Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ಜನಸ್ನೇಹಿ ಪೊಲೀಸ್ ವ್ಯವಸ್ಥೆ: ದಾಂಡೇಲಿಯಲ್ಲಿ ಕಾರ್ಮಿಕರ ಸಭೆ

ಜನಸ್ನೇಹಿ ಪೊಲೀಸ್ ವ್ಯವಸ್ಥೆ: ದಾಂಡೇಲಿಯಲ್ಲಿ ಕಾರ್ಮಿಕರ ಸಭೆ

0
96

ಪೊಲೀಸ್–ಸಾರ್ವಜನಿಕ ಸಂಪರ್ಕಕ್ಕೆ ಬಲ: ದಾಂಡೇಲಿಯಲ್ಲಿ ವಿಶೇಷ ಕಾರ್ಯಕ್ರಮ

ದಾಂಡೇಲಿ (ಉತ್ತರ ಕನ್ನಡ): ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ‘ಮನೆ ಮನೆಗೆ ಪೊಲೀಸ್’ ಜಾಗೃತಿ ಕಾರ್ಯಕ್ರಮದ ಮುಂದುವರಿದ ಭಾಗವಾಗಿ, ಕಾಗದ ಕಾರಖಾನೆಯ ಕಾರ್ಮಿಕರಿಗಾಗಿ ಜನಸಂಪರ್ಕ ಸಭೆ ಆಯೋಜಿಸಲಾಯಿತು.

ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರ ಖಂಡಿ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಶಿವಾನಂದ ಅಂಬಿಗೇರ ಮತ್ತು ನಗರ ಪಿ.ಎಸ್.ಐ. ಅಮೀನ್ ಅತ್ತಾರ ಅವರ ನೇತೃತ್ವದಲ್ಲಿ ಈ ಸಭೆ ನಡೆಯಿತು.

ಇದನ್ನೂ ಓದಿ: ಕಾಳಿ ನದಿ ನೀರಾವರಿ ಯೋಜನೆ ಅಂತಿಮ ಹಂತ: ಹಳಿಯಾಳ ರೈತರಿಗೆ ಶೀಘ್ರ ನೀರು

ಕಾರ್ಮಿಕರಿಗೆ ಕಾನೂನು ಮತ್ತು ಸುರಕ್ಷತಾ ಜಾಗೃತಿ: ದಾಂಡೇಲಿಯ West Coast Paper Mills ಸಂಸ್ಥೆಯ ಆವರಣದಲ್ಲಿರುವ ಶಾಪಿಂಗ್ ಕಾಂಪ್ಲೆಕ್ಸ್ ಹೊರಾಂಗಣದಲ್ಲಿ ಕಾರ್ಮಿಕರಿಗಾಗಿ ಈ ಜನಸಂಪರ್ಕ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಕಾರ್ಮಿಕರಿಗೆ ಕಾನೂನು ಜಾಗೃತಿ, ಸುರಕ್ಷತೆ, ಅಪರಾಧ ತಡೆಗಟ್ಟುವಿಕೆ, ಸಂಚಾರಿ ನಿಯಮಗಳು, ಸೈಬರ್ ವಂಚನೆಗಳ ಕುರಿತು ಮಾಹಿತಿ ನೀಡಲಾಯಿತು. ಜೊತೆಗೆ ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ನಡುವೆ ನಂಬಿಕೆ ಹಾಗೂ ವಿಶ್ವಾಸ ಬೆಳೆಸುವ ಉದ್ದೇಶ ಈ ಸಭೆಯ ಪ್ರಮುಖ ಆಶಯವಾಗಿತ್ತು.

‘ಮನೆ ಮನೆಗೆ ಪೊಲೀಸ್’ ಮೂಲಕ ಜನರಲ್ಲಿ ಆತ್ಮಸ್ಥೈರ್ಯ: ಸಭೆಯಲ್ಲಿ ಮಾತನಾಡಿದ ಪಿಎಸ್‌ಐ ಅಮೀನ್ ಅತ್ತಾರ ಅವರು, “ಪೊಲೀಸರು ಮತ್ತು ಸಾರ್ವಜನಿಕರ ನಡುವೆ ವಿಶ್ವಾಸ ಮೂಡಿಸುವ ಉದ್ದೇಶದಿಂದ ‘ಮನೆ ಮನೆಗೆ ಪೊಲೀಸ್’ ವಿಶೇಷ ಕಾರ್ಯಕ್ರಮದಡಿ ಪ್ರತೀ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿ ಜನರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗಿದೆ” ಎಂದು ತಿಳಿಸಿದರು.

ಇದನ್ನೂ ಓದಿ: ಮನೆ ಪರವಾನಿಗೆ ನಿರಾಕರಣೆ: ಗ್ರಾಪಂ ಕಚೇರಿಯಲ್ಲಿ ರೈತ ಆತ್ಮಹತ್ಯೆ ಯತ್ನ

ನಗರದಲ್ಲಿ ನಡೆಯುತ್ತಿರುವ ಜನಸಂಪರ್ಕ ಸಭೆಗಳ ಮೂಲಕ: ಸಂಚಾರಿ ನಿಯಮಗಳ ಅರಿವು. ಸುರಕ್ಷಿತ ಚಾಲನೆ, ಸೈಬರ್ ಅಪರಾಧ ತಡೆ, ಕಾರ್ಮಿಕರ ಸುರಕ್ಷತೆ, ದೂರುಗಳಿಗೆ ತ್ವರಿತ ಸ್ಪಂದನೆ, ತನಿಖೆಯ ಮಾಹಿತಿ ಪೂರೈಕೆ. ಮುಂತಾದ ಅಂಶಗಳ ಬಗ್ಗೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಸಾಕ್ಷ್ಯಗಳ ಕೊರತೆಯಿಂದ ಅಪರಾಧಿಗಳಿಗೆ ಶಿಕ್ಷೆ ತಪ್ಪುತ್ತಿದೆ – ಸಿಪಿಐ: ಸಿಪಿಐ ಶಿವಾನಂದ ಅಂಬಿಗೇರ ಮಾತನಾಡಿ, “ಅಪರಾಧ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆಯಾಗಲು ಸಾಕ್ಷ್ಯಗಳ ಕೊರತೆಯೇ ಪ್ರಮುಖ ಕಾರಣವಾಗಿದೆ. ಸಾಕ್ಷಿದಾರರು ನ್ಯಾಯಾಲಯದಲ್ಲಿ ಹಿಂದೇಟು ಹಾಕುವುದರಿಂದ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕೋಲಾರ: ದೇಶದ ಮೊದಲ ಟಾಟಾ–ಎರ್‌ಬಸ್ ಹೆಲಿಕಾಪ್ಟರ್ ಘಟಕಕ್ಕೆ ಇಂದು ಐತಿಹಾಸಿಕ ಚಾಲನೆ

ಇದನ್ನು ತಡೆಯಲು ಕೇಂದ್ರ ಸರ್ಕಾರ ಡಿಜಿಟಲೀಕರಣದ ಮೂಲಕ ಸಾಕ್ಷ್ಯಗಳ ಚಿತ್ರೀಕರಣ ಸೇರಿದಂತೆ ಕಾನೂನು ತಿದ್ದುಪಡಿ ತಂದಿದ್ದು, ಅಪರಾಧಿಗಳಿಗೆ ಶಿಕ್ಷೆ ಖಚಿತಪಡಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಮಹಿಳೆಯರು ಹಾಗೂ ಶೋಷಿತ ವರ್ಗಗಳಿಗೆ ಕಾನೂನಿನ ರಕ್ಷಣೆ ಒದಗಿಸುವುದು ಪೊಲೀಸ್ ಇಲಾಖೆಯ ಪ್ರಮುಖ ಗುರಿಯಾಗಿದೆ ಎಂದರು.

ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರ ಭಾಗಿ: ಈ ಸಭೆಯಲ್ಲಿ ಕಾಗದ ಕಾರಖಾನೆಯ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತಮ್ಮ ಸಮಸ್ಯೆಗಳು, ಭದ್ರತೆ ಹಾಗೂ ಕಾನೂನು ವಿಚಾರಗಳ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಈ ಕಾರ್ಯಕ್ರಮವು ಪೊಲೀಸ್–ಸಾರ್ವಜನಿಕ ಸಂಪರ್ಕವನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

Previous articleಮನೆ ಪರವಾನಿಗೆ ನಿರಾಕರಣೆ: ಗ್ರಾಪಂ ಕಚೇರಿಯಲ್ಲಿ ರೈತ ಆತ್ಮಹತ್ಯೆ ಯತ್ನ
Next articleಸಿದ್ದಾಪುರ: ಜಲ್ಲಿ ತುಂಬಿದ್ದ ಲಾರಿ ಪಲ್ಟಿ, ಡೀಸೆಲ್ ಸೋರಿಕೆ – 112 ಸಿಬ್ಬಂದಿ ಸಮಯಪ್ರಜ್ಞೆ