Home Advertisement
Home ಅಂಕಣ ಅಂಕಣ ಬರಹ: ಸಾಮ್ರಾಟರಿಗೆ ಕೇಳಿಸದೇ ಸೆವೆನ್ ಸಿಸ್ಟರ್ಸ್‌ ರೋದನ?

ಅಂಕಣ ಬರಹ: ಸಾಮ್ರಾಟರಿಗೆ ಕೇಳಿಸದೇ ಸೆವೆನ್ ಸಿಸ್ಟರ್ಸ್‌ ರೋದನ?

0
29

ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ

`ನಮ್ಮ ರಕ್ತ ಕುದಿಯುತ್ತಿದೆ. ಕ್ರೋಧ ಉಕ್ಕೇರುತ್ತಿದೆ. ಆದರೇನು, ನಾವು ನಿಸ್ಸಹಾಯಕರು. ಕೈಕಟ್ಟಿ ಕುಳಿತುಕೊಳ್ಳಬೇಕು,’. ಇದು ಭಾರತ – ಬಾಂಗ್ಲಾ ಗಡಿಯ ಡೌಕಿ ಬಂದರು ಗೇಟ್ ಕಾಯುತ್ತಿರುವ ಬಿಎಸ್‌ಎಫ್ ಯೋಧರ ಆಪ್ತ ಮಾತು.

ಯೋಧರಿಗಿರುವ ಸಾಮಾನ್ಯ ಜ್ಞಾನ, ದೇಶಾಭಿಮಾನ, ಅವರ ನಿಷ್ಠೆ ಎಲ್ಲವೂ ನಮ್ಮ ರಾಜಕೀಯ ನೇತಾರರ ನೀತಿ – ಧೋರಣೆಯಿಂದಾಗಿ ಮರುಕಕ್ಕೆ ಒಳಗಾಗುವಂತಾಗಿವೆ.

ಬಾಂಗ್ಲಾದಲ್ಲಿ ಹಿಂದೂ ನರಮೇಧ ಮತ್ತು ಭಾರತ ವಿರೋಧಿ ಹೋರಾಟ ಯುದ್ಧ ಸ್ಥಿತಿಯಲ್ಲಿ ಇದ್ದರೂ ಕೂಡ ಡೌಕಿ ಗೇಟ್‌ನಿಂದ ನಿತ್ಯ ಸಾವಿರಕ್ಕೂ ಹೆಚ್ಚು ಲಾರಿಗಳು ಕಟ್ಟಡ ನಿರ್ಮಾಣದ ಕಲ್ಲುಗಳನ್ನು ಸಾಗಿಸುವುದು ನಿಂತೇ ಇಲ್ಲ.

ಮೇಘಾಲಯ, ಅಸ್ಸಾಂ ರಾಜ್ಯಗಳ ಬೆಟ್ಟ ಗುಡ್ಡಗಳ ಕಲ್ಲುಗಳನ್ನು ಕಳೆದ ಹತ್ತಾರು ವರ್ಷಗಳಿಂದ ಬಾಂಗ್ಲಾಕ್ಕೆ ರಫ್ತು ಮಾಡಲಾಗುತ್ತಿದೆ. ಡೌಕಿ ಬಂದರಿನ ಬಳಿ `ಸಂಯುಕ್ತ ಕರ್ನಾಟಕ’ ಪ್ರತಿನಿಧಿ ನಿಂತಾಗ ಕಂಡದ್ದು ಕ್ಯೂ ನಿಂತ ಸಾವಿರಕ್ಕೂ ಹೆಚ್ಚು ಗ್ರಾನೈಟ್ ಕಲ್ಲುಗಳು ತುಂಬಿದ್ದ ಲಾರಿಗಳು ಹಾಗೂ ಲಾರಿ ಡ್ರೈವರ್ ಹಾಗೂ ಕಲ್ಲು ಮಾಫಿಯಾದ ಹೊಸ ಲೋಕ!

ಶುಕ್ರವಾರ ಬಾಂಗ್ಲಾ ದೇಶದಲ್ಲಿ, ರವಿವಾರ ಭಾರತ ಇವೆರಡು ದಿನ ಹೊರತುಪಡಿಸಿ ವಾರದ ಉಳಿದೆಲ್ಲ ದಿನ, 24 ತಾಸು ಎರಡೂ ದೇಶಗಳ ಕಸ್ಟಮ್ಸ್ ಕಚೇರಿ ಡೌಕಿಯಲ್ಲಿ ತೆರೆಯುತ್ತದೆ. ಗಡಿ ಕಾಯುವ ಸಿಬ್ಬಂದಿಗೆ ಗೇಟ್‌ಗಳನ್ನು ಏರಿಸುವುದು ಮತ್ತು ಇಳಿಸುವುದು ಇಷ್ಟೇ ಕಾಯಕ. ಪ್ರತಿ ಲಾರಿಯಲ್ಲಿ ಮೂವತ್ತು ನವಲತ್ತು ಟನ್ ಕಲ್ಲು…!

ನಿತ್ಯವೂ ಹೀಗೇ. ಡೌಕಿ ಹದಿನೆಂಟು ಕಿಮೀವರೆಗೆ, ಆ ಘಟ್ಟ ಪ್ರದೇಶದಲ್ಲಿ ಲಾರಿಗಳದ್ದೇ ಸಾಲು. ಹನ್ನೆರಡು ಕಿಮೀ ದ್ವಿಚಕ್ರವಾಹನದಲ್ಲಿ ಕ್ರಮಿಸಲು ಒಂದೂವರೆ ತಾಸು ಬೇಕು.

ಬಾಂಗ್ಲಾದಲ್ಲಿ ಕಟ್ಟಡ ನಿರ್ಮಾಣ ಬಿಡಿ. ಚರಂಡಿ, ರಸ್ತೆ ನಿರ್ಮಾಣಕ್ಕೂ ಕಲ್ಲಿಲ್ಲ. ಸಮತಟ್ಟು ಮತ್ತು ಉಸುಕಿನ ನೆಲ, ಗಟ್ಟಿಭೂಮಿ ಅಲ್ಲಿಲ್ಲ. ಇಡೀ ಬಾಂಗ್ಲಾ ದೇಶ ನಿರ್ಮಾಣವಾಗಿದ್ದು ಭಾರತದ `ಸೆವೆನ್ ಸಿಸ್ಟರ್ಸ್‌’ ಎನ್ನುವ ಈಶಾನ್ಯ ರಾಜ್ಯದ ಕಲ್ಲು ಮಣ್ಣುಗಳಿಂದ. ಏಳು ಸೋದರಿಯರ ರಾಜ್ಯದ ಸಂಪತ್ತು ಕರಗಿ ಬಾಂಗ್ಲಾದೇಶ ನಿರ್ಮಾಣವಾಗುತ್ತಿದೆ ಎಂದರೂ ತಪ್ಪಿಲ್ಲ.

ಪರಿಣಾಮ ಇಡೀ ಮೇಘಾಲಯ, ಅಸ್ಸಾಂ, ಮಣಿಪುರ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಮೈದಳೆದ ಪ್ರಕೃತಿ, ಅರಣ್ಯ, ಗುಡ್ಡಗಳೆಲ್ಲ ಕರಗಿ ಹೋಗಿ ಅಪಾಯದ ಅಂಚಿಗೆ ಬಂದು ನಿಂತಿವೆ. ಅಲ್ಲಿ ಭೇಟಿ ನೀಡಿದಾಗ ತಕ್ಷಣ ನೆನಪಾದದ್ದು, ಬಳ್ಳಾರಿಯ ಅದಿರು ಸಾಗಾಟದ ಅಂದಿನ ಕರಾಳ ಆರ್ಭಟ… ಪ್ರಕೃತಿಯನ್ನು ಬಗೆದು ನುಂಗಿದ ಭೀಭತ್ಸ ದೃಶ್ಯ… `ರಿಪಬ್ಲಿಕ್ ಆಫ್ ಬಳ್ಳಾರಿ’ಯ ಅದಿರು ಲಾಬಿ ಎಷ್ಟು ಪ್ರಬಲವಾಗಿದೆಯೋ ಅದಕ್ಕೂ ಹೆಚ್ಚು ಪ್ರಬಲ ಲಾಬಿ ಡೌಕಿ ಮೂಲಕ ಕಲ್ಲು ಸಾಗಾಟದಲ್ಲಿ ನಿರತವಾಗಿದೆ!!

ಕೌನ್ ಹೈ ಸ್ಟೋನ್ ಎಕ್ಸ್ಪೋಟರ್ಸ್‌ ಎಂದು ಪ್ರಶ್ನಿಸಿ. ಪ್ರತಿಯೊಬ್ಬರೂ ಹತ್ತಾರು ಬೃಹತ್ ಉದ್ಯಮಿಗಳು, ರಾಜಕಾರಣಿಗಳ ಹೆಸರನ್ನು ಹೇಳುತ್ತಾರೆ. ಬಾಂಗ್ಲಾದಲ್ಲಿ ನರಮೇಧವಾಯ್ತಲ್ಲ. ಆಗಲೂ ಕಲ್ಲು ಸಾಗಾಟ, ವಿದ್ಯುತ್ ನಿಂತಿಲ್ಲ. ಇಲ್ಲಿಂದ ಹೋಗುವ ಇವಕ್ಕೆ ಯಾವುದೇ ಚ್ಯುತಿ ಬರಲಿಲ್ಲ. ಚ್ಯುತಿ ಬರಲೂ ಬಿಡಲ್ಲ. ಅಷ್ಟು ಪ್ರಬಲ ಈ ಲಾಬಿ.

ಬಿಜಲಿ ಚಮಕ್ತೀ ಹೈ ನ, ಎ ಕಹಾಸೆ ಆತಾ ಹೈ… ಎ ಸ್ಟೋನ್ಸ್ ಲಾರಿ ಕಿಸ್‌ಕಾ… ಹೀಗೆಂದು ಕೇಳಿದರೆ.. ಭಾರತ್ ಕಾ ಮತ್ತು ಭಾರತ್ ಕೆ ಮಂತ್ರಿಜೀ ಕಾ… ಎಂಬ ಉತ್ತರ ಬರುತ್ತದೆ. ಗಡಿ ಕಾಯುವ ಯೋಧರಿಗೆ ಎಲ್ಲವೂ ಗೊತ್ತು! ಭಾರತ ಗಡಿಯಿಂದ ಒಂದು ನೂರು ಮೀಟರ್ ದೂರಕ್ಕೆ ಹೋಗಿ ಲಾರಿಗಳು ಕಲ್ಲುಗಳನ್ನು ಸುರುವಿ ಬರುತ್ತವೆ. ಅಲ್ಲಿಂದ ಬಾಂಗ್ಲಾ ಕಲ್ಲುಗಳನ್ನು ತನ್ನ ನೆಲದ ಒಳನಾಡಿಗೆ ಸಾಗಾಟ ಮಾಡಿಕೊಳ್ಳುತ್ತದೆ.

ಮೇಘಾಲಯ ರಾಜ್ಯ ಖಜಾನೆಗೆ ಪ್ರತಿ ಟನ್‌ಗೆ ಸಿಗುವುದು 8ರಿಂದ 10 ಅಥವಾ 20 ರೂಪಾಯಿ ಕಸ್ಟಮ್ಸ್ ತೆರಿಗೆ ಅಷ್ಟೇ. ಇಷ್ಟು ಅಲ್ಪ ಮೊತ್ತಕ್ಕೆ ನಮ್ಮ ಸಂಪನ್ಮೂಲ ಬಾಂಗ್ಲಾ ಸೇರುತ್ತಿದೆ ಹಿಂದೂ ನರಮೇಧ ನಡೆದಾಗ ಬಾಂಗ್ಲಾ ಭಾರತದ ಭತ್ತ, ಅಕ್ಕಿ, ಕೆಲ ಆಹಾರ ಧಾನ್ಯ ಖರೀದಿ ನಿರ್ಬಂಧಿಸಿದಾಗ ಸಂಸತ್ತಿನಲ್ಲಿ ಪ್ರತಿಪಕ್ಷ ಪ್ರಶ್ನಿಸಿತು. `ಏಕೆ ವಿದ್ಯುತ್ ಕೊಡುತ್ತೀರಿ? ಅದಾನಿ ವಿದ್ಯುತ್ ಕಂಪನಿ ವಿದ್ಯುತ್ ಕೊಡುವುದನ್ನು ನಿಲ್ಲಿಸಿ, ಆ ಕಂಪನಿ ಗುತ್ತಿಗೆ ರದ್ದು ಮಾಡಿ’ ಎಂದು ಆಗ್ರಹಿಸಿತು. ಕೇಂದ್ರ ಸರ್ಕಾರ ಸ್ಪಂದಿಸದೇ ಗಪ್‌ಚುಪ್ ಆಯಿತು! ಹಿಂದೂ ನರಮೇಧಕ್ಕೆ ತಡೆ ಒಡ್ಡುವ, ಖಂಡಿಸುವ ಪ್ರಯತ್ನವನ್ನು ಪ್ರಧಾನಿ, ರಕ್ಷಣಾ ಸಚಿವರು ಮಾಡಿಲ್ಲ… ದೇಶದ ಹಿಂದೂ ಸಂಘಟನೆಗಳು ಎತ್ತರದ ಧ್ವನಿಯನ್ನೂ ಎಬ್ಬಿಸಲಿಲ್ಲ.

ಜಾರ್ಖಂಡದ ಗೊಡ್ಡಾದಲ್ಲಿ ಅದಾನಿ ಕಂಪನಿ 1600 ಮೆಗಾವ್ಯಾಟ್ ಕಲ್ಲಿದ್ದಲು ವಿದ್ಯುತ್ ಘಟಕವನ್ನು ಬಾಂಗ್ಲಾದೇಶಕ್ಕಾಗಿಯೇ ಸ್ಥಾಪಿಸಿ, ಅಲ್ಲಿಗೆ ವಿದ್ಯುತ್ ಪೂರೈಸಲಾಗುತ್ತದೆ. ಇತ್ತೀಚೆಗಷ್ಟೇ 1 ಸಾವಿರ ಕೋಟಿ ರೂವಿದ್ಯುತ್ ಬಾಕಿ ನೀಡದ ಬಾಂಗ್ಲಾಕ್ಕೆ ಅದಾನಿ ಕಂಪನಿ ನೊಟೀಸ್ ನೀಡಿತ್ತು. ಶೇ 50ರಷ್ಟು ವಿದ್ಯುತ್ ಪೂರೈಕೆ ಬಂದ್ ಮಾಡಿತ್ತು. ನಂತರ ಪಾವತಿಸಿದರು ಬಿಡಿ. ಸರ್ಕಾರವೇ ಬಿಡುಗಡೆ ಮಾಡಿರುವ ಅಂಕಿ-ಸಂಖ್ಯೆ ಪ್ರಕಾರ 2024ರಲ್ಲಿ 59 ಮಿಲಿಯನ್ ಡಾಲರ್ ಕಲ್ಲನ್ನು ಬಾಂಗ್ಲಾಕ್ಕೆ ಸಾಗಾಟ ಮಾಡಲಾಗಿದೆ. ಅಲ್ಲಿಯ ಮೂಲಭೂತ ಸೌಕರ್ಯಕ್ಕಾಗಿ. ಕ್ರಷಿಂಗ್ ಸ್ಟೋನ್, ಜಲ್ಲಿ, ಸುಣ್ಣದ ಕಲ್ಲು, ಕಲ್ಲಿದ್ದಲು ಇತ್ಯಾದಿಗಳು ಪ್ರತ್ಯೇಕ. `ಇನ್ನೊಂದು ಹತ್ತು ವರ್ಷ. ನಮ್ಮ ಮನೆಗಳನ್ನು ಕಟ್ಟಿಕೊಳ್ಳಲು ಬೇರೆ ಕಡೆಯಿಂದ ಕಲ್ಲುಗಳನ್ನು ಆಮದು ಮಾಡಿಕೊಳ್ಳುವ ಸ್ಥಿತಿ ಬರಲಿದೆ’ ಹಾಗೇ ಭೂಕುಸಿತ, ಪ್ರಕೃತಿ ವಿಕೋಪವನ್ನು ಆಹ್ವಾನಿಸಿಕೊಳ್ಳುತ್ತೇವೆ’ ಎಂದು ಅಲ್ಲಿನ ಜನ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಇದರ ಲಾಬಿ ಹೇಗಿದೆ ಎಂದರೆ ಕಲ್ಲು ರಫ್ತುದಾರರ ಪಟ್ಟಿ ಕೊಡಿ ಎಂದು ಡಬ್ಲು ಮ್ಯಾಥ್ಯೂ ಮೆಡ್‌ಖಾಪ್ ಎನ್ನುವ ಆರ್‌ಟಿಐ ಕಾರ್ಯಕರ್ತ ಅರ್ಜಿ ಸಲ್ಲಿಸಿದರೆ ರಾಜ್ಯ ಆಯೋಗ ಅದನ್ನು ತಿರಸ್ಕರಿಸಿತು. ಕಸ್ಟಮ್ಸ್ ಇಲಾಖೆ ಮಾಹಿತಿ ಕೊಡಲಿಲ್ಲ. ಕೇಂದ್ರ ಮಾಹಿತಿ ಆಯೋಗಕ್ಕೆ ಮ್ಯಾಥ್ಯೂ ಮೇಲ್ಮನವಿ ಸಲ್ಲಿಸಿದರೆ, ಸಾಕಷ್ಟು ಪಟ್ಟು ಹಿಡಿದರೂ ನಂತರ ಕೇಂದ್ರ ಮಾಹಿತಿ ಆಯೋಗ `ಇದು ಆಫಿಷಿಯಲ್ ಸೀಕ್ರಸಿ ಕಾಯ್ದೆಯಡಿ ಬರುತ್ತದೆ’ ಎಂದು ತಿರಸ್ಕಾರ ಮಾಡಿ ಸಾರ್ವಜನಿಕ ಹಿತಾಸಕ್ತಿಯೂ ಇಲ್ಲ ಈ ಅರ್ಜಿಗೆ ಎಂದು ಶರಾ ಬರೆಯಿತು… ಅಂದರೆ ಭಾರತದ ಕಲ್ಲು ಬಾಂಗ್ಲಾಕ್ಕೆ ಹೋಗುವ ಮಾಹಿತಿಯನ್ನು ಸಂಪೂರ್ಣವಾಗಿ ಗೌಪ್ಯವಾಗಿ ಇಡಲಾಗಿದೆ. ಅಂದರೆ ಅರ್ಥವಾಯ್ತಲ್ಲ, ಲಾಬಿ ಎಷ್ಟು ಪ್ರಬಲ ಎಂಬುದು? ಮೇಘಾಲಯದ ಶಿಲ್ಲಾಂಗ್‌ನಿಂದ ಗಡಿಯ ಡೌಕಿ ಯ ಗಡಿಯವರೆಗೆ ಗುಡ್ಡಗಾಡು ಕಣಿವೆ ರಸ್ತೆಯಲ್ಲಿ ಸಂಚರಿಸುವಾಗ ಭಯಭೀತರಾಗುತ್ತೇವೆ. ಅಷ್ಟು ಕಲ್ಲು ಸಾಗಾಟ ಲಾರಿಗಳ ಆರ್ಭಟ.. ಬಾಂಗ್ಲಾದಲ್ಲಿ ಹಿಂದೂ ನರಮೇಧ ನಡೆದಾಗ ಕಲ್ಲು ಸಾಗಾಟ ಮತ್ತು ವಿದ್ಯುತ್ ಪೂರೈಕೆ ನಿಲ್ಲಿಸಲಿಲ್ಲ.

ಈಗ ತಾರೀಕ್ ಅಹಮದ್ ಅವರ ಹೊಸ ಸರ್ಕಾರ ಬಂತು. ಹಿಂದಿನ ಮಧ್ಯಂತರ ಸರ್ಕಾರದ ಮೊಹಮದ್ ಯೂನಿಸ್ ಸದಾ ಭಾರತ ವಿರೋಧಿಯಾಗಿಯೇ ನಡೆದುಕೊಂಡಿದ್ದವರು. ಬಾಂಗ್ಲಾದ ಹುಟ್ಟು ಭಾರತದಿಂದ. ಬಾಂಗ್ಲಾದ ಅಭಿವೃದ್ಧಿಗೆ ಭಾರತವೇ ಆಧಾರ. ಆದರೆ ಭಾರತ ವಿರೋಧಿ ಧೋರಣೆ, ಅದೂ ಅಲ್ಪಸಂಖ್ಯಾತ ಹಿಂದೂ ವಿರೋಧಿ ಧೋರಣೆ, ಹಿಂದೂಗಳ ಹತ್ಯೆ ಎಲ್ಲವೂ ಕಣ್ಣ ಮುಂದೆಯೇ ಆಗಿ ಹೋಗುತ್ತಿದ್ದರೂ, ಹಿಂದೂಗಳ `ಹೃದಯ ಸಾಮ್ರಾಟ’ರು ಕಲ್ಲು ಸಾಗಾಟ, ವಿದ್ಯುತ್ ಪೂರೈಕೆ ತಡೆಯಲಾಗಲಿಲ್ಲ.

ಹೊಸ ಮುಖ್ಯಸ್ಥ ತಾರೀಕ್‌ಗೆ ಭಾರತ ಸ್ನೇಹ ಹಸ್ತವನ್ನು ಚಾಚಿದೆ. ಈ ಸ್ನೇಹ ಹಸ್ತದ ಹಿಂದಿನ ಗುಟ್ಟು `ಕಲ್ಲು ಮತ್ತು ವಿದ್ಯುತ್’ ಆಗಿರಬಹುದೇ…? ತಮಾಷೆ ಎಂದರೆ, ಸರ್ವೋಚ್ಛ ನ್ಯಾಯಾಲಯದಲ್ಲಿ ಎರಡು ದಿನಗಳ ಹಿಂದೊಂದು ಪ್ರಕರಣ ಬಂದಿತ್ತು. ಬಾಂಗ್ಲಾ ಗಡಿಯ ಭಾರತದ ಯೋಧನೊಬ್ಬ, ಬಾಂಗ್ಲಾಕ್ಕೆ ಗೋವಿನ ಕಳ್ಳ ಸಾಗಣೆ ನೋಡಿಯೂ ತೆಪ್ಪಗಿದ್ದ. ಇದಕ್ಕೆ ಆತ ಹಣ ಪಡೆದನೆಂಬುದು ಆರೋಪ. ಅದಕ್ಕಾಗಿ ಆ ಯೋಧನನ್ನು ವಜಾಗೊಳಿಸಲಾಗಿತ್ತು.

ಇಪ್ಪತ್ತು ವರ್ಷದ ಸೇವೆಯನ್ನು ನಿಷ್ಠೆಯಿಂದ ಮಾಡಿರುವೆ. ನನ್ನ ಮೇಲಿನ ಆರೋಪ ಸುಳ್ಳು. ಶಿಕ್ಷೆ ಕಡಿಮೆ ಮಾಡಿ ಎಂದು ಯೋಧ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ. ನ್ಯಾಯಾಲಯ, ಗಡಿಯಲ್ಲಿ ನಡೆದ ಈ ಗೋಕಳ್ಳ ಸಾಗಣೆ, ಯೋಧನ ಮೇಲಿನ ಭ್ರಷ್ಟಾಚಾರದ ಆರೋಪವನ್ನು ಯಾವುದೇ ರೀತಿ ಕ್ಷಮಿಸಲಾಗದು ಎಂದು ಕಟು ಶಬ್ದದಿಂದ ಹೇಳಿ ಅರ್ಜಿ ವಜಾಗೊಳಿಸಿತು. ಹಾಡುಹಗಲೇ ಪ್ರಕೃತಿ ಬಗೆದು ಕಲ್ಲು ಸಾಗಿಸುವುದನ್ನು ನೋಡಿಯೂ ನೋಡದಂತೆ ಸರ್ಕಾರ ಕಣ್ಣುಮುಚ್ಚಿ ಕೂತಿದೆ. ಕಲ್ಲು ಸಾಗಾಟಗಾರರಿಗೆ ಶಿಕ್ಷೆ ಕೊಡದ, ಈ ಬಗ್ಗೆ ಮಾಹಿತಿಯನ್ನೇ ಪಡೆಯಲಾಗದ ಸ್ಥಿತಿಯಲ್ಲಿ ನಾವಿದ್ದೇವೆ. `ಸೆವೆನ್ ಸಿಸ್ಟರ್ಸ್‌’ ಬಸವಳಿಯುತ್ತಿದ್ದಾರೆ. ಹಿಂದೂ ಸಾಮ್ರಾಟರ ಧ್ವನಿ ಉಡುಗಿ ಹೋಗಿದೆ ಅಲ್ಲವೇ?

Previous articleವಿಧಾನಸೌಧದಲ್ಲಿ ಮಾಧ್ಯಮಗಳಿಗೆ ‘ನೋ ಎಂಟ್ರಿʼ
Next articleಅಂಕೋಲಾ: ಸರಣಿ ಅಪಘಾತ -12 ವಿದೇಶಿಗರು ಸೇರಿ 28 ಮಂದಿಗೆ ಗಾಯ