ದಾವಣಗೆರೆ: ದಾವಣಗೆರೆ ಜಿಲ್ಲೆಯ ನೂತನ ಪೊಲೀಸ್ ಅಧೀಕ್ಷಕರಾಗಿ (ಎಸ್‌ಪಿ) ಶೇಖರ್ ಹೆಚ್. ತೆಕ್ಕಣ್ಣನವರ್ ಅವರು ಬುಧವಾರ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಅವರು ಅಧಿಕಾರ ಹಸ್ತಾಂತರಿಸಿದರೆ, ಪೂರ್ವವಲಯ ಐಜಿಪಿ ಡಾ. ರವಿಕಾಂತೇ ಗೌಡ ಅವರು ಪುಷ್ಪಗುಚ್ಛ ನೀಡಿ ನೂತನ ಎಸ್ಪಿಗೆ ಸ್ವಾಗತ ಕೋರಿದರು.
ಅಧಿಕಾರ ಸ್ವೀಕಾರ ಸಮಾರಂಭದ ಬಳಿಕ ಮಾತನಾಡಿದ ಶೇಖರ್ ತೆಕ್ಕಣ್ಣನವರ್ ಅವರು, ದಾವಣಗೆರೆ ಜಿಲ್ಲೆ ಮೊದಲಿನಿಂದಲೂ ಕಾನೂನು ಸುವ್ಯವಸ್ಥೆಯಲ್ಲಿ ಸ್ವಚ್ಛನಗರಿಯೆಂಬ ಹೆಗ್ಗಳಿಕೆ ಪಡೆದಿದ್ದು, ಆ ಪರಂಪರೆಯನ್ನು ಮುಂದುವರೆಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು. ಪೊಲೀಸರ ಬಗ್ಗೆ ಜನರಲ್ಲಿ ಇರುವ ಭಯವನ್ನು ದೂರ ಮಾಡಿ, ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ಕ್ರಮಕ್ಕೆ ಸೂಚನೆ: ಕಿರಣ್ ರಿಜಿಜು
ಸರ್ಕಾರ ನಮ್ಮಿಂದ ನಿರೀಕ್ಷಿಸುವ ಸೇವೆಯನ್ನು ನಿಷ್ಠೆಯಿಂದ ಜನರಿಗೆ ಒದಗಿಸುವೆ. ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಉತ್ತಮ ಆಡಳಿತ ನೀಡಲು ಪ್ರಯತ್ನಿಸುವೆ ಎಂದು ತಿಳಿಸಿದರು. ಇತ್ತೀಚೆಗೆ ಹೆಚ್ಚುತ್ತಿರುವ ಸೈಬರ್ ಅಪರಾಧ ಪ್ರಕರಣಗಳ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯಕ್ಕೆ ಪ್ರಾಮುಖ್ಯತೆ ನೀಡುವುದಾಗಿ ಹೇಳಿದರು.
ಜಿಲ್ಲೆಯಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡದೆ, ಶಾಂತಿ ಮತ್ತು ಸೌಹಾರ್ದತೆಯ ಸಮಾಜ ನಿರ್ಮಿಸುವುದೇ ನನ್ನ ಗುರಿ. ಡ್ರಗ್ಸ್ ಪ್ರಕರಣಗಳ ಬಗ್ಗೆ ಶಿಸ್ತುಬದ್ಧ ತನಿಖೆ ನಡೆಸುವ ಕಾರ್ಯ ಮುಂದುವರಿಸಲಾಗುವುದು. ರಾಜ್ಯದ ಇತರೆ ಭಾಗಗಳಿಂದ ನಗರಕ್ಕೆ ಆಗಮಿಸುವವರ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲಾಗುವುದು. ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಪೊಲೀಸ್ ಇಲಾಖೆ ಸಂಪೂರ್ಣ ಬದ್ಧವಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಕಂಬಳದ ಇತಿಹಾಸಕ್ಕೆ ಜೀವ ತುಂಬಿದ ವೀರೇಂದ್ರ ಹೆಗ್ಗಡೆ: ವೀರ ಕಂಬಳ ಚಿತ್ರ ತೆರೆಗೆ ಸಿದ್ಧ
ತಮ್ಮ ವೈಯಕ್ತಿಕ ಹಿನ್ನೆಲೆಯ ಕುರಿತು ಮಾತನಾಡಿದ ಅವರು, ತಾವು ಮೂಲತಃ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನವರಾಗಿದ್ದು, ಮೊದಲು ಪಶು ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದೆ. ನಂತರ 2008ರಲ್ಲಿ ಡಿಎಸ್ಪಿಯಾಗಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡು ವೃತ್ತಿ ಜೀವನ ಆರಂಭಿಸಿದ್ದೆ ಎಂದು ವಿವರಿಸಿದರು.























