Home Advertisement
Home ಸುದ್ದಿ ರಾಜ್ಯ ಸಾರಿಗೆ ಮುಷ್ಕರ ವಾಪಸ್: ಸರ್ಕಾರಕ್ಕೆ ಮತ್ತೊಂದು ಡೆಡ್‌ಲೈನ್

ಸಾರಿಗೆ ಮುಷ್ಕರ ವಾಪಸ್: ಸರ್ಕಾರಕ್ಕೆ ಮತ್ತೊಂದು ಡೆಡ್‌ಲೈನ್

0
90

ಸರ್ಕಾರದ ಭರವಸೆ ಬಳಿಕ ಮುಷ್ಕರ ಕೈಬಿಟ್ಟ ಸಾರಿಗೆ ನೌಕರರು – ನಾಳೆಯಿಂದ BMTC–KSRTC ಬಸ್ ಸಂಚಾರ ಸಾಮಾನ್ಯ

ಬೆಂಗಳೂರು: ಬೆಂಗಳೂರಿನಲ್ಲಿ ನಾಳೆಯಿಂದ ನಡೆಯಬೇಕಿದ್ದ ಸಾರಿಗೆ ಮುಷ್ಕರವನ್ನು ಸರ್ಕಾರದ ಭರವಸೆ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಹಿಂತೆಗೆದುಕೊಂಡಿದ್ದಾರೆ. ಇದರೊಂದಿಗೆ ಬಿಎಂಟಿಸಿ (BMTC), ಕೆಎಸ್‌ಆರ್‌ಟಿಸಿ (KSRTC) ಸೇರಿದಂತೆ ರಾಜ್ಯದ ಎಲ್ಲಾ ಸಾರಿಗೆ ನಿಗಮಗಳ ಬಸ್‌ಗಳು ಎಂದಿನಂತೆ ರಸ್ತೆಗಿಳಿಯಲಿವೆ.

ಇಂದು ನಗರದಲ್ಲಿರುವ ಫ್ರೀಡಂ ಪಾರ್ಕ್ನಲ್ಲಿ ನಡೆದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು.

ಇದನ್ನೂ ಓದಿ: ಭಾರತದ ಬಾಹ್ಯಾಕಾಶ ಕನಸಿಗೆ ಬಲ: ಗಗನಯಾನ ಪ್ಯಾರಾಚೂಟ್ ವಿನ್ಯಾಸ ಯಶಸ್ವಿ ಪರೀಕ್ಷೆ

ಮಾರ್ಚ್ 2ಕ್ಕೆ ಹೊಸ ಗಡುವು : ನೌಕರರ ಬೇಡಿಕೆಗಳ ಕುರಿತು ಸರ್ಕಾರದಿಂದ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಇರುವುದನ್ನೂ ಪರಿಗಣಿಸಿ ಮುಷ್ಕರ ಕೈಬಿಡಲು ಒಪ್ಪಿಗೆ ನೀಡಲಾಗಿದೆ. ಆದರೆ ಬೇಡಿಕೆ ಈಡೇರಿಕೆಗೆ ಮಾರ್ಚ್ 2ರವರೆಗೆ ಗಡುವು ನೀಡಲಾಗಿದೆ. ಆ ದಿನ ರಾಜ್ಯಾದ್ಯಂತ ಉಪವಾಸ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ.

ಬೆಂಗಳೂರು, ಹಾಸನ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲಾ ಕೇಂದ್ರಗಳಲ್ಲಿ ನೌಕರರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ ಎಂದು ಮುಖಂಡರು ತಿಳಿಸಿದ್ದಾರೆ.

ಇದನ್ನೂ ಓದಿ: AI Summit: 8 ವರ್ಷದ ರಣವೀರ್ ಸಚ್‌ದೇವ ಸ್ಪೂರ್ತಿದಾಯಕ ಭಾಷಣ

ಸ್ಥಳದಲ್ಲೇ ಆಕ್ಷೇಪ : ಜಂಟಿ ಕ್ರಿಯಾ ಸಮಿತಿ ಮುಷ್ಕರ ವಾಪಸ್ ಪಡೆದ ನಿರ್ಧಾರಕ್ಕೆ ಕೆಲವು ನೌಕರರು ಸಭೆಯಲ್ಲೇ ಆಕ್ಷೇಪ ವ್ಯಕ್ತಪಡಿಸಿದರು. “ನಮ್ಮ ಒಪ್ಪಿಗೆ ಇಲ್ಲದೇ ಮುಷ್ಕರ ಕೈಬಿಟ್ಟಿದ್ದಾರೆ” ಎಂದು ವಿರೋಧ ವ್ಯಕ್ತಪಡಿಸಿದ ಘಟನೆ ನಡೆಯಿತು. ಕೊನೆಗೆ ಸಮಿತಿ ಸದಸ್ಯರ ಮಾತಿಗೆ ಬೆಲೆ ನೀಡಿ, ಒಲ್ಲದ ಮನಸ್ಸಿನಿಂದ ಮುಷ್ಕರ ಕೈಬಿಡಲು ನೌಕರರು ಒಪ್ಪಿಗೆ ನೀಡಿದರು.

550 ಕೋಟಿ ನೀಡಿದರೆ ಮುಷ್ಕರವೇ ಇಲ್ಲ : ಜಂಟಿ ಕ್ರಿಯಾ ಸಮಿತಿ ಕಾರ್ಯದರ್ಶಿ ವಿಜಯ್ ಭಾಸ್ಕರ್ ಮಾತನಾಡಿ, “ಜನರಿಗೆ ಏಕಾಏಕಿ ತೊಂದರೆ ನೀಡುವ ಉದ್ದೇಶ ನಮ್ಮದಲ್ಲ. ಆದರೆ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಷ್ಕರ ಅನಿವಾರ್ಯ. ಇನ್ನೂ 550 ಕೋಟಿ ರೂ. ನೀಡಿದರೆ ಮುಷ್ಕರದ ಅಗತ್ಯವೇ ಇಲ್ಲ” ಎಂದು ಎಚ್ಚರಿಸಿದರು.

ಇದನ್ನೂ ಓದಿ: ಕರ್ನಾಟಕ ಜಾಗತಿಕ ಕಂಪನಿಗಳ ನೆಲೆ: AI ಪ್ರತಿಭೆಗಳ ಕೇಂದ್ರ

ಸರ್ಕಾರದ ಪ್ರತಿಕ್ರಿಯೆ : ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಪ್ರತಿಕ್ರಿಯಿಸಿ, “ಸಭೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ. ಬಂದ್ ಆಗುವುದಿಲ್ಲ ಎಂಬ ನಂಬಿಕೆಯಿದೆ. ಸಾರಿಗೆ ಸಚಿವರ ಜೊತೆ ಚರ್ಚಿಸಿ, ಶೀಘ್ರದಲ್ಲೇ ಮತ್ತೊಂದು ಸಭೆಗೆ ದಿನಾಂಕ ನಿಗದಿ ಮಾಡುತ್ತೇವೆ” ಎಂದು ತಿಳಿಸಿದ್ದಾರೆ.

ನೌಕರರ ಪ್ರಮುಖ ಬೇಡಿಕೆಗಳು: 38 ತಿಂಗಳ ಹಿಂಬಾಕಿ ವೇತನ ಬಿಡುಗಡೆ, ಸರ್ಕಾರಿ ನೌಕರರಿಗೆ ಸಮಾನ ವೇತನ, ಕಾರ್ಮಿಕರ ಮೇಲಿನ ಕಿರುಕುಳ ನಿಲ್ಲಿಸಬೇಕು, 1-1-2024ರಿಂದ ವೇತನ ಜಾರಿ ಸೇರಿದಂತೆ ಇನ್ನು ಹಲವು ಬೆಡಿಕೆಗಳನ್ನು ಇಟ್ಟಿದ್ದಾರೆ.

ಸರ್ಕಾರ ಮಾರ್ಚ್ 2ರೊಳಗೆ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ ಮುಂದಿನ ಹಂತದ ಹೋರಾಟದ ಬಗ್ಗೆ ತೀರ್ಮಾನಿಸಲಾಗುವುದು ಎಂದು ಜಂಟಿ ಕ್ರಿಯಾ ಸಮಿತಿ ತಿಳಿಸಿದೆ.

Previous articleವಿದೇಶದಲ್ಲಿ ಇನ್ನೊಬ್ಬ ಕನ್ನಡಿಗನ ನಿಗೂಢ ಸಾವು
Next articleಗದುಗಿನಲ್ಲಿ ಮತ್ತೊಂದು ದೇವರ ಮೂರ್ತಿ ಭಗ್ನ: ಭಕ್ತರ ಆಕ್ರೋಶ