ದಾವಣಗೆರೆ: ಬೆಸ್ಕಾಂ ದಾವಣಗೆರೆ ವಲಯದ ಜಿಬಿ ಸಿವಿಲ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಇಂಜಿನಿಯರ್ ಅರ್ಜುನ್ ಆರ್.ಎಚ್ ಅವರ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳಿಗ್ಗೆಯಿಂದ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ದಾವಣಗೆರೆ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪುರೆ ಅವರ ನೇತೃತ್ವದಲ್ಲಿ ಈ ದಾಳಿ ಕಾರ್ಯಾಚರಣೆ ನಡೆಯುತ್ತಿದ್ದು, ಅರ್ಜುನ್ ಅವರು ವಾಸವಿದ್ದ ದಾವಣಗೆರೆ ನಗರದ ನಿಟ್ಟುವಳ್ಳಿಯ ರೂಮ್, ಅವರ ಕಚೇರಿ ಹಾಗೂ ಶಿವಮೊಗ್ಗದಲ್ಲಿರುವ ನಿವಾಸದ ಮೇಲೂ ಏಕಕಾಲದಲ್ಲಿ ಶೋಧ ನಡೆಸಲಾಗಿದೆ.
ಅಪಾರ ಪ್ರಮಾಣದ ಆಸ್ತಿ ಗಳಿಸಿರುವ ಶಂಕೆಯ ಹಿನ್ನೆಲೆಯಲ್ಲಿ ಈ ದಾಳಿ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದಾಯ ಮೂಲಗಳಿಗೆ ಮೀರಿ ಆಸ್ತಿ ಸಂಗ್ರಹಿಸಿರುವ ಆರೋಪದ ಮೇಲೆ ಲೋಕಾಯುಕ್ತ ಇಲಾಖೆ ಈ ಕಾರ್ಯಾಚರಣೆಯನ್ನು ಆರಂಭಿಸಿದೆ ಎನ್ನಲಾಗಿದೆ.
ಬೆಳಿಗ್ಗೆಯಿಂದಲೇ ಅಧಿಕಾರಿಗಳು ದಾಖಲೆಗಳು, ಬ್ಯಾಂಕ್ ಖಾತೆಗಳ ವಿವರಗಳು, ಆಸ್ತಿ ಸಂಬಂಧಿತ ಪತ್ರಗಳು ಹಾಗೂ ಇತರ ಮಹತ್ವದ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಕೆಲವೆಡೆ ಲೆಕ್ಕಪತ್ರಗಳು ಮತ್ತು ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ದಾಳಿಯ ವೇಳೆ ಲೋಕಾಯುಕ್ತ ಅಧಿಕಾರಿಗಳೊಂದಿಗೆ ಪೊಲೀಸ್ ಸಿಬ್ಬಂದಿಯೂ ಭದ್ರತೆ ಒದಗಿಸುತ್ತಿದ್ದು, ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ಈ ಕಾರ್ಯಾಚರಣೆ ಪೂರ್ಣಗೊಂಡ ನಂತರ ಪತ್ತೆಯಾದ ಆಸ್ತಿ ಹಾಗೂ ದಾಖಲೆಗಳ ಬಗ್ಗೆ ಅಧಿಕೃತ ಮಾಹಿತಿ ನೀಡಲಾಗುವ ಸಾಧ್ಯತೆ ಇದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ವಿವರಗಳು ಹೊರಬೀಳುವ ನಿರೀಕ್ಷೆಯಿದೆ.























