SK Home Ad
Home ಕ್ರೀಡೆ 250 ರನ್ ಡಿಫೆಂಡ್ ಮಾಡಲಾಗದೆ ಮುಗ್ಗರಿಸಿದ ಬೌಲರ್ಸ್: ಬೌಲಿಂಗ್ ಕೋಚ್‌ಗೆ ನೇರ ಪ್ರಶ್ನೆ ಹಾಕಿದ ಗವಾಸ್ಕರ್!

250 ರನ್ ಡಿಫೆಂಡ್ ಮಾಡಲಾಗದೆ ಮುಗ್ಗರಿಸಿದ ಬೌಲರ್ಸ್: ಬೌಲಿಂಗ್ ಕೋಚ್‌ಗೆ ನೇರ ಪ್ರಶ್ನೆ ಹಾಕಿದ ಗವಾಸ್ಕರ್!

0
43

ರಾಂಚಿಯಲ್ಲಿ ನಡೆದ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 2ನೇ ಟಿ20 ಪಂದ್ಯದಲ್ಲಿ ರನ್‌ಗಳ ಮಹಾಪೂರವೇ ಹರಿದುಬಂತು. ಸಂಜು ಸ್ಯಾಮ್ಸನ್ ಅವರ ಅಬ್ಬರದ 82 ರನ್‌ಗಳ ನೆರವಿನಿಂದ ಟೀಮ್ ಇಂಡಿಯಾ 249/5 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದರೂ, ವಿಂಡೀಸ್ ಈ ಗುರಿಯನ್ನು ಕೇವಲ 18.3 ಓವರ್‌ಗಳಲ್ಲೇ ಬೆನ್ನಟ್ಟಿ ಇತಿಹಾಸ ನಿರ್ಮಿಸಿತು.

ಬರೋಬ್ಬರಿ 501 ರನ್‌ಗಳು ದಾಖಲಾದ ಈ ಪಂದ್ಯದಲ್ಲಿ ಭಾರತದ ಹೀನಾಯ ಬೌಲಿಂಗ್ ಪ್ರದರ್ಶನವನ್ನು ದಿಗ್ಗಜ ಬ್ಯಾಟರ್ ಸುನಿಲ್ ಗವಾಸ್ಕರ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಪಂದ್ಯದ ಬಳಿಕ ನೇರವಾಗಿ ಬೌಲಿಂಗ್ ಕೋಚ್‌ ಕಡೆಗೆ ಬೆರಳು ತೋರಿಸಿದ ಗವಾಸ್ಕರ್, “ಭಾರತೀಯ ಬ್ಯಾಟರ್‌ಗಳು ನಿರೀಕ್ಷೆಗಿಂತ ಹೆಚ್ಚು ರನ್ ಗಳಿಸಿಕೊಟ್ಟಿದ್ದರು, ಆದ್ದರಿಂದ ಅವರ ಮೇಲೆ ತಪ್ಪು ಹೊರಿಸಲು ಸಾಧ್ಯವೇ ಇಲ್ಲ.

ಆದರೆ ಇಬ್ಬನಿ ನೆಪ ಹೇಳಿಕೊಂಡು ಬೌಲರ್‌ಗಳು ತಮ್ಮ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲಾಗದು. ಅಸಲಿಗೆ ನಮ್ಮ ಬೌಲಿಂಗ್ ಕೋಚ್ ಈ ಬೌಲರ್‌ಗಳಿಂದ ಏನನ್ನು ನಿರೀಕ್ಷಿಸಿದ್ದರು ಮತ್ತು ಆ ಯೋಜನೆಯನ್ನು ಇವರು ಮೈದಾನದಲ್ಲಿ ಕಾರ್ಯಗತಗೊಳಿಸಿದರೇ ಎಂದು ಕೇಳುವುದು ಬಹಳ ಮುಖ್ಯ” ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

ಇದೇ ಚರ್ಚೆಯಲ್ಲಿ ಭಾಗವಹಿಸಿದ್ದ ಮಾಜಿ ವೇಗಿ ವರುಣ್ ಆರೋನ್ ನಾಯಕತ್ವದ ತಂತ್ರಗಾರಿಕೆಯನ್ನು ಟೀಕಿಸಿದರು. ಆರಂಭದಲ್ಲೇ ವಿಂಡೀಸ್‌ನ ಎರಡು ವಿಕೆಟ್ ಉರುಳಿದಾಗ ವೇಗಿಗಳ ದಾಳಿ ಮುಂದುವರಿಸುವ ಬದಲು ನಾಲ್ಕನೇ ಓವರ್‌ನಲ್ಲೇ ಅಕ್ಷರ್ ಪಟೇಲ್‌ಗೆ ಚೆಂಡು ನೀಡಿದ್ದು ದೊಡ್ಡ ಪ್ರಮಾದ ಎಂದು ಆರೋಪಿಸಿದರು.

ಶಾಯ್ ಹೋಪ್ ಕೇವಲ 45 ಎಸೆತಗಳಲ್ಲಿ ಶತಕ ಸಿಡಿಸಿ, ರುದರ್‌ಫೋರ್ಡ್ (84) ಜೊತೆಗೂಡಿ ದಾಖಲೆಯ ಚೇಸ್ ಪೂರ್ಣಗೊಳಿಸಿದ್ದು ಭಾರತೀಯ ಬೌಲಿಂಗ್ ವಿಭಾಗದ ಲೋಪಗಳನ್ನು ಸಂಪೂರ್ಣವಾಗಿ ಬಯಲುಮಾಡಿದೆ.