ಶಿರಸಿ: ಸಾಮಾಜಿಕ ಜಾಲತಾಣದ ದುಷ್ಪರಿಣಾಮವಾಗಿ ಅನೇಕ ಕಡೆ ಮಕ್ಕಳು ಇದರ ವ್ಯಾಮೋಹಕ್ಕೆ ಬಲಿಯಾಗುತ್ತಿದ್ದಾರೆ. ಮಕ್ಕಳು ಓದು-ಆಟ ಪಾಠಗಳಿಗಿಂತ ಹೆಚ್ಚು ಇದರ ಮೋಡಿಗೆ ಒಳಗಾಗಿ ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ.
ಇಂತಹದ್ದೇ ಒಂದು ಅನಾಹುತ ಶಿರಸಿಯಲ್ಲಿ ನಡೆದಿದೆ. ಪರೀಕ್ಷಾ ಸಮಯದಲ್ಲಿ ಟಿವಿ, ಮೊಬೈಲ್ ನೋಡಬೇಡ ಎಂದು ಮಗನಿಗೆ ಬುದ್ಧಿ ಹೇಳಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದುರಂತ ಗಣೇಶ ನಗರದಲ್ಲಿ ನಡೆದಿದೆ.
ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಶುಭಂ ನಾಗೇಶ ನಾಯ್ಕ್ (15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದಾನೆ. ಮೊಬೈಲ್, ಟಿವಿ ನೋಡುತ್ತಿದ್ದ ಮಗನಿಗೆ ಬೇಡ, ಪರೀಕ್ಷೆಗೆ ಓದಿಕೊ ಎಂದು ತಾಯಿ ಬುದ್ಧಿಮಾತು ಹೇಳಿದ್ದಾಳೆ. ಮಗನು ತಾಯಿಗೆ ಎದುರುತ್ತರ ಕೊಟ್ಟಿದ್ದರಿಂದ ತಾಯಿ ಗದರಿಸಿದ್ದಾಳೆ.
ಈ ವಿಚಾರವಾಗಿ ಮನನೊಂದು ತಂದೆ, ತಾಯಿ ಮನೆಯಲ್ಲಿ ಇರದ ಸಮಯದಲ್ಲಿ ನೇಣಿಗೆ ಶರಣಾದ ವಿದ್ಯಾರ್ಥಿಯನ್ನು ತಕ್ಷಣ ಟಿಎಸ್‌ಎಸ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.























