SK Home Ad
Home ನಮ್ಮ ಜಿಲ್ಲೆ ಬಳ್ಳಾರಿ ರೆಡ್ಡಿ ಕುಟುಂಬದ ಅಭಿನಂದನೆ: ಲಕ್ಷ್ಮಿ ಕೈಯಲ್ಲಿ ಮೂಡಿದ ಮೋದಿ ಮದರಂಗಿ

ರೆಡ್ಡಿ ಕುಟುಂಬದ ಅಭಿನಂದನೆ: ಲಕ್ಷ್ಮಿ ಕೈಯಲ್ಲಿ ಮೂಡಿದ ಮೋದಿ ಮದರಂಗಿ

0
94

ಪ್ರಧಾನಿ ಮೋದಿಯ ಐತಿಹಾಸಿಕ ಸಾಧನೆಗೆ ವಿಶಿಷ್ಟ ಗೌರವ: ಹುಟ್ಟುಹಬ್ಬದ ಸಂಭ್ರಮದಲ್ಲಿ ಲಕ್ಷ್ಮಿ ಅರುಣಾ ಕೈಯಲ್ಲಿ ಮೂಡಿದ ಮೋದಿ ಭಾವಚಿತ್ರದ ಮದರಂಗಿ ವಿಡಿಯೋ ವೈರಲ್

ಬಳ್ಳಾರಿ: ಸ್ವತಂತ್ರ ಭಾರತದ ಇತಿಹಾಸದಲ್ಲಿ ಸತತವಾಗಿ ಅತಿ ದೀರ್ಘಾವಧಿಗೆ ಜನರಿಂದ ಚುನಾಯಿತರಾದ ಪ್ರಧಾನ ಮಂತ್ರಿಯಾಗಿ ಹೊಸ ದಾಖಲೆ ನಿರ್ಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯನ್ನು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರ ಕುಟುಂಬ ವಿಶಿಷ್ಟ ರೀತಿಯಲ್ಲಿ ಸಂಭ್ರಮಿಸಿದೆ. ಶಾಸಕ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮಿ ಅರುಣಾ ತಮ್ಮ ಹುಟ್ಟುಹಬ್ಬದ ಸಂಭ್ರಮದ ನಡುವೆಯೇ ಕೈಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರದ ಮೆಹಂದಿ (ಮದರಂಗಿ) ಬಿಡಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

ಬಳ್ಳಾರಿ ನಗರದ ತಮ್ಮ ನಿವಾಸದಲ್ಲಿ ಜನ್ಮದಿನ ಆಚರಿಸಿಕೊಂಡ ಲಕ್ಷ್ಮಿ ಅರುಣಾ, ಪ್ರಧಾನಿ ಮೋದಿಯವರ ರಾಜಕೀಯ ಪಯಣ ಮತ್ತು ಐತಿಹಾಸಿಕ ಸಾಧನೆಗೆ ಗೌರವ ಸೂಚಿಸುವ ಉದ್ದೇಶದಿಂದ ಈ ವಿಶೇಷ ಮೆಹಂದಿ ವಿನ್ಯಾಸ ಮಾಡಿಸಿಕೊಂಡಿದ್ದಾರೆ. ಅವರ ಕೈಯಲ್ಲಿ ಮೂಡಿದ ಮದರಂಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರ, ಭಾರತೀಯ ಜನತಾ ಪಕ್ಷದ ಚುನಾವಣಾ ಚಿಹ್ನೆಯಾದ ಕಮಲ, ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಕೇತ ಹಾಗೂ ‘75 ವರ್ಷ’ ಎಂಬ ವಿಶೇಷ ವಿನ್ಯಾಸಗಳು ಕಾಣಿಸಿಕೊಂಡಿವೆ.

ಇದನ್ನೂ ಓದಿ: 12 ವರ್ಷಗಳ ನಿರಂತರ ನಾಯಕತ್ವ: ಮೋದಿ ಹೆಸರಿಗೆ ಐತಿಹಾಸಿಕ ಸಾಧನೆ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ : ಲಕ್ಷ್ಮಿ ಅರುಣಾ ಕೈಯಲ್ಲಿ ಮೂಡಿದ ಈ ವಿಶಿಷ್ಟ ಮೆಹಂದಿಯ ವಿಡಿಯೋವನ್ನು ಶಾಸಕ ಗಾಲಿ ಜನಾರ್ದನ ರೆಡ್ಡಿ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಪ್ರಕಟವಾದ ಕೆಲವೇ ಸಮಯದಲ್ಲಿ ಸಾವಿರಾರು ಮಂದಿ ವೀಕ್ಷಿಸಿದ್ದು, ಬಿಜೆಪಿ ಕಾರ್ಯಕರ್ತರು ಮತ್ತು ಮೋದಿ ಅಭಿಮಾನಿಗಳು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇದರೊಂದಿಗೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೋದಿ ಸಾಧನೆಗೆ ಗೌರವ : ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಸ್ವತಂತ್ರ ಭಾರತದ ಇತಿಹಾಸದಲ್ಲಿ ಸತತವಾಗಿ ಅತಿ ದೀರ್ಘಾವಧಿಗೆ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಸತತ ಆಡಳಿತಾವಧಿಯ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ಇದನ್ನೂ ಓದಿ: IIIT ಧಾರವಾಡ ಸಾಧನೆ: ಸಿಲಿಕಾನ್ ಚಿಪ್‌ಗೆ ಸಿದ್ಧಾರೂಢರ ಹೆಸರು

ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಸತತ ಆಡಳಿತದ ದಾಖಲೆಯನ್ನೂ ಮೋದಿ ಮೀರಿಸಿದ್ದರು. ಇದೀಗ ಅತ್ಯಧಿಕ ಅವಧಿಗೆ ನಿರಂತರವಾಗಿ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮೊದಲ ಕಾಂಗ್ರೆಸ್ಸೇತರ ನಾಯಕ ಎಂಬ ವಿಶೇಷ ದಾಖಲೆಗೂ ಅವರು ಪಾತ್ರರಾಗಿದ್ದಾರೆ.

ಜನಾರ್ದನ ರೆಡ್ಡಿಯವರ ಅಭಿನಂದನೆ : ಪ್ರಧಾನಿ ಮೋದಿಯವರ ಈ ಸಾಧನೆಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಸಾಮಾಜಿಕ ಜಾಲತಾಣದ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ತಮ್ಮ ಸಂದೇಶದಲ್ಲಿ, “ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಸತತವಾಗಿ ಅತಿ ದೀರ್ಘಾವಧಿಗೆ ಜನರಿಂದ ಚುನಾಯಿತರಾದ ಪ್ರಧಾನ ಮಂತ್ರಿ ಮಾನ್ಯ ನರೇಂದ್ರ ಮೋದಿಜಿ ಅವರು ರಾಷ್ಟ್ರಸೇವೆಗೆ ತಮ್ಮ ಜೀವನವನ್ನೇ ಸಮರ್ಪಿಸಿಕೊಂಡಿದ್ದಾರೆ. ಅವರ ಪ್ರತಿಯೊಂದು ಕಾರ್ಯವೂ ಯಶಸ್ವಿಯಾಗಲಿ. ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ಇನ್ನಷ್ಟು ಶಕ್ತಿಯಿಂದ ದೇಶ ಸೇವೆಯನ್ನು ಮುಂದುವರಿಸಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇವೆ” ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಗ್ರಾಮೀಣ ಬದುಕನ್ನು ಬೆಳ್ಳಿತೆರೆಗೆ ತಂದ ನಿರ್ದೇಶಕ ಭಾರತಿರಾಜಾ ನಿಧನ

ಅಭಿಮಾನಿಗಳಿಂದ ಮೆಚ್ಚುಗೆ : ಲಕ್ಷ್ಮಿ ಅರುಣಾ ಅವರ ಈ ವಿಶಿಷ್ಟ ಮೆಹಂದಿ ವಿನ್ಯಾಸ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ. ಸಾಮಾನ್ಯವಾಗಿ ಹಬ್ಬ, ಮದುವೆ ಅಥವಾ ವಿಶೇಷ ಸಂದರ್ಭಗಳಲ್ಲಿ ಮೆಹಂದಿ ವಿನ್ಯಾಸಗಳನ್ನು ಮಾಡಿಸಿಕೊಳ್ಳುವುದು ರೂಢಿಯಾಗಿದ್ದರೂ, ರಾಷ್ಟ್ರದ ಪ್ರಧಾನ ಮಂತ್ರಿಯ ಭಾವಚಿತ್ರ ಹಾಗೂ ದೇಶಭಕ್ತಿಯ ಸಂಕೇತಗಳನ್ನು ಒಳಗೊಂಡ ವಿನ್ಯಾಸ ಗಮನ ಸೆಳೆದಿದೆ.

ಪ್ರಧಾನಿ ಮೋದಿ ಅವರ ಸಾಧನೆಯನ್ನು ಸ್ಮರಿಸುವ ಉದ್ದೇಶದಿಂದ ಮಾಡಲಾದ ಈ ವಿಶೇಷ ಮದರಂಗಿ, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ಗಳಿಸುತ್ತಿದೆ.