ಕುಳಗೇರಿ ಕ್ರಾಸ್: ಕರಿಮಂಗನ ದಾಳಿಯಿಂದ ಇಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಸಂಜೆ ನರಸಾಪೂರ ಗ್ರಾಮದಲ್ಲಿ ನಡೆದಿದೆ.
ನರಸಾಪೂರ ಗ್ರಾಮದ 23 ವಯಸ್ಸಿನ ಕುಮಾರಿ ಗಂಗವ್ವ ಹೊರಕೇರಿ ಹಾಗೂ 35 ವಯಸ್ಸಿನ ಯಮನವ್ವ ಪೂಜಾರಿ ಎಂಬುವರು ಮಂಗನ ದಾಳಿಯಿಂದ ತೀವ್ರ ಗಾಯಂಗೊಂಡಿದ್ದು ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ಮರಳಿದ್ದಾರೆ.
ಸೋಮವಾರ ಸಂಜೆ ಬಹಿರ್ದೆಸೆಗೆ ಹೋದಾಗ ಈ ಘಟನೆ ನಡೆದಿದ್ದು ಹಿಂದಿನಿಂದ ಬಂದ ಎರಡು ಕರಿ ಮಂಗಗಳು ದಾಳಿ ನಡೆಸಿ ಕಚ್ಚಿವೆ ಎಂದು ಮಹಿಳೆಯರ ಮನೆಗೆ ಭೇಟಿ ನೀಡಿದ ಕಂದಾಯ ನಿರೀಕ್ಷಕ ಶ್ರೀಧರ ವಿಶ್ವಕರ್ಮ ಅವರಿಗೆ ಮಹಿಳೆಯರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಯುಮ್‌ನಾಮ್ ಖೇಮ್‌ಚಂದ್ ಸಿಂಗ್ ಮಣಿಪುರದ ನೂತನ ಸಿಎಂ
ಜಮೀನಿಗೆ ಹೋಗಲು ಭಯ: ಮಂಗಗಳ ಉಪಟಳದಿಂದ ಗ್ರಾಮದ ಜನರು ಜಮೀನುಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಮಹಿಳೆಯರು ಮಕ್ಕಳು ಒಂಟಿಯಾಗಿ ಸಿಕ್ಕರೆ ದಾಳಿ ಮಾಡುತ್ತಿವೆ ಹೀಗಾಗಿ ಯಾರು ಹೊರಗೆ ಬರುತ್ತಿಲ್ಲ. ಸಂಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮಂಗಗಳನ್ನ ಸೆರೆಹಿಡಿದು ಅವುಗಳ ಉಪಟಳ ತಪ್ಪಿಸಬೇಕು ಎಂದು ಗ್ರಾಪಂ ಸದಸ್ಯ ಆನಂದಗೌಡ ಪಾಟೀಲ ಮನವಿ ಮಾಡಿದ್ದಾರೆ.
ಸುಮಾರು ನಾಲ್ಕೈದು ತಿಂಗಳ ಹಿಂದೆ ಗ್ರಾಮಕ್ಕೆ ಲಗ್ಗೆ ಇಟ್ಟ ಮಂಗ ಕೆಲವರ ಮೇಲೆ ದಾಳಿ ಮಾಡಿ ಸ್ವಲ್ಪದಿನ ಮಾಯವಾಗಿತ್ತು. ಮತ್ತೆ ಮೂರ್ನಾಲ್ಕು ದಿನಗಳಿಂದ ಗ್ರಾಮಕ್ಕೆ ಆಗಮಿಸಿದ ಮಂಗ ಕಂಡವರ ಮೇಲೆ ದಾಳಿ ನಡೆಸುತ್ತಿದೆ. ಈ ಕುರಿತು ಸಾಕಷ್ಟು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದು ಪ್ರಯೋಜನ ಇಲ್ಲದಂತಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ಹೊರಹಾಕಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದ ಇಂದು ನಮ್ಮ ಗ್ರಾಮದ ಮಹಿಳೆಯರ-ಮಕ್ಕಳ ಮೇಲೆ ಮಂಗ ದಾಳಿ ಮಾಡಿ ತೀವ್ರ ಗಾಯಗೊಳಿಸಿದೆ. ಗ್ರಾಮದಲ್ಲಿ ಬಡಿಗೆ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ಬಂದೊದಗಿದೆ. ಮಂಗನನ್ನು ರಕ್ಷಿಸುವ ಮೂಲಕ ಯಾವುದೇ ಪ್ರಾಣಹಾನಿ ಸಂಭವಿಸದಂತೆ ಅರಣ್ಯ ಇಲಾಖೆ ನೋಡಿಕೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.






















