SK Home Ad
Home ನಮ್ಮ ಜಿಲ್ಲೆ ಬಳ್ಳಾರಿ ನೀರಿನಲ್ಲಿ ಮುಳುಗಿ ಸಹೋದರರ ಸಾವು

ನೀರಿನಲ್ಲಿ ಮುಳುಗಿ ಸಹೋದರರ ಸಾವು

0
236

ಹರಪನಹಳ್ಳಿ: ತಂದೆ ಜೊತೆ ಈಜಲು ತೆರಳಿದ್ದ ಸಹೋದರರಿಬ್ಬರು ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಸಾವನ್ನಪ್ಪಿದ, ಇನ್ನೊಬ್ಬನನ್ನು ರಕ್ಷಿಸಿದ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲುವಾಗಲು ಗ್ರಾಮದ ಬಳಿಯ ತುಂಗಭದ್ರಾ ನದಿಯಲ್ಲಿ ಭಾನುವಾರ ಸಂಜೆ ನಡೆದಿದೆ.

ಎಂ.ಜಿ.ಮನು (19), ಎಂ.ಜಿ.ಪ್ರಜ್ವಲ್ (18) ನದಿಯಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ ಸಹೋದರರು. ಕಿರಿಯ ಪುತ್ರ ಚಿರಂಜೀವಿಯನ್ನು ತಂದೆ ಮಂಜಪ್ಪ ದಡಕ್ಕೆ ಎಳೆದು ತಂದು ರಕ್ಷಿಸಿದ್ದಾನೆ.

ಹಲುವಾಗಲು ಗ್ರಾಮದ ಮಂಜಪ್ಪ, ತನ್ನ ಮೂವರು ಮಕ್ಕಳನ್ನು ಕರೆದುಕೊಂಡು ತುಂಗಭದ್ರಾ ನದಿಯಲ್ಲಿ ಈಜಾಡಲು ತೆರಳಿದ್ದಾನೆ. ಹಿರಿಯ ಪುತ್ರ ಮನು ಹಾಗೂ ಎರಡನೇ ಪುತ್ರ ಪ್ರಜ್ವಲ್ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಕಿರಿಯ ಪುತ್ರ ಚಿರಂಜೀವಿಯನ್ನು ಮಾತ್ರ ರಕ್ಷಿಸಲು ತಂದೆ ಮಂಜಪ್ಪಗೆ ಸಾಧ್ಯವಾಗಿದೆ.

ಮನು ಒಂದನೇ ವರ್ಷದ ಬಿ.ಇ ವಿದ್ಯಾರ್ಥಿ, ಪ್ರಜ್ವಲ್ ಪಿ.ಯು ವಿದ್ಯಾರ್ಥಿ. ನದಿಯಲ್ಲಿ ಕೊಚ್ಚಿ ಹೋಗಿದ್ದ ಮೃತ ಮನು ಹಾಗೂ ಪ್ರಜ್ವಲ್‌ರ ದೇಹಗಳನ್ನು ಗೃಹರಕ್ಷಕದಳದ ಡಿ.ಚಂದ್ರಪ್ಪ ನೇತೃತ್ವದ ವೆಂಕಟೇಶ, ನಾಗರಾಜ, ಪೈಲ್ವಾನ್ ರಾಮಚಂದ್ರಪ್ಪ ತಂಡ ಹುಡುಕಿ ದಂಡೆಗೆ ತಂದಿದ್ದಾರೆ. ಹಲುವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.