Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ಅಂಕೋಲಾ: ಸರಣಿ ಅಪಘಾತ -12 ವಿದೇಶಿಗರು ಸೇರಿ 28 ಮಂದಿಗೆ ಗಾಯ

ಅಂಕೋಲಾ: ಸರಣಿ ಅಪಘಾತ -12 ವಿದೇಶಿಗರು ಸೇರಿ 28 ಮಂದಿಗೆ ಗಾಯ

0
1315

ಅಂಕೋಲಾ: ಅಂಕೋಲಾ ತಾಲೂಕಿನ ಸುಂಕಸಾಳ ಸಮೀಪ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ 12 ವಿದೇಶಿ ಪ್ರಜೆಗಳು ಸೇರಿದಂತೆ ಒಟ್ಟು 28 ಮಂದಿ ಗಾಯಗೊಂಡ ಘಟನೆ ನಡೆದಿದೆ. ಗಾಯಾಳುಗಳ ಪೈಕಿ ಎಂಟು ವಿದೇಶಿಗರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಲಾರಿ ಹಾಗೂ ಎರಡು ಖಾಸಗಿ ಬಸ್‌ಗಳ ನಡುವೆ ಈ ದುರ್ಘಟನೆ ಸಂಭವಿಸಿದೆ. ಅಂಕೋಲಾ ಮಾರ್ಗವಾಗಿ ಹುಬ್ಬಳ್ಳಿಯತ್ತ ತೆರಳುತ್ತಿದ್ದ ಲಾರಿ ಮತ್ತು ಹಂಪಿಯಿಂದ ಗೋವಾಕ್ಕೆ ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದ ಖಾಸಗಿ ಬಸ್ ನಡುವೆ ಮೊದಲು ಮುಖಾಮುಖಿ ಡಿಕ್ಕಿಯಾಗಿದೆ. ಈ ಸಂದರ್ಭದಲ್ಲಿ ಬಸ್ ಹಿಂಬದಿಯಿಂದ ಬರುತ್ತಿದ್ದ ಮತ್ತೊಂದು ಖಾಸಗಿ ಬಸ್ ಕೂಡ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಮೂರೂ ವಾಹನಗಳು ತೀವ್ರವಾಗಿ ಜಖಂಗೊಂಡಿವೆ.

ಅಪಘಾತದ ತೀವ್ರತೆಗೆ ಇಬ್ಬರು ಬಸ್ ಚಾಲಕರ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಅವರು ಕ್ಯಾಬಿನ್‌ನೊಳಗೆ ಸಿಲುಕಿಕೊಂಡಿದ್ದರು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಂಕೋಲಾ ಪೊಲೀಸರು ಮತ್ತು ಸ್ಥಳೀಯ ಸಾರ್ವಜನಿಕರು ಹರಸಾಹಸಪಟ್ಟು ಗಾಯಾಳುಗಳನ್ನು ವಾಹನಗಳಿಂದ ಹೊರತೆಗೆದರು. ಬಳಿಕ ಎಲ್ಲರನ್ನೂ ಅಂಕೋಲಾ ತಾಲೂಕು ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ.

ಅಪಘಾತದಿಂದ ಹೆದ್ದಾರಿಯ ಮಧ್ಯಭಾಗದಲ್ಲೇ ವಾಹನಗಳು ನಿಂತಿದ್ದರಿಂದ ಕೆಲಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಪರಿಣಾಮವಾಗಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಯಿತು. ಅರಬೈಲ್ ಘಟ್ಟ ಪ್ರದೇಶದಲ್ಲಿಯೂ ಸುಮಾರು ಐದು ತಾಸುಗಳ ಕಾಲ ವಾಹನಗಳು ಸಾಲುಗಟ್ಟಿ ನಿಂತಿದ್ದವು. ನಂತರ ಪೊಲೀಸರು ಹಾಗೂ ಸುಂಕಸಾಳ ಹೊರಠಾಣೆ ಸಿಬ್ಬಂದಿ ವಾಹನಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.

ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ಕುರಿತು ತನಿಖೆ ಮುಂದುವರಿದಿದೆ.

Previous articleಅಂಕಣ ಬರಹ: ಸಾಮ್ರಾಟರಿಗೆ ಕೇಳಿಸದೇ ಸೆವೆನ್ ಸಿಸ್ಟರ್ಸ್‌ ರೋದನ?
Next articleಪ್ರಸನ್ನಾನಂದ ಪುರಿ ಸ್ವಾಮೀಜಿಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು