ದಾಂಡೇಲಿ (ಉತ್ತರ ಕನ್ನಡ): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026–27ನೇ ಸಾಲಿನ ಕರ್ನಾಟಕ ರಾಜ್ಯ ಬಜೆಟ್ ಅನ್ನು ಮಾರ್ಚ್ 6, ಶುಕ್ರವಾರದಂದು ವಿಧಾನಸೌಧದಲ್ಲಿ ಮಂಡಿಸಲಿದ್ದಾರೆ. ಹಣಕಾಸು ಸಚಿವರ ಜವಾಬ್ದಾರಿಯನ್ನೂ ನಿರ್ವಹಿಸುತ್ತಿರುವ ಅವರು ಇದು 17ನೇ ಬಾರಿ ಬಜೆಟ್ ಮಂಡಿಸುವ ಮೂಲಕ ದಾಖಲೆಯನ್ನು ನಿರ್ಮಿಸಿದ್ದಾರೆ.
ರಾಜ್ಯದ ಸುದೀರ್ಘ ಅವಧಿಗೆ ಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸುತ್ತಿರುವ ಸಿದ್ದರಾಮಯ್ಯ ಅವರ ಬಜೆಟ್ ಮಂಡನೆಗೆ ಈ ಬಾರಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಜನತೆಗೆ ಬಜೆಟ್ ಮಾಹಿತಿ ನೇರವಾಗಿ ತಲುಪಿಸುವ ಉದ್ದೇಶದಿಂದ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ನೇರ ಪ್ರಸಾರ ವ್ಯವಸ್ಥೆ ಕಲ್ಪಿಸಲಾಗಿದೆ.
230 ಬಸ್ ನಿಲ್ದಾಣಗಳಲ್ಲಿ LED ಪರದೆಗಳ ಮೂಲಕ ಪ್ರಸಾರ: ಈ ಮಹತ್ವದ ಬಜೆಟ್ ಮಂಡನೆಯ ನೇರ ಪ್ರಸಾರವನ್ನು ರಾಜ್ಯದಾದ್ಯಂತ ಆಯ್ದ 230 ಸರ್ಕಾರಿ ಬಸ್ ನಿಲ್ದಾಣಗಳಲ್ಲಿ ಇರುವ ಡಿಜಿಟಲ್ ಡಿಸ್ಪ್ಲೇ (LED) ಪರದೆಗಳ ಮೂಲಕ ಪ್ರಸಾರ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ವೃತ್ತಿ ಸೊಲ್ಯೂಷನ್ಸ್ ಲಿಮಿಟೆಡ್ ಸಂಸ್ಥೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗದೊಂದಿಗೆ ಈ ಪ್ರಸಾರವನ್ನು ಹಮ್ಮಿಕೊಂಡಿದೆ. ವಿಧಾನಸೌಧದಲ್ಲಿ ನಡೆಯುವ ಬಜೆಟ್ ಭಾಷಣ ಹಾಗೂ ಬಳಿಕ ನಡೆಯಲಿರುವ ಮುಖ್ಯಮಂತ್ರಿಗಳ ಪತ್ರಿಕಾಗೋಷ್ಠಿಯನ್ನೂ ಜನರು ಬಸ್ ನಿಲ್ದಾಣಗಳಲ್ಲೇ ವೀಕ್ಷಿಸುವ ಅವಕಾಶ ಸಿಗಲಿದೆ.
ಜನಸಾಮಾನ್ಯರಿಗೆ ನೇರ ಮಾಹಿತಿ : ಸರ್ಕಾರದ ಆಯವ್ಯಯ ಘೋಷಣೆಗಳ ಬಗ್ಗೆ ನೇರ ಮಾಹಿತಿ ಜನರಿಗೆ ತಲುಪಿಸುವುದು ಹಾಗೂ ಪಾರದರ್ಶಕತೆ ಹೆಚ್ಚಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬಜೆಟ್ ನೇರಪ್ರಸಾರ ಮಾಡುವ ಮೂಲಕ ಸರ್ಕಾರದ ಪ್ರಮುಖ ಘೋಷಣೆಗಳು, ಯೋಜನೆಗಳು ಹಾಗೂ ಅನುದಾನಗಳ ಮಾಹಿತಿ ಜನಸಾಮಾನ್ಯರಿಗೆ ಸುಲಭವಾಗಿ ಲಭ್ಯವಾಗಲಿದೆ.
ರಾಜ್ಯದ ಆರ್ಥಿಕ ಸ್ಥಿತಿ, ಹೊಸ ಯೋಜನೆಗಳು, ತೆರಿಗೆ ಬದಲಾವಣೆಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳ ಕುರಿತು ಬಜೆಟ್‌ನಲ್ಲಿ ಪ್ರಮುಖ ಘೋಷಣೆಗಳ ನಿರೀಕ್ಷೆ ಇದೆ.






















