ದಾವಣಗೆರೆ: ರಕ್ತ ಹೆಪ್ಪುಗಟ್ಟುವ ಪ್ರೊಟೀನ್ ಕೊರತೆಯಿಂದ ಉಂಟಾಗುವ ‘ಹಿಮೋಫಿಲಿಯಾ’ ಅಥವಾ ‘ಕುಸುಮ ರೋಗ’ದ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದೆ. ಈ ಮಾರಕ ಕಾಯಿಲೆಯೊಂದಿಗೆ ಹೋರಾಡುತ್ತಿರುವ ರೋಗಿಗಳ ಆರೋಗ್ಯಯುತ ಮತ್ತು ಸುಭದ್ರ ಬದುಕಿಗಾಗಿ ಸರ್ಕಾರವು ವಿಶೇಷ ‘ನಾನ್ ಫ್ಯಾಕ್ಟರ್ ಚಿಕಿತ್ಸೆ’ ಹಾಗೂ ಪ್ರತ್ಯೇಕ ವಿಶೇಷ ಅಂಬ್ಯುಲೆನ್ಸ್ ಸೇವೆ’ಗೆ ಅಧಿಕೃತವಾಗಿ ಹಸಿರು ನಿಶಾನೆ ತೋರಿದೆ.
ರಾಜ್ಯಾದ್ಯಂತ 2400ಕ್ಕೂ ಹೆಚ್ಚು ರೋಗಿಗಳು ಹಿಮೋಫಿಲಿಯಾ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ತುರ್ತು ಸಮಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗೆ ಅಗತ್ಯವಿರುವ ಚಿಕಿತ್ಸೆ ನೀಡುವುದು ದೊಡ್ಡ ಸವಾಲಾಗಿತ್ತು. ರೋಗಿಗಳಿಗೆ ಉಚಿತ ಚಿಕಿತ್ಸೆಗಾಗಿ ದಾವಣಗೆರೆಯ ಹಿಮೋಫಿಲಿಯಾ ತಜ್ಞ, ಪದ್ಮಶ್ರೀ ಪುರಸ್ಕೃತ ಡಾ. ಸುರೇಶ್ ಹನಗವಾಡಿ ಕಳೆದ ನಾಲ್ಕು ದಶಕಗಳಿಂದ ನಿರಂತರ ಹೋರಾಟ ನಡೆಸಿದ್ದರು. ಈ ಕುರಿತು ‘ಹಿಮೋಫಿಲಿಯಾ ತಡೆಗೆ ನಾನ್ ಫ್ಯಾಕ್ಟರ್ ಥೆರಪಿ’ ಶೀರ್ಷಿಕೆ ಅಡಿಯಲ್ಲಿ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯು 2025ರ ಆಗಸ್ಟ್ 10 ರಂದು ವಿಶೇಷ ವರದಿ ಪ್ರಕಟಿಸುವ ಮೂಲಕ ಸರ್ಕಾರದ ಗಮನ ಸೆಳೆದಿತ್ತು.
ಇದನ್ನೂ ಓದಿ: ಧಾರವಾಡದಲ್ಲಿ ಉಗ್ರಗೊಂಡ ಉದ್ಯೋಗಾಕಾಂಕ್ಷಿಗಳ ಹೋರಾಟ: ಸಚಿವರ ಭಾವಚಿತ್ರಗಳಿಗೆ ಚಪ್ಪಲಿ ಸೇವೆ
ಕೊನೆಗೂ ಎಚ್ಚೆತ್ತುಕೊಂಡಿರುವ ಸರ್ಕಾರ ಹಿಮೋಫಿಲಿಯಾ ರೋಗಿಗಳಿಗೆ ಸ್ಪಂದಿಸಿದ್ದು, ಇದೇ ಫೆ. 25ರಂದು ಬೆಂಗಳೂರಿನಲ್ಲಿ ಈ ಚಿಕಿತ್ಸಾ ಪದ್ಧತಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಇತರೆ ಗಣ್ಯರ ಸಮ್ಮುಖದಲ್ಲಿ ಸಿಎಂ ಸಿದ್ದರಾಮಯ್ಯ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
ಕುಸುಮ ರೋಗಿಗಳಿಗೆ ಪ್ರಾಣಾಂತಿಕ ರಕ್ತಸ್ರಾವ ಉಂಟಾದಾಗ ದಾವಣಗೆರೆಯ ಹಿಮೋಫಿಲಿಯಾ ಸೊಸೈಟಿ ಅದರ ವ್ಯಾಪ್ತಿಯಲ್ಲಿ ರೋಗಿಯ ಮನೆಬಾಗಿಲಿಗೆ ತೆರಳಿ ತುರ್ತು ಫ್ಯಾಕ್ಟರ್ ಥೆರಪಿ ಕೊಟ್ಟು ಜೀವ ಉಳಿಸುವ ಕೆಲಸ ಮಾಡುತ್ತಿತ್ತು. ರಾಜ್ಯದ ರೋಗಿಗಳಿಗೆ ಇದನ್ನು ವಿಸ್ತರಿಸಲು ಸೊಸೈಟಿಯ ಅಧ್ಯಕ್ಷರಾದ ಡಾ. ಸುರೇಶ್ ಹನಗವಾಡಿ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಸ್ಪಂದಿಸಿರುವ ಸರ್ಕಾರ ಫ್ಯಾಕ್ಟರ್ ಥೆರಪಿಯೊಂದಿಗೆ ತುರ್ತು ಸೇವೆಗಾಗಿ 108 ಅಂಬುಲೆನ್ಸ್ ಸೇವೆಯನ್ನು ರಾಜ್ಯಾದ್ಯಂತ ಒದಗಿಸಿರುವುದು ಕುಸುಮ ರೋಗಿಗಳಿಗೆ ಮರುಜೀವ ಸಿಕ್ಕಾಂತಾಗಿದೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಸಹಪಾಠಿಗಳ ಥಳಿತಕ್ಕೆ 10ನೇ ತರಗತಿ ವಿದ್ಯಾರ್ಥಿ ಬಲಿ
ಕ್ರಾಂತಿಕಾರಿ ಚಿಕಿತ್ಸಾ ಪದ್ಧತಿ: ಹೀಮೋಫಿಲಿಯಾ ರೋಗಿಗಳಿಗೆ ಅತ್ಯಗತ್ಯವಾಗಿರುವ ಪ್ರೊಫಿಲ್ಯಾಕ್ಸಿಸ್ ಚಿಕಿತ್ಸಾ ಪದ್ಧತಿಯನ್ನು ಈ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಚಾಲನೆ ಮಾಡಲಾಗುತ್ತಿದೆ. ರಕ್ತ ಹೆಪ್ಪುಗಟ್ಟುವ ಪ್ರೊಟೀನ್ ಕೊರತೆಯಿಂದ ಉಂಟಾಗುವ ಈ ಅನುವಂಶಿಕ ಕಾಯಿಲೆಗೆ ಈಗ ಅತ್ಯಾಧುನಿಕ ನಾನ್-ಫ್ಯಾಕ್ಟರ್ ಥೆರಪಿ ಒದಗಿಸಲು ಸರ್ಕಾರ ಮುಂದಾಗಿದೆ. ಇದು ಮಧುಮೇಹ ರೋಗಿಗಳು ಇನ್ಸುಲಿನ್ ತೆಗೆದುಕೊಳ್ಳುವ ಮಾದರಿಯಲ್ಲೇ ಇರಲಿದ್ದು, ತಿಂಗಳಿಗೊಮ್ಮೆ ಇಂಜೆಕ್ಷನ್ ಪಡೆಯುವ ಮೂಲಕ ರಕ್ತಸ್ರಾವವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದಾಗಿದೆ.
ಅಂಗವೈಕಲ್ಯಕ್ಕೆ ಬ್ರೇಕ್: ಕುಸುಮರೋಗಕ್ಕೆ ತುತ್ತಾದ ಮಕ್ಕಳು ಪದೇ ಪದೇ ರಕ್ತಸ್ರಾವಕ್ಕೆ ಒಳಗಾಗಿ ಅಂಗವೈಕಲ್ಯ ಅನುಭವಿಸುವ ಸಾಧ್ಯತೆ ಇರುತ್ತದೆ. ಸರ್ಕಾರದ ಈ ನಿರ್ಧಾರದಿಂದ ಮಕ್ಕಳು ನೋವು ಮತ್ತು ವೈಕಲ್ಯದಿಂದ ಮುಕ್ತರಾಗಿ, ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗಲಿದೆ. ಪ್ರಾಣಾಪಾಯ ತಂದೊಡ್ಡುವ ಬ್ರೇನ್ ಹೆಮರೇಜ್ನಂತಹ ಸಮಸ್ಯೆಗಳನ್ನು ತಡೆಯಲು ಇದು ಅತ್ಯಂತ ಅವಶ್ಯಕವಾಗಿದೆ.
ಪದ್ಮಶ್ರೀ ಪುರಸ್ಕೃತರು ಮತ್ತು ಹಿಮೋಫಿಲಿಯಾ ಸೊಸೈಟಿ ಅಧ್ಯಕ್ಷರಾಗಿರುವ ಡಾ. ಸುರೇಶ್ ಹನಗವಾಡಿ ಮಾತನಾಡಿ, “ಹಿಮೋಫಿಲಿಯಾ ರೋಗಿಗಳಿಗೆ ರಕ್ತಸಂಬಂಧಿ ಪ್ರೊಟೀನ್‌ಗಳ ಕೊರತೆಯಿಂದ ಅಂಗವೈಕಲ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಇದಕ್ಕೆ ನಾನ್ ಫ್ಯಾಕ್ಟರ್ ಥೆರಪಿ ಮಾತ್ರ ಮದ್ದಾಗಲಿದೆ. ಇಷ್ಟು ವರ್ಷದ ಹೋರಾಟಕ್ಕೆ ಕೊನೆಗೂ ಸರ್ಕಾರ ಸ್ಪಂದಿಸಿರುವುದು ಕುಸುಮ ರೋಗಿಗಳ ಪಾಲಿಗೆ ಭರವಸೆಯ ಬೆಳಕಾಗಿದೆ” ಎಂದು ಹೇಳಿದ್ದಾರೆ.























