Home Advertisement
Home ಸುದ್ದಿ ವಿದೇಶ ಹಾರ್ಮುಜ್ ಬಳಿ ಅಮೆರಿಕ ದಾಳಿ: ಇರಾನ್ ಕ್ಷಿಪಣಿ ತಾಣಗಳು ನಾಶ

ಹಾರ್ಮುಜ್ ಬಳಿ ಅಮೆರಿಕ ದಾಳಿ: ಇರಾನ್ ಕ್ಷಿಪಣಿ ತಾಣಗಳು ನಾಶ

0
122

19ನೇ ದಿನಕ್ಕೆ ಯುದ್ಧ: ತೈಲ ಮಾರ್ಗ ತೆರೆಯಲು ಅಮೆರಿಕದ ಭಾರೀ ದಾಳಿ

ಟೆಹ್ರಾನ್: ಇರಾನ್–ಇಸ್ರೇಲ್–ಅಮೆರಿಕ ನಡುವಿನ ಸಂಘರ್ಷ 19ನೇ ದಿನಕ್ಕೆ ಕಾಲಿಟ್ಟಿರುವ ಸಂದರ್ಭದಲ್ಲಿ, ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಂಡಿದೆ. ಜಗತ್ತಿನ ಅತ್ಯಂತ ಪ್ರಮುಖ ತೈಲ ಸಾಗಣಾ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್‌ ಜಲಸಂಧಿ (Strait of Hormuz) ಬಳಿ ಅಮೆರಿಕ ಭಾರೀ ವೈಮಾನಿಕ ದಾಳಿ ನಡೆಸಿದೆ.

ಅಮೆರಿಕ ಸೇನೆಯ ಕೇಂದ್ರ ಕಮಾಂಡ್ (United States Central Command) ಮಾಹಿತಿ ಪ್ರಕಾರ, ಇರಾನ್ ಕರಾವಳಿಯುದ್ದಕ್ಕೂ ಸ್ಥಾಪಿಸಿದ್ದ ಕ್ಷಿಪಣಿ ತಾಣಗಳ ಮೇಲೆ 5,000 ಪೌಂಡ್ ತೂಕದ “ಬಂಕರ್ ಬಸ್ಟರ್” ಬಾಂಬ್‌ಗಳನ್ನು ಸುರಿಮಳೆಗೈಯಲಾಗಿದೆ. ಈ ದಾಳಿಯ ಮುಖ್ಯ ಗುರಿ, ಜಲಸಂಧಿಯಲ್ಲಿ ಅಂತರರಾಷ್ಟ್ರೀಯ ಹಡಗು ಸಾಗಣೆಗೆ ಅಪಾಯ ಉಂಟುಮಾಡುತ್ತಿದ್ದ ಇರಾನ್‌ನ ಹಡಗು ವಿರೋಧಿ ಕ್ರೂಸ್ ಕ್ಷಿಪಣಿಗಳನ್ನು ನಾಶಪಡಿಸುವುದಾಗಿತ್ತು.

ಹಾರ್ಮುಜ್ ಜಲಸಂಧಿ ಸಂಕಷ್ಟ: ಇರಾನ್, ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಯುದ್ಧಕ್ಕೆ ಪ್ರತೀಕಾರವಾಗಿ, ವಿಶ್ವದ ಸುಮಾರು 20% ತೈಲ ಪೂರೈಕೆಯಾಗುವ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿತ್ತು. ಇದರಿಂದ ಜಾಗತಿಕ ತೈಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿ ಹಲವಾರು ರಾಷ್ಟ್ರಗಳಲ್ಲಿ ಇಂಧನ ಬಿಕ್ಕಟ್ಟು ಕಾಣಿಸಿಕೊಂಡಿತ್ತು.

ಈ ಹಿನ್ನೆಲೆ, ಜಲಮಾರ್ಗವನ್ನು ಮರು ತೆರೆಯುವ ಉದ್ದೇಶದಿಂದ ಅಮೆರಿಕ ಈ ದಾಳಿಯನ್ನು ನಡೆಸಿದೆ ಎಂದು ತಿಳಿದುಬಂದಿದೆ.

ಟ್ರಂಪ್ ಹೇಳಿಕೆ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump )ಈ ಬಗ್ಗೆ ಪ್ರತಿಕ್ರಿಯಿಸಿ, ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತಗೊಳಿಸುವುದು ಜಾಗತಿಕ ಹಿತಾಸಕ್ತಿಗಾಗಿ ಅಗತ್ಯ ಎಂದು ಹೇಳಿದ್ದಾರೆ. ನ್ಯಾಟೋ ಸೇರಿದಂತೆ ಮಿತ್ರ ರಾಷ್ಟ್ರಗಳು ಬೆಂಬಲ ನೀಡದಿದ್ದರೂ, “ವಿಶ್ವದ ಒಳಿತಿಗಾಗಿ ನಾವು ಕ್ರಮ ಕೈಗೊಳ್ಳುತ್ತೇವೆ” ಎಂದು ಅವರು ಹೇಳಿದ್ದಾರೆ.

ಜಾಗತಿಕ ಪರಿಣಾಮ:‌ ಹಾರ್ಮುಜ್ ಜಲಸಂಧಿ ಜಗತ್ತಿನ ಪ್ರಮುಖ ತೈಲ ಸಾಗಣೆ ಮಾರ್ಗವಾಗಿದ್ದು, ಇದರ ಸ್ಥಿತಿ ಜಾಗತಿಕ ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಅಮೆರಿಕದ ಈ ದಾಳಿ ಸಂಘರ್ಷವನ್ನು ಮತ್ತಷ್ಟು ಗಂಭೀರ ಹಂತಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ.