ಗದಗ: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಚಿನ್ನ ದೊರೆತ ಬೆನ್ನಲ್ಲಿಯೇ ಕಳೆದ ನಾಲ್ಕು ವರ್ಷಗಳ ಹಿಂದೆ ಪತ್ತೆಯಾಗಿತ್ತು ಎನ್ನಲಾದ ಪ್ರಕರಣಕ್ಕೆ ಮರು ಜೀವ ಬಂದಿದ್ದು, ಹಿಂದೆ ಪತ್ತೆಯಾಗಿರುವ ಚಿನ್ನ ನಕಲಿಯೆಂದು ಸಾಬೀತಾಗಿದೆ.
ನಿಧಿ ಆಸೆ ತೋರಿಸಿ ಧಾರವಾಡ, ಗದಗ ಸೇರಿದಂತೆ ವಿವಿಧಡೆ ಜನರಿಂದ ಲಕ್ಷಾಂತರ ಹಣ ಪೀಕಿ ಪರಾರಿಯಾಗಿದ್ದ ಹಜರತ್ ಮೌಲ್ವಿ ಎಂಬಾತ ಈಗ ಗದಗ ಗ್ರಾಮೀಣ ಪೊಲೀಸರ ಅತಿಥಿಯಾಗಿದ್ದಾನೆ.
ಏನಿದು ಘಟನೆ?: ಉತ್ತರಾಖಂಡದ ಕಾಶಿಪುರದ ಹಜರತ್ ಮೌಲ್ವಿ ಎಂಬಾತ 2022 ರಲ್ಲಿ ಲಕ್ಕುಂಡಿ ಗ್ರಾಮದಲ್ಲಿ ನಿಧಿ ತೆಗೆಯುವುದರಲ್ಲಿ ನಿಪುಣ ಎಂದು ಹೇಳಿಕೊಂಡು ಗ್ರಾಮಸ್ಥರಿಗೆ ಪರಿಚಯವಾಗಿದ್ದಾನೆ. ನಂತರ ಜನರಿಂದ ಹಣ ಪಡೆದುಕೊಂಡು ನಿಧಿ ತೆಗೆದುಕೊಡಲು ಒಪ್ಪಿಕೊಂಡಿದ್ದಾನೆ. ಇದಕ್ಕಾಗಿ ಗದಗನಲ್ಲಿ ತಾಮ್ರದ ಹಂಡೆ ಖರೀದಿಸಿ ಅದರಲ್ಲಿ ನಕಲಿ ಚಿನ್ನದ ಬಿಸ್ಕೀಟ್‌ಗಳು, ಚಿನ್ನದ ಬಣ್ಣ ಹೋಲುವಂತಹ ವಸ್ತುಗಳನ್ನು ಹಾಕಿ, ಇದನ್ನು ಭೂಮಿಯಿಂದ ತೆಗೆದಿದ್ದಾಗಿ ಬುರುಡೆ ಬಿಟ್ಟಿದ್ದಾನೆ. ಆದರೆ, ಹಂಡೆದಲ್ಲಿದ್ದ ಚಿನ್ನವನ್ನು ನೀಡಲು ಮತ್ತೇ ಹಣಕ್ಕೆ ಬೇಡಿಕೆಯಿಟ್ಟಾಗ ಜನ ಹಣ ನೀಡಲು ನಿರಾಕರಿಸಿದ್ದಾರೆ. ಆಗ ಮೌಲ್ವಿ ಹಂಡೆಯನ್ನು ಕಾಲಿನಿಂದ ಒದ್ದು, ಹಂಡೆಯಲ್ಲಿದ್ದ ಚಿನ್ನದಾಭರಣ ಇದ್ದಿಲುಗಳಾಗಿ ಪರಿವರ್ತನೆಯಾಗಿವೆ. ಇನ್ನು ನೀವು ಎಷ್ಟು ಹಣ ನೀಡಿದರೂ ಚಿನ್ನ ವಾಪಸ್ಸು ಬರುವದಿಲ್ಲ ಎಂದು ಹೇಳಿ ಪರಾರಿಯಾಗಿದ್ದ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ರಣಜಿ ಫೈನಲ್: ಕರ್ನಾಟಕ ತಂಡ ಪ್ರಕಟ-ಭರ್ಜರಿ ಸಿದ್ಧತೆ
ಈ ಕುರಿತಂತೆ ಧಾರವಾಡದಲ್ಲಿ 2022ರಲ್ಲಿ ಪ್ರಕರಣ ದಾಖಲಾಗಿತ್ತಾದರೂ ಸಾಕ್ಷ್ಯಾಧಾರದ ಕೊರತೆಯಿಂದ ತನಿಖೆ ನಡೆಸಲು ಸಾಧ್ಯವಾಗಿರಲಿಲ್ಲ. ಈ ಪ್ರಕರಣದ ಬಗ್ಗೆ ಗದಗನಲ್ಲಿ ಮತ್ತೆ ವಿಡಿಯೋ ಸಮೇತ ಪೊಲೀಸರಿಗೆ ದೂರು ಸಲ್ಲಿಸಿದಾಗ ಪ್ರಕರಣಕ್ಕೆ ಮರುಜೀವ ಬಂದಿದ್ದು, ಪೊಲೀಸರು ಉತ್ತರ ಪ್ರದೇಶದಲ್ಲಿ ಆರೋಪಿ ಹಜರತ್ ಮಾಲ್ವಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ನಿಜ ಸಂಗತಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ಕುಂಡಿ ಗ್ರಾಮದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.























