯಪುರ: ತಾನೇ ಹೆತ್ತ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಮಿರಗಿ ಗ್ರಾಮದಲ್ಲಿ ನಡೆದಿದೆ.
ಇಂಡಿ ತಾಲೂಕಿನ ಮಿರಗಿ ಗ್ರಾಮದ ರಾಜಶ್ರೀ ಶಂಕ್ರಪ್ಪ ಹಳ್ಳೂರ (28) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಈಕೆಯ ಪತಿ ಖಾಸಗಿ ಬಸ್ ಚಾಲಕನಾಗಿದ್ದು, ಪತಿ ಕೆಲಸಕ್ಕೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.
ಮಕ್ಕಳಾದ ಅನುಶ್ರೀ (6), ತನು (3) ಮತ್ತು ಕೇವಲ 1 ವರ್ಷದ ಕಂದಮ್ಮ ಸಂತೋಷ್ ಸೇರಿದಂತೆ ಮೂವರನ್ನು ಬಾವಿಗೆ ಎಸೆದು ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.























