ಮುಂಬೈ: ಅಹಮದಾಬಾದ್‌ನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಮಣಿಸಿ ಸತತ ಎರಡನೇ ಮತ್ತು ಒಟ್ಟಾರೆ ಮೂರನೇ ಬಾರಿ ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದುಕೊಂಡ ಭಾರತ ತಂಡದ ಐತಿಹಾಸಿಕ ಸಾಧನೆಗೆ ರಿಲಯನ್ಸ್ ಫೌಂಡೇಶನ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಎಂ. ಅಂಬಾನಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ʻಈ ಚಾರಿತ್ರಿಕ ಗೆಲುವು ಶತಕೋಟಿಗೂ ಅಧಿಕ ಹೃದಯಗಳು ಹೆಮ್ಮೆ ಮತ್ತು ಸಂತೋಷದಿಂದ ಮಿಡಿಯುವಂತೆ ಮಾಡಿದೆ. ಐಸಿಸಿ ಪುರುಷರ ಟಿ20 ವಿಶ್ವಕಪ್ ಟ್ರೋಫಿ ಎತ್ತಿಹಿಡಿದ ಮತ್ತು ಟೂರ್ನಿಯ ಇತಿಹಾಸದಲ್ಲೇ ಮೂರು ಬಾರಿ ಪ್ರಶಸ್ತಿ ಗೆದ್ದುಕೊಂಡ ಮೊದಲ ತಂಡವೆಂಬ ಸಾಧನೆ ಮಾಡಿರುವ ಟೀಮ್ ಇಂಡಿಯಾಗೆ ಹೃತ್ಪೂರ್ವಕ ಅಭಿನಂದನೆಗಳು’ ಎಂದು ನೀತಾ ಅಂಬಾನಿ ಹೇಳಿದ್ದಾರೆ.
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ, 5 ವಿಕೆಟ್‌ಗೆ 255 ರನ್ ಕಲೆಹಾಕಿತು. ಇದು ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ತಂಡವೊಂದು ದಾಖಲಿಸಿದ ಗರಿಷ್ಠ ಮೊತ್ತವೆನಿಸಿದೆ. ಸಂಜು ಸ್ಯಾಮ್ಸನ್ (89), ಇಶಾನ್ ಕಿಶನ್ (54) ಮತ್ತು ಅಭಿಷೇಕ್ ಶರ್ಮ (52) ಬಿರುಸಿನ ಅರ್ಧಶತಕದಾಟ ಭಾರತಕ್ಕೆ ರನ್ ಮಳೆ ಹರಿಸಲು ನೆರವಾಯಿತು.
ಪ್ರತಿಯಾಗಿ ಜಸ್ಪ್ರೀತ್ ಬುಮ್ರಾ (15ಕ್ಕೆ 3 ವಿಕೆಟ್) ಮತ್ತು ಅಕ್ಷರ್ ಪಟೇಲ್ (27ಕ್ಕೆ 3 ವಿಕೆಟ್) ಮಾರಕ ಬೌಲಿಂಗ್ ದಾಳಿಗೆ ಕುಸಿದ ನ್ಯೂಜಿಲೆಂಡ್ ತಂಡ 19 ಓವರ್‌ಗಳಲ್ಲಿ 156 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಶರಣಾಯಿತು. ಭಾರತ ಈ ಮುನ್ನ 2007ರಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತು 2024ರಲ್ಲಿ ರೋಹಿತ್ ಶರ್ಮ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದುಕೊಂಡಿತ್ತು.
ʻನಮ್ಮ ಉತ್ಸಾಹಭರಿತ ಅಭಿಮಾನಿಗಳ ಎದುರು, ತವರು ನೆಲದಲ್ಲಿ ಇದನ್ನು ಸಾಧಿಸಿರುವುದು ಈ ವಿಜಯವನ್ನು ಇನ್ನಷ್ಟು ವಿಶೇಷಗೊಳಿಸಿದೆ. ನಿರ್ಭೀತ ಮನೋಭಾವ, ಅಸಾಧಾರಣ ಧೈರ್ಯ ಮತ್ತು ಅಚಲ ನಂಬಿಕೆಯೊಂದಿಗೆ ನಮ್ಮ ಆಟಗಾರರು ಭಾರತದ ನೀಲಿ ಜೆರ್ಸಿಯ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದರು. ಸೂರ್ಯಕುಮಾರ್ ಯಾದವ್ ಬಳಗವನ್ನು ನರೇಂದ್ರ ಮೋದಿ ಸ್ಟೇಡಿಯಂನ ಪ್ರೇಕ್ಷಕರ ಸ್ಟ್ಯಾಂಡ್‌ಗಳಿಂದ, ತಮ್ಮ ಮನೆಗಳಿಂದ ಮತ್ತು ಪ್ರಪಂಚದ ಎಲ್ಲ ಮೂಲೆಯಿಂದಲೂ ಹುರಿದುಂಬಿಸಿದ ಪ್ರತಿಯೊಬ್ಬ ಭಾರತೀಯನಿಗೂ ಈ ಗೆಲುವು ಸೇರಿದೆ. ಈ ವಿಜಯದೊಂದಿಗೆ ತ್ರಿವರ್ಣ ಧ್ವಜವು ಇನ್ನಷ್ಟು ಎತ್ತರದಲ್ಲಿ ಮತ್ತು ಪ್ರಕಾಶಮಾನವಾಗಿ ಹಾರಾಡುತ್ತಿದೆ. ಇಡೀ ದೇಶ ಈ ಐತಿಹಾಸಿಕ ಗೆಲುವನ್ನು ಅಪಾರ ಹೆಮ್ಮೆ ಮತ್ತು ಸಂತೋಷದಿಂದ ಆಚರಿಸುತ್ತಿದೆ. ಇಂಥ ಕ್ಷಣಗಳು ಒಂದು ರಾಷ್ಟ್ರವನ್ನು ಒಂದುಗೂಡಿಸುವ ಮತ್ತು ಭಾರತಕ್ಕಾಗಿ ದೊಡ್ಡ ಕನಸು ಕಾಣಲು ಯುವ ಪೀಳಿಗೆಯನ್ನು ಪ್ರೇರೇಪಿಸುವ ಕ್ರೀಡೆಯ ಶಕ್ತಿಯನ್ನು ನಮಗೆ ನೆನಪಿಸುತ್ತಿವೆ’ ಎಂದು ನೀತಾ ಅಂಬಾನಿ ಹೇಳಿದ್ದಾರೆ.























