ದಾಂಡೇಲಿ(ಉತ್ತರ ಕನ್ನಡ): ಮುರುಡೇಶ್ವರದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದ್ದು, ಪ್ರವಾಸಿಗರ ಅನುಕೂಲಕ್ಕಾಗಿ ವ್ಯವಸ್ಥಿತ ರೀತಿಯಲ್ಲಿ ಪಾರ್ಕಿಂಗ್, ಡ್ರೈನೇಜ್ ಮಾಡಲಾಗುವುದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ ವೈದ್ಯ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಮುರುಡೇಶ್ವರದಲ್ಲಿ ಆಯೋಜಿಸಿದ್ದ ಮಹಾಶಿವರಾತ್ರಿ ಜಾಗರಣೆ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುರುಡೇಶ್ವರದಲ್ಲಿ ಈ ವರ್ಷ ಭಸ್ಮರ್ಚನೆ, ಗೋಮಾತೆ ಪೂಜೆ, ಸಮುದ್ರ ಆರತಿ, ಲಕ್ಷ ಬಿಲ್ವರ್ಚನೆ ಮತ್ತು ಶಿವರಾತ್ರಿ ಜಾಗರಣೆ ಕಾರ್ಯಕ್ರಮ ಆಯೋಜಿಸಿದ್ದು, ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತಧಿಗಳು ಭಾಗವಹಿಸಿದ್ದಾರೆ, ಜಿಲ್ಲೆಯಲ್ಲಿ ಶಿಕ್ಷಣದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.
ಜಿಲ್ಲೆಯ ಮುರುಡೇಶ್ವರ, ಗೋಕರ್ಣ, ಗುಣವಂತೇಶ್ವರ, ಧಾರೇಶ್ವರ ಮತ್ತು ಶೇಜೇಶ್ವರದಲ್ಲಿನ ಶಿವನ ದೇವಾಲಯಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು. ಮುರುಡೇಶ್ವರ ನನ್ನ ಜನ್ಮ ಭೂಮಿ ಹಾಗೂ ಕರ್ಮಭೂಮಿ, ಮುರುಡೇಶ್ವರ ದೇವರ ಆಶೀರ್ವಾದದಿಂದ ನಾನೂ ಅಭಿವೃದ್ಧಿ ಆಗಿದ್ದೇನೆ. ಇಲ್ಲಿ ಪ್ರತಿ ವರ್ಷ ನಿರಂತರವಾಗಿ ಶಿವರಾತ್ರಿ ಕಾರ್ಯಕ್ರಮ ನಡೆಯುವಂತೆ ಮಾಡಲಾಗುವುದು ಎಂದರು.
ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಮಾತನಾಡಿ, ಪ್ರತಿ ವರ್ಷ ಜಿಲ್ಲೆಯ 5 ಸ್ಥಳದಲ್ಲಿ ಶಿವರಾತ್ರಿ ಆಚರಣೆ ಮಾಡುತ್ತಿದ್ದೇವೆ. ಈ ಎಲ್ಲ ಕಡೆಗಳಲ್ಲಿ ಜನಸಂದಣಿ ನಿಯಂತ್ರಣ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಭಕ್ತರಿಗೆ ಎಲ್ಲ ರೀತಿಯ ಮೂಲಭೂತ ಸೌಕರ್ಯದ ವ್ಯವಸ್ಥೆ ಮಾಡಿದೆ. ಬಂದೋಬಸ್ತ್ ಕೂಡಾ ಉತ್ತಮವಾಗಿದ್ದು, ಉತ್ತಮ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದರು.
ಇದೆ ಸಂದರ್ಭದಲ್ಲಿ ಮಾವಳ್ಳಿ 1 ಮತ್ತು 2 ಗ್ರಾಮ ಪಂಚಾಯತ್‌ಗಳನ್ನು ಮುರುಡೇಶ್ವರ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಿದ ಸಚಿವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನಾ ಕಾರ್ಯಕ್ರಮ, ಹರಿಕಥೆ, ಖ್ಯಾತ ಗಾಯಕ ಹೇಮಂತ, ಬಿಗ್‌ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ, ನಟಿ ರಾಗಿಣಿ ದ್ವಿವೇದಿ, ಜೋಗಿ ಸುನೀತಾ, ಖ್ಯಾತ ಗಾಯಕಿ ಮಾನಸಾ ಹೊಳ್ಳ ಇವರಿಂದ ಕಾರ್ಯಕ್ರಮಗಳು, ಶಿವಧ್ಯಾನ ಮತ್ತು ಹಲವಾರು ಕಾರ್ಯಕ್ರಮಗಳು ಜರುಗಿದವು.
ಸ್ಥಳೀಯ ಪ್ರತಿಭೆಗಳಾದ ಧನಲಕ್ಷ್ಮೀ ಮೊಗೇರ ಅವರಿಂದ ಭರತನಾಟ್ಯ, ಮಂಕಿಯ ಶಿವಮ್ಮ ದುರ್ಗಮ್ಮ ಭಜನಾ ತಂಡ ಮತ್ತು ಅಳ್ವೆಕೋಡಿಯ ದುರ್ಗಾ ಪರಮೇಶ್ವರಿ ಭಜನಾ ತಂಡದಿಂದ ಭಜನಾ ಕುಣಿತ, ಗಣೇಶ ಆಚಾರ್ಯ ಅವರಿಂದ ಗಾಯನ ಕಾರ್ಯಕ್ರಮ, ಆದರ್ಶ ದಂಪತಿ ಕಾರ್ಯಕ್ರಮದಲ್ಲಿ ಮತ್ತು ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು.























