ಚಿತ್ರದುರ್ಗ (ಚಳ್ಳಕೆರೆ): ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಹೆಗ್ಗೆರೆ ಸಮೀಪ ಭಾನುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ರಿಸರ್ವ್ ಸಬ್ ಇನ್ಸ್ ಪೆಕ್ಟರ್ (RSI) ಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಅಧಿಕಾರಿಗಳ ಸ್ಥಿತಿ ಚಿಂತಾಜನಕವಾಗಿರುವ ದಾರುಣ ಘಟನೆ ವರದಿಯಾಗಿದೆ.
ಬೆಂಗಳೂರಿನಿಂದ ಬಳ್ಳಾರಿಯಲ್ಲಿ ನಡೆಯಲಿದ್ದ ವಿವಾಹ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಒಟ್ಟು ಐವರು ಪೊಲೀಸ್ ಅಧಿಕಾರಿಗಳು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಬೆಳಿಗ್ಗೆ ಸುಮಾರು 7 ಗಂಟೆ ಸುಮಾರಿಗೆ ಹೆಗ್ಗೆರೆ ಸಮೀಪದ ಪ್ರಕಾಶ್ ಸ್ಪಾಂಜ್ ಐರನ್ ಕಂಪನಿ ಬಳಿ ಬರುತ್ತಿದ್ದಂತೆ ಈ ದುರ್ಘಟನೆ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಮೂವರು ರಿಸರ್ವ್ ಸಬ್ ಇನ್ಸ್ ಪೆಕ್ಟರ್‌ಗಳಾದ ಮಂಜುನಾಥ್, ಅಂಬರೀಷ್ ಮತ್ತು ಸಚಿನ್ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರು ಅಧಿಕಾರಿಗಳಾದ ಪಿ.ಎಸ್.ಐ (PSI) ಈಶ್ವರ್ ಹಾಗೂ ಆರ್.ಎಸ್.ಐ (RSI) ಮಹಾಂತೇಶ್ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ಮುಂಜಾನೆಯ ಪ್ರಯಾಣವಾಗಿದ್ದರಿಂದ ಕಾರು ಚಾಲಕನಿಗೆ ನಿದ್ದೆಯ ಮಂಪರು ಆವರಿಸಿದೆ. ಇದರಿಂದಾಗಿ ನಿಯಂತ್ರಣ ತಪ್ಪಿದ ಕಾರು, ಅದೇ ಮಾರ್ಗವಾಗಿ ಹೋಗುತ್ತಿದ್ದ ಲಾರಿಯ ಹಿಂಭಾಗಕ್ಕೆ ಅತಿ ವೇಗವಾಗಿ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.
ಗಾಯಾಳುಗಳಲ್ಲಿ ಒಬ್ಬರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದ್ದು, ಕೂಡಲೇ ಅವರನ್ನು ಹೆಚ್ಚಿನ ತುರ್ತು ಚಿಕಿತ್ಸೆಗಾಗಿ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಬ್ಬ ಗಾಯಾಳುವಿಗೂ ಸಹ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ವಿಷಯ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಚಳ್ಳಕೆರೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ನಿಖರ ಕಾರಣಗಳ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.





















