Home Advertisement
Home ಸಿನಿ ಮಿಲ್ಸ್ ಫೆಬ್ರವರಿ 27ಕ್ಕೆ ‘ಹಯಗ್ರೀವ’ ಬಿಡುಗಡೆ: ಟ್ರೇಲರ್‌ಗೆ ಭರ್ಜರಿ ಪ್ರತಿಕ್ರಿಯೆ

ಫೆಬ್ರವರಿ 27ಕ್ಕೆ ‘ಹಯಗ್ರೀವ’ ಬಿಡುಗಡೆ: ಟ್ರೇಲರ್‌ಗೆ ಭರ್ಜರಿ ಪ್ರತಿಕ್ರಿಯೆ

0
61

ಮಂಡ್ಯದಲ್ಲಿ ‘ಹಯಗ್ರೀವ’ ಟ್ರೇಲರ್ ಲಾಂಚ್: ವಿಜಯಲಕ್ಷ್ಮಿ ದರ್ಶನ್ ಹಾಗೂ ವಿನೀಶ್ ದರ್ಶನ್ ಸಾಥ್

ನಟ ಧನ್ವೀರ್ ಗೌಡ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಹಯಗ್ರೀವ’ ಫೆಬ್ರವರಿ 27ರಂದು ರಾಜ್ಯಾದ್ಯಂತ ತೆರೆ ಕಾಣಲು ಸಜ್ಜಾಗಿದೆ. ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಸಿನಿಪ್ರೇಕ್ಷಕರ ಗಮನ ಸೆಳೆದಿರುವ ಚಿತ್ರತಂಡ, ಇದೀಗ ಟ್ರೇಲರ್ ಬಿಡುಗಡೆ ಮಾಡಿ ಮತ್ತಷ್ಟು ಕುತೂಹಲ ಮೂಡಿಸಿದೆ.

ಮಂಡ್ಯದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ನಟ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್‌ ಟ್ರೇಲರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವಿನೀಶ್, ಚಿಕ್ಕಣ್ಣ ಹಾಗೂ ಗಿಲ್ಲಿ ನಟ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

“ಧನ್ವೀರ್ ನಮ್ಮ ಕುಟುಂಬದವರು” – ವಿಜಯಲಕ್ಷ್ಮಿ: “ಧನ್ವೀರ್ ನಮ್ಮ ಕುಟುಂಬದಲ್ಲಿ ಒಬ್ಬರು. ಈ ಸಿನಿಮಾಕ್ಕೆ ಅವರು ಸಾಕಷ್ಟು ಶ್ರಮ ವಹಿಸಿದ್ದಾರೆ. ಎಲ್ಲರೂ ‘ಹಯಗ್ರೀವ’ ಚಿತ್ರವನ್ನು ಥಿಯೇಟರ್‌ನಲ್ಲಿ ನೋಡಿ ಬೆಂಬಲ ಸೂಚಿಸಿ. ದರ್ಶನ್ ಚೆನ್ನಾಗಿದ್ದಾರೆ. ಇಷ್ಟು ಕಷ್ಟದಲ್ಲೂ ಮಾನಸಿಕವಾಗಿ ಬಹಳ ಸ್ಟ್ರಾಂಗ್ ಆಗಿದ್ದಾರೆ. ಅದಕ್ಕೆ ಅಭಿಮಾನಿಗಳೇ ಕಾರಣ,” ಎಂದು ವಿಜಯಲಕ್ಷ್ಮಿ ಹೇಳಿದರು.

“ಉಸಿರು ಇರುವವರೆಗೆ ದರ್ಶನ್ ಅಣ್ಣನ ಅಭಿಮಾನಿ” – ಧನ್ವೀರ್ : “ನನ್ನ ಮೊದಲ ಸಿನಿಮಾದಿಂದಲೂ ನೀವು ಸಾಕಷ್ಟು ಸಪೋರ್ಟ್ ಮಾಡಿದ್ದೀರಿ. ಈ ಚಿತ್ರವನ್ನೂ ಥಿಯೇಟರ್‌ನಲ್ಲಿ ನೋಡಿ ಹರಸಿ. ಉಸಿರು ಇರುವವರೆಗೆ ದರ್ಶನ್ ಅಣ್ಣನ ಅಭಿಮಾನಿಯಾಗಿಯೇ ಇರುತ್ತೇನೆ,” ಎಂದು ಧನ್ವೀರ್ ಗೌಡ ಅಭಿಮಾನಿಗಳಿಗೆ ಮನವಿ ಮಾಡಿದರು.

ಡಿ ಬಾಸ್ ಗ್ರೀನ್ ಸಿಗ್ನಲ್ ಬಳಿಕ ಬಿಡುಗಡೆ : ನಿರ್ಮಾಪಕ ಸಮೃದ್ಧಿ ಮಂಜುನಾಥ್ ಮಾತನಾಡಿ, “ಕಳೆದ ಒಂದು ವರ್ಷದಿಂದ ಚಿತ್ರ ಬಿಡುಗಡೆಗೆ ಯೋಜನೆ ಮಾಡುತ್ತಿದ್ದೇವೆ. ಆದರೆ ಡಿ ಬಾಸ್ ಇಲ್ಲದ ಕಾರಣ ಬಿಡುಗಡೆ ಮುಂದೂಡಲಾಗಿತ್ತು. ಇದೀಗ ಅವರಿಂದ ಗ್ರೀನ್ ಸಿಗ್ನಲ್ ಸಿಕ್ಕಿರುವುದರಿಂದ ಫೆಬ್ರವರಿ 27ರಂದು ಬಿಡುಗಡೆ ಮಾಡುತ್ತಿದ್ದೇವೆ,” ಎಂದರು.

ದೊಡ್ಡ ಮೊತ್ತಕ್ಕೆ ವಿತರಣಾ ಹಕ್ಕು : ಈವರೆಗೆ ಧನ್ವೀರ್ ನಟನೆಯ ಸಿನಿಮಾಗಳಿಗಿಂತ ‘ಹಯಗ್ರೀವ’ ಚಿತ್ರದ ವಿತರಣಾ ಹಕ್ಕುಗಳು ಬೃಹತ್ ಮೊತ್ತಕ್ಕೆ ಮಾರಾಟವಾಗಿರುವುದು ವಿಶೇಷ. ಬೆಂಗಳೂರು ಕುಮಾರ್ ಫಿಲಂಸ್ ಸಂಸ್ಥೆ ಡಿಸ್ಟ್ರಿಬ್ಯೂಷನ್ ರೈಟ್ಸ್ ಪಡೆದುಕೊಂಡಿದ್ದು, ಕರ್ನಾಟಕದಾದ್ಯಂತ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ತಾರಾಗಣ ಹಾಗೂ ತಾಂತ್ರಿಕ ಬಳಗ : ಕೆವಿಸಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಪದ್ಮಾ ಸಮೃದ್ಧಿ ಮಂಜುನಾಥ್ ಬಂಡವಾಳ ಹೂಡಿದ್ದಾರೆ. ವಿರಾಟ್ ಸಾಯಿ ಕ್ರಿಯೇಷನ್ಸ್ ಅರ್ಪಿಸುತ್ತಿರುವ ಚಿತ್ರಕ್ಕೆ ಮಹೇಶ್ ಗೌಡ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಧನ್ವೀರ್‌ಗೆ ಜೋಡಿಯಾಗಿ ಸಂಜನಾ ಆನಂದ್ ಅಭಿನಯಿಸಿದ್ದಾರೆ. ಸಾಧುಕೋಕಿಲ, ಶರತ್ ಲೋಹಿತಾಶ್ವ, ರಮೇಶ್ ಭಟ್, ಅಶ್ವಿನಿ ಗೌಡ, ಶೋಭರಾಜ್, ಸಂಗೀತಾ, ಕೃಷ್ಣ ಹೆಬ್ಬಾಳೆ ಹಾಗೂ ಗಿಲ್ಲಿ ನಟ ಇತರರು ತಾರಾಗಣದಲ್ಲಿ ಇದ್ದಾರೆ. ಡಾ. ಕೆ. ರವಿವರ್ಮ, ಡಿಫರೆಂಟ್ ಡ್ಯಾನಿ ಹಾಗೂ ಅರ್ಜುನ್ ರಾಜ್ ಸಾಹಸ ಸಂಯೋಜಿಸಿದ್ದು, ಶೈಲೇಶ್ ಕುಮಾರ್ ಮತ್ತು ಚೇತನ್ ಸಿದ್ ಸಂಭಾಷಣೆ ಬರೆದಿದ್ದಾರೆ. ಗಿರೀಶ್ ಆರ್ ಗೌಡ ಛಾಯಾಗ್ರಹಣ ಹಾಗೂ ಕೆ.ಎಂ. ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ.

ಆಕ್ಷನ್–ಭಾವನಾತ್ಮಕ ಮಿಶ್ರಣ : ಕಥೆ, ಆಕ್ಷನ್ ಹಾಗೂ ಭಾವನಾತ್ಮಕ ಅಂಶಗಳ ಸಂಯೋಜನೆಯೊಂದಿಗೆ ‘ಹಯಗ್ರೀವ’ ಈಗಾಗಲೇ ಸಿನಿಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಟ್ರೇಲರ್ ಬಿಡುಗಡೆಯಾದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುಂಗಡ ಬುಕ್ಕಿಂಗ್ ಕೂಡ ಕೆಲವು ನಗರಗಳಲ್ಲಿ ಆರಂಭಗೊಂಡಿದೆ ಎನ್ನಲಾಗಿದೆ.

Previous articleಕೇಂದ್ರದ ಮಾಜಿ ಸಚಿವ, ರಾಜಕೀಯ ಚಾಣಕ್ಯ ಮುಕುಲ್ ರಾಯ್ ನಿಧನ
Next articleರಾಷ್ಟ್ರಪತಿ ಭವನದಲ್ಲಿ ಲುಟ್ಯೆನ್ಸ್ ಪ್ರತಿಮೆ ಬದಲು ರಾಜಾಜಿ ಪ್ರತಿಮೆ