Home Advertisement
Home ನಮ್ಮ ಜಿಲ್ಲೆ ಬಾಗಲಕೋಟೆ KRIDL ಮುಖ್ಯ ಅಭಿಯಂತರನ ಮನೆ ಮೇಲೆ ಲೋಕಾಯುಕ್ತ ದಾಳಿ

KRIDL ಮುಖ್ಯ ಅಭಿಯಂತರನ ಮನೆ ಮೇಲೆ ಲೋಕಾಯುಕ್ತ ದಾಳಿ

0
108

ಬಾಗಲಕೋಟೆ–ಬೆಂಗಳೂರು ಏಕಕಾಲದಲ್ಲಿ ಲೋಕಾಯುಕ್ತ ದಾಳಿ

ಸಂ.ಕ.ಸಮಾಚಾರ ಬಾಗಲಕೋಟೆ: ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ (KRDCL) ಮುಖ್ಯ ಅಭಿಯಂತರ ವಸಂತ ವಾಲಪ್ಪ ನಾಯಕ ಅವರ ನಿವಾಸಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಬೆಂಗಳೂರು ಲೋಕಾಯುಕ್ತ ಪೊಲೀಸರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಬಾಗಲಕೋಟೆ ತಾಲೂಕಿನ ಬಿಲ್ ಕೆರೂರು ಗ್ರಾಮದಲ್ಲಿರುವ ವಸಂತ ವಾಲಪ್ಪ ನಾಯಕರ ಮನೆ, ಬಸವನಗರದಲ್ಲಿರುವ ಅವರ ತಾಯಿ ವಾಸದ ಮನೆ ಹಾಗೂ ನಗರದಲ್ಲಿನ ಪೋಸ್ಟಲ್ ಕಾಲೋನಿಯಲ್ಲಿರುವ ಸಹೋದರನ ನಿವಾಸಗಳನ್ನು ಪರಿಶೀಲಿಸಲಾಯಿತು.

ದಾಖಲೆಗಳ ಪರಿಶೀಲನೆ: ದಾಳಿ ವೇಳೆ ಅಧಿಕಾರಿಗಳು ಮಹತ್ವದ ದಾಖಲೆಗಳು, ಆಸ್ತಿ ವಿವರಗಳು ಹಾಗೂ ಡಿಜಿಟಲ್ ಸಾಧನಗಳ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಕೆಲವು ದಾಖಲೆಗಳನ್ನು ವಶಕ್ಕೆ ಪಡೆದು ಮುಂದಿನ ತನಿಖೆಗಾಗಿ ಕಚೇರಿಗೆ ಕೊಂಡೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಲೋಕಾಯುಕ್ತ ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಕುರಿತು ಬಂದಿರುವ ದೂರಿನ ಆಧಾರದಲ್ಲಿ ಈ ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಅಧಿಕೃತವಾಗಿ ಪ್ರಕರಣದ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

ಹಲವು ಗಂಟೆಗಳ ಶೋಧ ಕಾರ್ಯಾಚರಣೆ: ಬೆಳಗ್ಗಿನಿಂದ ಆರಂಭವಾದ ಶೋಧ ಕಾರ್ಯಾಚರಣೆ ಹಲವು ಗಂಟೆಗಳ ಕಾಲ ಮುಂದುವರಿಯಿತು. ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಲೋಕಾಯುಕ್ತ ತಂಡವು ಮನೆಗಳ ಪ್ರತಿಯೊಂದು ಭಾಗವನ್ನೂ ಕೂಲಂಕಷವಾಗಿ ಪರಿಶೀಲಿಸಿತು.

ತನಿಖೆ ಮುಂದುವರಿದಿರುವುದಾಗಿ ಲೋಕಾಯುಕ್ತ ಮೂಲಗಳು ತಿಳಿಸಿದ್ದು, ವಶಪಡಿಸಿಕೊಂಡಿರುವ ದಾಖಲೆಗಳ ಆಧಾರದಲ್ಲಿ ಮುಂದಿನ ದಿನಗಳಲ್ಲಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಅಗತ್ಯವಿದ್ದಲ್ಲಿ ಅಧಿಕಾರಿಯನ್ನು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಬಹುದು ಎಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಪ್ರಕಟಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.