ಬೆಂಗಳೂರು: ಬಾಗಲಕೋಟೆ ಬಸವಣ್ಣನ ಐಕ್ಯ ನಾಡು, ಇಲ್ಲಿ ಎಲ್ಲ ಸಮಾಜ ಸಾಮರಸ್ಯದಿಂದ ಇರುವಂಥ ಬಾಗಲಕೋಟೆ ಜಿಲ್ಲೆ. ಇಂತಹ ಹಿನ್ನೆಲೆ ಇರುವ ಜಿಲ್ಲೆಯಲ್ಲಿ ಧಾರ್ಮಿಕ ಅಂಧರಿಗೆ ಸರ್ಕಾರದ ಆಶ್ರಯ ಸಿಗುವಂತದ್ದು ಅತ್ಯಂತ ಕೇಡಿನ ಸಂಗತಿ. ಇಲ್ಲಿ ನಡೆದಿರುವ ಘಟನೆ ಕಲ್ಲು ತೂರಾಟ ಮಾಡುವ, ಚಪ್ಪಲಿ ತೂರುವ, ಶಿವಾಜಿ ಮಹಾರಾಜರಿಗೆ ಅಗೌರವ ತೋರುವವರಿಗೆ ಈ ಸರ್ಕಾರ ಸಂಪೂರ್ಣ ಬೆಂಬಲಕ್ಕೆ ನಿಂತಿರುವುದು ಬಹಳ ಸ್ಪಷ್ಟ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಶಿವಾಜಿ ಮಹಾರಾಜ ಭಾರತ ದೇಶ ಕಂಡ ಒಬ್ಬ ಅಪ್ರತಿಮ ನಾಯಕ. ಇಡೀ ದೇಶ ಅವರನ್ನು ಗೌರವದಿಂದ ಕಾಣುತ್ತದೆ. ಅವರಿಗೆ ಕಿಡಿಗೇಡಿಗಳು ಅಪಮಾನ ಮಾಡಿರುವುದು ಅತ್ಯಂತ ಖಂಡನೀಯ. ಬಾಗಲಕೋಟೆಯ ಎಸ್ಪಿಗೆ ಕಲ್ಲೇಟು ಬಿದ್ದು ರಕ್ತ ಬೀಳುತ್ತಿರುವ ದೃಶ್ಯಗಳು ಇದ್ದರೂ ಕೂಡ ನನಗೇನು ಆಗಿಲ್ಲಾ ಅಂತ ಎಸ್ಪಿ ಹೇಳಿದ್ದಾರೆ.
ಇದನ್ನೂ ಓದಿ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಎಸ್ಪಿಗೆ ಗಾಯ
ಕಲ್ಲು ತೂರಿದವರಿಗೆ, ಚಪ್ಪಲಿ ತೂರಿದವರಿಗೆ ಇದರ ಹಿಂದೆ ಷಡ್ಯಂತ್ರ ಮಾಡಿದವರಿಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ. ನಾಮಕಾಸ್ತೆ ಬಂಧನ ತೋರಿಸುತ್ತಾರೆ. ತುಷ್ಟಿಕರಣದ ಪರಾಕಾಷ್ಟೆಗೆ ಈ ರಾಜ್ಯ ಸರ್ಕಾರ ಮುಟ್ಟಿದೆ. ಇಲ್ಲಿ ನ್ಯಾಯಕ್ಕೆ, ಧರ್ಮಕ್ಕೆ ನೀತಿಗೆ ಯಾವುದೇ ಬೆಲೆ ಇಲ್ಲ ಎಂದು ಹೇಳಿದ್ದಾರೆ.
ಕೇವಲ ತುಷ್ಟೀಕರಣ, ಭಷ್ಟಾಚಾರ, ವಿಭಜಿಸುವಕರಣಕ್ಕೆ ಮಾತ್ರ ಬೆಲೆ ಇರುವುದು ಬಹಳ ಸ್ಪಷ್ಟ. ಈ ಸರ್ಕಾರ ಆಯ್ಕೆಯಾಗಿರುವ ತಮ್ಮ ಕರ್ತವ್ಯಗಳನ್ನು ಮರೆತು ರಾಜ್ಯಕ್ಕೆ ದೀರ್ಘಕಾಲ ಹಾನಿಯಾಗುವ ಕೆಲಸ ಮಾಡುವುದನ್ನು ನೋಡಿದರೆ ಜನರು ಇದರ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯ. ಈ ಘಟನೆ ಅತ್ಯಂತ ಖಂಡನಾರ್ಹ ಎಂದು ಹೇಳಿದ್ದಾರೆ.























