ಚಿಕ್ಕೋಡಿ: ದ್ವಿತೀಯ ಪಿಯು ಪರೀಕ್ಷೆಗೆ ಸಜ್ಜಾಗಿದ್ದ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಸಾವನ್ನಪ್ಪಿರುವ ದುರ್ಘಟನೆ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ನಡೆದಿದೆ. ಪರೀಕ್ಷೆ ಬರೆಯಲು ಸಿದ್ಧತೆ ಮಾಡಿಕೊಂಡಿದ್ದ ವಿದ್ಯಾರ್ಥಿನಿ, ಜೀವನದ ಪರೀಕ್ಷೆಯನ್ನೇ ಮುಗಿಸಿದ ಘಟನೆ ಗ್ರಾಮದಲ್ಲಿ ಶೋಕಮಯ ವಾತಾವರಣವನ್ನು ಸೃಷ್ಟಿಸಿದೆ.
ಮೃತ ವಿದ್ಯಾರ್ಥಿನಿಯನ್ನು ಭೂಮಿಕಾ ಮಾಳಂಗಿ (17) ಎಂದು ಗುರುತಿಸಲಾಗಿದೆ. ಇಂದು ಪಿಯು ಪರೀಕ್ಷೆ ಹಿನ್ನೆಲೆ ಬೆಳಗ್ಗೆಯಿಂದಲೇ ಸಿದ್ಧತೆ ಮಾಡಿಕೊಂಡಿದ್ದ ಭೂಮಿಕಾ, ಸ್ನಾನ ಮುಗಿಸಿಕೊಂಡು ಮನೆಯಿಂದ ಹೊರಬರುತ್ತಿದ್ದ ವೇಳೆ ಅಸ್ವಸ್ಥಗೊಂಡು ಕುಸಿದುಬಿದ್ದಳು ಎಂದು ಕುಟುಂಬ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಪರೀಕ್ಷೆ ಮುಗಿಸಿ ಮನೆಗೆ ಹೊರಟ ವಿದ್ಯಾರ್ಥಿ ಅಪಘಾತದಲ್ಲಿ ಸಾವು
ತಕ್ಷಣವೇ ಪೋಷಕರು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರೂ, ಮಾರ್ಗ ಮಧ್ಯೆಯೇ ಆಕೆ ಅಸುನೀಗಿದ್ದಾಳೆ. ವೈದ್ಯರು ಪರಿಶೀಲಿಸಿದಾಗ ಹೃದಯಾಘಾತವೇ ಸಾವಿಗೆ ಕಾರಣ ಎಂದು ತಿಳಿಸಿದ್ದಾರೆ.
ಈ ಆಕಸ್ಮಿಕ ಘಟನೆ ಕುಟುಂಬಸ್ಥರು, ಬಂಧುಬಳಗ ಮತ್ತು ಗ್ರಾಮಸ್ಥರನ್ನು ದಿಗ್ಭ್ರಮೆಗೊಳಿಸಿದೆ. ಪರೀಕ್ಷೆ ಎದುರು ನೋಡುತ್ತಿದ್ದ ವಿದ್ಯಾರ್ಥಿನಿಯ ಭವಿಷ್ಯ ಕ್ಷಣಾರ್ಧದಲ್ಲಿ ಕೊನೆಗೊಂಡಿರುವುದು ಎಲ್ಲರಲ್ಲೂ ದುಃಖ ಮೂಡಿಸಿದೆ.
ಇದನ್ನೂ ಓದಿ: “ನೀರು ಕೊಡಿ, ಇಲ್ಲವೇ ಕುರ್ಚಿ ಬಿಡಿ” – ರೈತರ ಘೋಷಣೆ
ಗ್ರಾಮದಲ್ಲಿ ಶೋಕಾಚರಣೆ ವಾತಾವರಣ ಆವರಿಸಿದ್ದು, ಸಹಪಾಠಿಗಳು ಮತ್ತು ಶಿಕ್ಷಕರು ಕಣ್ಣೀರಿನಲ್ಲಿ ಮುಳುಗಿದ್ದಾರೆ.






















