Home Advertisement
Home ಸಿನಿ ಮಿಲ್ಸ್ ಕಂಬಳದ ಇತಿಹಾಸಕ್ಕೆ ಜೀವ ತುಂಬಿದ ವೀರೇಂದ್ರ ಹೆಗ್ಗಡೆ: ವೀರ ಕಂಬಳ ಚಿತ್ರ ತೆರೆಗೆ ಸಿದ್ಧ

ಕಂಬಳದ ಇತಿಹಾಸಕ್ಕೆ ಜೀವ ತುಂಬಿದ ವೀರೇಂದ್ರ ಹೆಗ್ಗಡೆ: ವೀರ ಕಂಬಳ ಚಿತ್ರ ತೆರೆಗೆ ಸಿದ್ಧ

0
106

ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನಟನೆಯ ‘ವೀರ ಕಂಬಳ’ ಫೆ.27ರಂದು ಬಿಡುಗಡೆ

ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ವೀರ ಕಂಬಳ’ ಇದೇ ಫೆಬ್ರವರಿ 27ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಬಿಡುಗಡೆ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಚಿತ್ರತಂಡ ಒಂದೊಂದೇ ವಿಶೇಷತೆಯನ್ನು ಬಹಿರಂಗಪಡಿಸುತ್ತಿದೆ.

ವೀರ ಕಂಬಳ ರೂಪುಗೊಂಡಿದ್ದರ ಹಿಂದೆ ದಶಕಗಳಷ್ಟು ಸುದೀರ್ಘವಾದ ಕಥನವಿದೆ. ಸರಿಸುಮಾರು ಏಳು ಶತಮಾನಗಳ ಇತಿಹಾಸ ಹೊಂದಿರುವ ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳದ ಹಿನ್ನೆಲೆಯನ್ನು ಆಧಾರವಾಗಿ ಇಟ್ಟುಕೊಂಡು ಈ ಚಿತ್ರವನ್ನು ರೂಪಿಸಲಾಗಿದೆ. ಕಂಬಳದ ಇಂಚಿಂಚು ಮಾಹಿತಿಯನ್ನು ಸಂಗ್ರಹಿಸಿ, ಅದರ ಇತಿಹಾಸ, ಸಂಸ್ಕೃತಿ ಮತ್ತು ಮಹತ್ವವನ್ನು ತೆರೆಗೆ ತರುವ ಉದ್ದೇಶದಿಂದ ರಾಜೇಂದ್ರ ಸಿಂಗ್ ಬಾಬು ಅವರು ದಶಕಗಳ ಕಾಲ ಅಧ್ಯಯನ ನಡೆಸಿ ಈ ಸಿನಿಮಾ ರೂಪಿಸಿದ್ದಾರೆ.

ಇದನ್ನೂ ಓದಿ: ಹಿರಿಯ ಪತ್ರಕರ್ತ, ಮಾಜಿ ವಿಧಾನ ಪರಿಷತ್ ಸದಸ್ಯ ಪಿ. ರಾಮಯ್ಯ ನಿಧನ

ಈ ಚಿತ್ರದ ಪ್ರಮುಖ ಆಕರ್ಷಣೆಯೆಂದರೆ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಮಹತ್ವದ ಪಾತ್ರವೊಂದಕ್ಕೆ ಬಣ್ಣ ಹಚ್ಚಿರುವುದು. ಈ ವಿಚಾರ ವರ್ಷಗಳ ಹಿಂದೆಯೇ ಬಹಿರಂಗವಾಗಿದ್ದರೂ, ಚಿತ್ರತಂಡ ಇದನ್ನು ಇದುವರೆಗೆ ರಹಸ್ಯವಾಗಿಯೇ ಉಳಿಸಿಕೊಂಡಿತ್ತು. ಇದೀಗ ನಿರ್ದೇಶಕರೇ ಹೆಗ್ಗಡೆ ಅವರ ಪಾತ್ರದ ಚಹರೆಗಳನ್ನು ಸಾರ್ವಜನಿಕರ ಮುಂದೆ ಅನಾವರಣಗೊಳಿಸಿದ್ದಾರೆ.

ಕಂಬಳದ ಇತಿಹಾಸವನ್ನು ಅಧ್ಯಯನ ಮಾಡುವ ವೇಳೆ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೂ ಕಂಬಳ ಕ್ರೀಡೆಯಿಗೂ ಇರುವ ಆಪ್ತ ಸಂಬಂಧ ರಾಜೇಂದ್ರ ಸಿಂಗ್ ಬಾಬು ಅವರಿಗೆ ವಿಶೇಷ ಆಸಕ್ತಿ ಮೂಡಿಸಿತ್ತಂತೆ. ಎಪ್ಪತ್ತರ ದಶಕದಲ್ಲಿ ತುಳುನಾಡಿನ ಖಾಸಗಿ ಮನೋರಂಜನಾ ಕ್ರೀಡೆಯಾಗಿದ್ದ ಕಂಬಳವನ್ನು ಭವ್ಯ ಮಟ್ಟದಲ್ಲಿ ಆಯೋಜಿಸಿ, ಜನಪ್ರಿಯಗೊಳಿಸಿದ ಪ್ರಮುಖ ವ್ಯಕ್ತಿಯಾಗಿ ಹೆಗ್ಗಡೆ ಗುರುತಿಸಿಕೊಂಡಿದ್ದರು.

ಇದನ್ನೂ ಓದಿ: ಶಾಲೆಯಲ್ಲಿ ಗುಂಡಿನ ದಾಳಿ: ಗನ್‌ಮ್ಯಾನ್ ಸೇರಿ 10 ಮಂದಿ ಸಾವು

ಈ ಕಾರಣದಿಂದಲೇ ಚಿತ್ರದಲ್ಲಿ ಮಹತ್ವದ ಪಾತ್ರವೊಂದಕ್ಕೆ ಅವರನ್ನೇ ಆಯ್ಕೆ ಮಾಡಬೇಕೆಂಬ ಆಸೆ ನಿರ್ದೇಶಕರೊಳಗೆ ಮೂಡಿತ್ತು. ಕಂಬಳದ ಮೇಲಿನ ವಿಶೇಷ ಅಭಿಮಾನದಿಂದ ಹೆಗ್ಗಡೆಯವರು ನಟಿಸಲು ಒಪ್ಪಿಗೆ ನೀಡಿದ್ದು, ಚಿತ್ರದ ಆತ್ಮದಂತಿರುವ ಮೌಲಿಕ ಸಂದೇಶವನ್ನು ಹೊತ್ತುಕೊಂಡ ಪಾತ್ರಕ್ಕೆ ಜೀವ ತುಂಬಿದ್ದಾರೆ.

ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಪ್ರಕಾರ, ಹೆಗ್ಗಡೆ ಅವರ ಪಾತ್ರವೇ ‘ವೀರ ಕಂಬಳ’ ಚಿತ್ರದ ಪ್ರಮುಖ ಆಕರ್ಷಣೆಯಾಗಲಿದೆ. ಅವರು ಚಿತ್ರೀಕರಣದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದು, ಚಿತ್ರತಂಡದವರಲ್ಲಿ ವಿಶೇಷ ಸಂತೋಷ ಮೂಡಿಸಿದೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮತ್ತೆ ಚಿರತೆ ಆತಂಕ: ಸಭಾಪತಿ ಹೊರಟ್ಟಿ ಅವರ ತೋಟದಲ್ಲಿ ಪ್ರತ್ಯಕ್ಷ

‘ವೀರ ಕಂಬಳ’ ಚಿತ್ರವನ್ನು ಬಾಬಾ’ಸ್ ಬ್ಲೆಸಿಂಗ್ ಫಿಲ್ಮ್ಸ್ ಬ್ಯಾನರ್‌ನಡಿ ಡಾ. ವಿನಿತ ವಿಜಯ್ ಕುಮಾರ್ ರೆಡ್ಡಿ ಹಾಗೂ ಅರುಣ್ ರೈ ತೊಡಾರ್ ನಿರ್ಮಿಸಿದ್ದಾರೆ. ಪ್ರಕಾಶ್ ರೈ ಹಾಗೂ ರವಿಶಂಕರ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದು, ರಾಧಿಕಾ ಚೇತನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೆ, ಈ ಚಿತ್ರ ತುಳು ಭಾಷೆಯಲ್ಲಿಯೂ ಬಿಡುಗಡೆಯಾಗಲಿದ್ದು, ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು ಸೇರಿದಂತೆ ಪ್ರಸಿದ್ಧ ತುಳು ರಂಗಭೂಮಿ ಹಿನ್ನೆಲೆಯ ಕಲಾವಿದರು ಅಭಿನಯಿಸಿದ್ದಾರೆ.

ವಿಜಯ್ ಕೊಡಿಯಾಲ್‌ಬೈಲ್ ಅವರ ಚಿತ್ರಕಥೆ ಮತ್ತು ಸಂಭಾಷಣೆ, ಮಣಿಕಾಂತ್ ಕದ್ರಿ ಅವರ ಸಂಗೀತ ನಿರ್ದೇಶನ, ಆರ್. ಗಿರಿ ಅವರ ಛಾಯಾಗ್ರಹಣ, ಶ್ರೀನಿವಾಸ್ ಎಸ್. ಬಾಬು ಅವರ ಸಂಕಲನ, ಚಂದ್ರಶೇಖರ್ ಸುವರ್ಣ ಮುಲ್ಕಿ ಅವರ ಕಲಾ ನಿರ್ದೇಶನ ಹಾಗೂ ಕಾಂತ ಪ್ರಸಾದನ ಮತ್ತು ಭಾಷಾ ಅವರ ವಸ್ತ್ರ ವಿನ್ಯಾಸ ಈ ಚಿತ್ರದ ತಾಂತ್ರಿಕ ಬಲವಾಗಿದೆ.

‘ವೀರ ಕಂಬಳ’ ಚಿತ್ರವು ಫೆಬ್ರವರಿ 27ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

Previous articleಹುಬ್ಬಳ್ಳಿಯಲ್ಲಿ ಮತ್ತೆ ಚಿರತೆ ಆತಂಕ: ಸಭಾಪತಿ ಹೊರಟ್ಟಿ ಅವರ ತೋಟದಲ್ಲಿ ಪ್ರತ್ಯಕ್ಷ
Next article‘ಹೃದಯಂ’: ಇದು ‘ಉಡಾಳ’ನ ಹೃದಯದ ವಿಷಯ