ಬೆಂಗಳೂರು: ಕರ್ನಾಟಕದ ಹೆಮ್ಮೆಯ ಹಾಲು ಉತ್ಪನ್ನ ಸಂಸ್ಥೆ ಕರ್ನಾಟಕ ಮಿಲ್ಕ್ ಫೆಡರೇಷನ್ (KMF) ತನ್ನ ಜನಪ್ರಿಯ ಬ್ರ್ಯಾಂಡ್ ನಂದಿನಿಯನ್ನು ಈಗ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಮಹತ್ವದ ಹೆಜ್ಜೆ ಇಟ್ಟಿದೆ. ಐಪಿಎಲ್ ಟೂರ್ನಿಯ ಜನಪ್ರಿಯ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಜೊತೆ ಕೈಜೋಡಿಸಿ, ಈ ಬಾರಿಯ ಸೀಸನ್‌ನಲ್ಲಿ ಅಧಿಕೃತ ಡೈರಿ ಪಾರ್ಟ್ನರ್ ಆಗಿ ಕಾಣಿಸಿಕೊಳ್ಳಲಿದೆ.
ಜಾಗತಿಕ ವೇದಿಕೆಗೆ ನಂದಿನಿ: KMF ವ್ಯವಸ್ಥಾಪಕ ನಿರ್ದೇಶಕರು ಹೇಳುವಂತೆ ನಂದಿನಿ ಬ್ರ್ಯಾಂಡ್ ಈಗಾಗಲೇ ರಾಜ್ಯದಾಚೆಗೆ ಉತ್ತಮ ಹೆಸರು ಗಳಿಸಿದೆ. ಐಪಿಎಲ್‌ನಂತಹ ವೇದಿಕೆಯ ಮೂಲಕ ದೇಶದಾದ್ಯಂತ ಹಾಗೂ ವಿಶ್ವ ಮಟ್ಟದಲ್ಲಿ ವ್ಯಾಪ್ತಿ ವಿಸ್ತರಣೆ ಉದ್ದೇಶ ಹೊಂದಿದ್ದು ಯುವಜನರಲ್ಲಿ ಆರೋಗ್ಯಕರ ಹಾಲು ಉತ್ಪನ್ನ ಬಳಕೆ ಪ್ರೋತ್ಸಾಹ ಸಿಗಲಿದ್ದು ಆರೋಗ್ಯಕರ ಹಾಲು ಉತ್ಪನ್ನಗಳನ್ನು ಬಳಸುವ ಅಭ್ಯಾಸ ಬೆಳೆಸಬೇಕು ಎಂಬ ಸಂದೇಶ ನೀಡುವ ನಿಟ್ಟಿನಲ್ಲಿ ಈ ಸಹಭಾಗಿತ್ವ ಕೈಗೊಳ್ಳಲಾಗಿದೆ ಎಂದರು
ಒಪ್ಪಂದದ ಪ್ರಮುಖ ಅಂಶಗಳು: ₹4.80 ಕೋಟಿ ಮೌಲ್ಯದ ಟೆಂಡರ್ ಮೂಲಕ ಪ್ರಾಯೋಜಕತ್ವ ಪಡೆದಿದ್ದು 1 ವರ್ಷದ ಒಪ್ಪಂದ ಅವಧಿ ಇದ್ದು ಮಾರ್ಚ್ 28ರಿಂದ ಆರಂಭವಾಗುವ IPL ಜೊತೆ ಜಾರಿಗೆ ಬರಲಿದೆ. ಬೆಂಗಳೂರು ಮಾತ್ರವಲ್ಲದೆ RCB ಆಡಲಿರುವ ಎಲ್ಲಾ ಮೈದಾನಗಳಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಮಾಡಲಾಗುತ್ತದೆ.
ಪ್ರಮುಖ ಆಟಗಾರಾರ ಮೂಲಕ ಬ್ರ್ಯಾಂಡ್ ಪ್ರಚಾರ: ಈ ಒಪ್ಪಂದದ ಭಾಗವಾಗಿ ಆರ್‌ಸಿಬಿ ತಂಡದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ರಜತ್ ಪಟೀದಾರ್ ಮತ್ತು ದೇವದತ್ ಪಡಿಕಲ್ ಅವರ ಭಾವಚಿತ್ರಗಳನ್ನು ನಂದಿನಿ ಬ್ರ್ಯಾಂಡ್ ಉತ್ಪನ್ನಗಳ ಪ್ಯಾಕೇಜಿಂಗ್‌ಗಳಲ್ಲಿ ಬಳಸಲಾಗುತ್ತದೆ. ಇವರ ಭಾವಚಿತ್ರಗಳು ನಂದಿನಿ ಉತ್ಪನ್ನಗಳ ಪ್ಯಾಕೇಜಿಂಗ್ ಮೇಲೆ ಕಾಣಿಸಿಕೊಳ್ಳಲಿವೆ. ಆದರೆ RCB ಜೆರ್ಸಿ ಅಥವಾ ಕ್ಯಾಪ್ ಮೇಲೆ KMF ಲೋಗೋ ಇರೋದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ರಾಜಕೀಯ & ಸಹಕಾರಿ ವಲಯದ ಪ್ರತಿಕ್ರಿಯೆ: ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಪ್ರತಿಕ್ರಿಯೆ ನೀಡಿದ್ದು “ಇದು ನಮ್ಮ ನಂದಿನಿಯ ಹೊಸ ಅಧ್ಯಾಯ. RCB ಜೊತೆಗೆ ಕೈಜೋಡಿಸುವ ಮೂಲಕ ನಂದಿನಿ ಬ್ರ್ಯಾಂಡ್ ಅನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ಇದು.” ಎಂದಿದ್ದಾರೆ.
ಏಕೆ ಇದು ಮಹತ್ವದ್ದು? : ಕರ್ನಾಟಕದ ಸಹಕಾರಿ ಸಂಸ್ಥೆಯೊಂದು ಜಾಗತಿಕ ಕ್ರೀಡಾ ವೇದಿಕೆಗೆ ಪ್ರವೇಶದ ಮೂಲಕ ಸ್ಥಳೀಯ ಉತ್ಪನ್ನಗಳಿಗೆ ರಾಷ್ಟ್ರೀಯ–ಅಂತರಾಷ್ಟ್ರೀಯ ಗುರುತಿನೊಂದಿಗೆ ರೈತರಿಗೆ ಪರೋಕ್ಷ ಲಾಭ ಮತ್ತು ಮಾರುಕಟ್ಟೆ ವಿಸ್ತರಣೆ ಸಿಗಲಿದೆ.






















