Home Advertisement
Home ಸುದ್ದಿ ರಾಜ್ಯ ಶೈಕ್ಷಣಿಕ ದೌರ್ಜನ್ಯ ತಡೆಯಲು ‘ರೋಹಿತ್ ವೇಮುಲ ಕಾಯ್ದೆ’

ಶೈಕ್ಷಣಿಕ ದೌರ್ಜನ್ಯ ತಡೆಯಲು ‘ರೋಹಿತ್ ವೇಮುಲ ಕಾಯ್ದೆ’

0
146

ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ ಪಾಠ: ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘ ಚುನಾವಣೆ

ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ ದಾಖಲೆಯ 17ನೇ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕ್ಷಣ ಕ್ಷೇತ್ರಕ್ಕೆ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ, ಹೊಣೆಗಾರಿಕೆ ಹಾಗೂ ಪ್ರಜಾಪ್ರಭುತ್ವ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಯನ್ನು ಮರುಪ್ರಾರಂಭಿಸಲು ಸರ್ಕಾರ ಉದ್ದೇಶಿಸಿದೆ ಎಂದು ಅವರು ತಿಳಿಸಿದ್ದಾರೆ.

ಲೈವ್ ವಿಡಿಯೋ: ನೋಡಿ Karnataka Budget 2026 LIVE | CM Siddaramaiah Budget in Karnataka Assembly | Samyukta Karnataka

90 ದಿನಗಳ ಮಾತೃತ್ವ ರಜೆ: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅತಿಥಿ ಉಪನ್ಯಾಸಕರಿಗೆ ವಿಶೇಷ ಸೌಲಭ್ಯ ನೀಡಲು ಸರ್ಕಾರ ಮುಂದಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಮಹಿಳಾ ಅತಿಥಿ ಉಪನ್ಯಾಸಕರಿಗೆ 90 ದಿನಗಳ ಮಾತೃತ್ವ ರಜೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಘೋಷಿಸಿದರು. ಈ ಕ್ರಮದಿಂದ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ಹೆಚ್ಚಿನ ಭದ್ರತೆ ಹಾಗೂ ಸಹಕಾರ ಸಿಗಲಿದೆ ಎಂದು ಅವರು ಹೇಳಿದರು.

ರೋಹಿತ್‌ ವೇಮುಲ ಕಾಯಿದೆ :ಇದರ ಜೊತೆಗೆ ವಿದ್ಯಾರ್ಥಿಗಳ ಮೇಲೆ ನಡೆಯುವ ಜಾತಿ ಆಧಾರಿತ ದೌರ್ಜನ್ಯವನ್ನು ತಡೆಯಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಹಾಗೂ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಮೇಲೆ ನಡೆಯುವ ಶೈಕ್ಷಣಿಕ ಹಾಗೂ ಸಾಮಾಜಿಕ ದೌರ್ಜನ್ಯಗಳನ್ನು ತಡೆಯುವ ಉದ್ದೇಶದಿಂದ ‘ರೋಹಿತ್‌ ವೇಮುಲ ಕಾಯಿದೆ (Rohith Vemula Act) ಅನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

ಈ ಕಾಯ್ದೆ ಜಾರಿಯಾದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ಭೇದಭಾವಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಅವಕಾಶ ದೊರೆಯಲಿದೆ. ವಿದ್ಯಾರ್ಥಿಗಳ ಮಾನಸಿಕ ಸುರಕ್ಷತೆ ಮತ್ತು ಸಮಾನ ಶಿಕ್ಷಣ ವಾತಾವರಣವನ್ನು ನಿರ್ಮಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ವಿದ್ಯಾರ್ಥಿ ಸಂಘಗಳ ಚುನಾವಣೆ: ಇದೇ ವೇಳೆ ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸಲು ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆಯನ್ನು ನಡೆಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಕ್ರಮದಿಂದ ವಿದ್ಯಾರ್ಥಿಗಳು ಆಡಳಿತಾತ್ಮಕ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತುಕೊಳ್ಳಲು ಸಹಕಾರಿಯಾಗಲಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.

ರಾಜ್ಯ ಸರ್ಕಾರದ ಈ ಹೊಸ ಯೋಜನೆಗಳು ಶಿಕ್ಷಣ ಕ್ಷೇತ್ರದಲ್ಲಿ ಸಮಾನತೆ, ಸುರಕ್ಷತೆ ಮತ್ತು ಅವಕಾಶಗಳನ್ನು ಹೆಚ್ಚಿಸುವತ್ತ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗುತ್ತಿದೆ.

“ಕರ್ನಾಟಕ ಬಜೆಟ್ 2026 ಕುರಿತ ಇನ್ನಷ್ಟು ಪ್ರಮುಖ ಘೋಷಣೆಗಳ ಅಪಡೆಟ್‌ಗಾಗಿ ನಮ್ಮೊಂದಿಗೆ ಮುಂದುವರಿಯಿರಿ.”