ಚಿತ್ರದುರ್ಗ: ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರಿಂದ ಸಿಟ್ಟಿಗೆದ್ದ ಪತಿ ಸುಹಿಲ್ ಭಾಷಾ ಎಂಬಾತ ಐವರ ಮೇಲೆ ಆ್ಯಸಿಡ್ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ನಗರದ ಮಾಳಪ್ಪನಹಟ್ಟಿ ಬಳಿ ಗುರುವಾರ ನಡೆದಿದೆ.
ರಂಜಾನ್ ಹಾಗೂ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಸಹೋದರಿ ನಿವಾಸಕ್ಕೆ ಮಕ್ಕಳೊಂದಿಗೆ ತಾಸೀನಾ ಬಾನು ಆಗಮಿಸಿದ್ದಾರೆ. ವಿಷಯ ತಿಳಿದು ಏಕಾಏಕಿ ಮನೆಗೆ ನುಗ್ಗಿದ ಪತಿ ಸುಹಿಲ್ ಜಗಳವಾಡಿದ್ದು, ಗಲಾಟೆ ಬಿಡಿಸಲು ಬಂದವರ ಮೇಲೂ ಆ್ಯಸಿಡ್ ದಾಳಿ ನಡೆಸಿ, ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.
ಆ್ಯಸಿಡ್ ದಾಳಿಗೆ ಒಳಗಾದವರನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ಬಳಿಕ ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಎಸ್.ಪಿ. ರಂಜಿತ್ ಕುಮಾರ್ ಬಂಡಾರು ಪರಿಶೀಲನೆ ನಡೆಸಿದರು.






















