Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ಗಂಡನ ಹತ್ಯೆಗೆ ಸುಪಾರಿ, ಮೈದುನ ಬಲಿ

ಗಂಡನ ಹತ್ಯೆಗೆ ಸುಪಾರಿ, ಮೈದುನ ಬಲಿ

0
42

ಸಿದ್ದಾಪುರ: ಅಕ್ರಮ ಸಂಬಂಧ ಮತ್ತು ಕೌಟುಂಬಿಕ ವೈಷಮ್ಯದ ಹಿನ್ನೆಲೆಯಲ್ಲಿ ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳ ತಂಡವೊಂದು ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಅವರಗುಪ್ಪದಲ್ಲಿ ನಡೆದಿದೆ.

ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ಸ್ವಯಂ ಘೋಷಿತ ಸ್ವಾಮೀಜಿ ಕಮಲಾಕರ ಭಟ್ಟ ಹೆಸರು ಕೇಳಿಬಂದಿದೆ.

ಅವರಗುಪ್ಪ ನಿವಾಸಿ ವಸಂತ ನಾಯ್ಕ ಕೊಲೆಯಾದ ದುರ್ದೈವಿ. ವಸಂತ ಅವರ ತಮ್ಮ ಮಹೇಶ ನಾಯ್ಕ ಹಾಗೂ ನೆರೆಮನೆಯ ಕುಮಾರ ನಾರಾಯಣ ನಾಯ್ಕ ಗಂಭೀರವಾಗಿ ಗಾಯಗೊಂಡವರಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹೇಶ ನಾಯ್ಕ ಅವರ ಪತ್ನಿ ಸುಚಿತ್ರಾ ಎಂಬುವವರು ಕಳೆದ ಆರು ತಿಂಗಳಿನಿಂದ ಶಿವಮೊಗ್ಗದ ಕಮಲಾಕರ ಸ್ವಾಮಿ (ಮೂಲತಃ ಸಿದ್ದಾಪುರ ತಾಲೂಕಿನ ಸೋವಿನಕೊಪ್ಪದ ಕಮಲಾಕರ ಭಟ್) ಎಂಬುವವರ ಜೊತೆ ವಾಸವಿದ್ದಳು ಎನ್ನಲಾಗಿದೆ.

ಫೆಬ್ರವರಿ 1ರಂದು ಮಹೇಶನ ಮಗಳು ಸುಮಶ್ರೀಯು ತನ್ನ ತಾಯಿ ಹಾಗೂ ಸ್ವಯಂ ಘೋಷಿತ ಸ್ವಾಮೀಜಿ ಕಮಲಾಕರ ಭಟ್ಟನ ಕಿರುಕುಳ ತಾಳಲಾರದೆ ತಂದೆಗೆ ಸಂದೇಶ ಕಳುಹಿಸಿ ಸಿದ್ದಾಪುರಕ್ಕೆ ಮರಳಿ ಬಂದಿದ್ದಳು. ಮಗಳು ತನ್ನ ಮತ್ತು ಕಮಲಾಕರ ಭಟ್ಟನೊಂದಿಗಿನ ಸಂಬಂಧದ ಬಗ್ಗೆ ಮನೆಯವರಿಗೆ ತಿಳಿಸುತ್ತಾಳೆ ಎಂಬ ಆಕ್ರೋಶ ಸುಚಿತ್ರಾಳಲ್ಲಿತ್ತು ಎನ್ನಲಾಗಿದೆ.

ಫೆ. 2ರ ರಾತ್ರಿ ಸುಮಾರು 9:45ರ ಸುಮಾರಿಗೆ, ಸುಚಿತ್ರಾ, ಆಕೆಯ ತಂದೆ ಲೋಕನಾಥ ನಾಯ್ಕ ಹಾಗೂ ನಾಲ್ವರು ಅಪರಿಚಿತ ವ್ಯಕ್ತಿಗಳು ಚಾಕು ಹಿಡಿದು ವಸಂತ ನಾಯ್ಕ ಮನೆಗೆ ನುಗ್ಗಿದ್ದಾರೆ. ಮನೆಯಲ್ಲಿದ್ದ ಮಗಳು ಸುಮಶ್ರೀಯನ್ನು ಎಳೆದಾಡಲು ಯತ್ನಿಸಿದಾಗ, ಮನೆಯವರು ತಡೆಯಲು ಮುಂದಾಗಿದ್ದಾರೆ.

ಈ ವೇಳೆ, ಇವತ್ತು ಇವನನ್ನು ಮುಗಿಸಿಯೇ ಹೋಗುತ್ತೇವೆ ಎಂದು ಕೂಗಾಡಿದ ದುಷ್ಕರ್ಮಿಗಳು, ವಸಂತ ನಾಯ್ಕ ಎದೆಗೆ ಚಾಕುವಿನಿಂದ ಇರಿದಿದ್ದಾರೆ. ಅಡ್ಡ ಬಂದ ಮಹೇಶ ಮತ್ತು ಕುಮಾರ ಅವರಿಗೂ ಮನಬಂದಂತೆ ಇರಿದು ಅಲ್ಲಿಂದ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವಕ್ಕೊಳಗಾದ ವಸಂತ ನಾಯ್ಕ ಅವರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಗಲಾಟೆ ಕೇಳಿ ಅಕ್ಕಪಕ್ಕದವರು ಓಡಿ ಬಂದಾಗ, ಆರೋಪಿಗಳು ತಾವು ತಂದಿದ್ದ ಕಾರನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಹೋಗುವಾಗ “ಬದುಕಿ ಉಳಿದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ” ಎಂದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕೃತ್ಯದ ಹಿಂದೆ ಟಿವಿ ಸ್ವಾಮಿ ಕಮಲಾಕರ ಭಟ್ಟ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ವ್ಯಕ್ತವಾಗಿದೆ. ಮೃತರ ಪತ್ನಿ ಸಂಧ್ಯಾ ನಾಯ್ಕ ಅವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಬಿಸಿಯೂಟ ಸೇವಿಸಿ 58 ವಿದ್ಯಾರ್ಥಿಗಳು ಅಸ್ವಸ್ಥ
Next articleನಡತೆ ಶಂಕಿಸಿ ಪತ್ನಿ ತಲೆ ಬೋಳಿಸಿದ ಭೂಪ..!