Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ಮಗಳ ರಕ್ಷಣೆಗೆ ಹೋದ ತಂದೆ ಮೇಲೆ ಹಲ್ಲೆ; ಅಣ್ಣನ ಬರ್ಬರ ಹತ್ಯೆ ಮಾಡಿದ ‘ಸ್ವಾಮೀಜಿ’ ಗ್ಯಾಂಗ್!

ಮಗಳ ರಕ್ಷಣೆಗೆ ಹೋದ ತಂದೆ ಮೇಲೆ ಹಲ್ಲೆ; ಅಣ್ಣನ ಬರ್ಬರ ಹತ್ಯೆ ಮಾಡಿದ ‘ಸ್ವಾಮೀಜಿ’ ಗ್ಯಾಂಗ್!

0
63


​ಕಾರವಾರ: ಅಕ್ರಮ ಸಂಬಂಧ ಹಾಗೂ ಮಗಳ ಮೇಲಿನ ಕ್ರೌರ್ಯವನ್ನು ಪ್ರಶ್ನಿಸಿ, ಆಕೆಯನ್ನು ರಕ್ಷಿಸಲು ಹೋದ ಕುಟುಂಬದ ಮೇಲೆ ನಡೆದ ಮಾರಣಾಂತಿಕ ದಾಳಿಯಲ್ಲಿ ವ್ಯಕ್ತಿಯೊಬ್ಬರು ಬಲಿಯಾದ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಅವರಗುಪ್ಪಾದಲ್ಲಿ ನಡೆದಿದೆ.

​ತನ್ನ ತಮ್ಮನ ಮಗಳನ್ನು ತಾಯಿಯ ಅಕ್ರಮ ಸಂಬಂಧದ ಕಪಿಮುಷ್ಟಿಯಿಂದ ಬಿಡಿಸಲು ಮುಂದಾದ ವಸಂತ ಜಟ್ಯಾ ನಾಯ್ಕ್ (41) ಎಂಬುವವರು ಚಾಕು ಇರಿತದಿಂದ ಸಾವನ್ನಪ್ಪಿದ್ದಾರೆ.

​ಬಳ್ಳಟ್ಟೆಯ ವಡ್ನಗದ್ದೆ ನಿವಾಸಿ ಮಹೇಶ್ ಜಟ್ಯಾ ನಾಯ್ಕ್ ಕಳೆದ 20 ವರ್ಷಗಳ ಹಿಂದೆ ಸುಚಿತ್ರಾ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಕುಟುಂಬದ ನಿರ್ವಹಣೆಗಾಗಿ ಮಹೇಶ್ ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಸಂದರ್ಭವನ್ನು ಬಳಸಿಕೊಂಡ ಸುಚಿತ್ರಾ, ಹೆಮ್ಮನಬೈಲಿನ ಕಮಲಾಕರ ಸ್ವಾಮಿ ಎಂಬಾತನ ಜತೆ ಅಕ್ರಮ ಸಂಬಂಧ ಬೆಳೆಸಿದ್ದಳು. ಕಳೆದ 6 ತಿಂಗಳಿನಿಂದ ಮಕ್ಕಳೊಂದಿಗೆ ಶಿವಮೊಗ್ಗಕ್ಕೆ ತೆರಳಿ ಆತನ ಜೊತೆಯೇ ವಾಸವಿದ್ದಳು.


ಮಗಳ ರಕ್ಷಣೆಗೆ ಬಂದ ಕರೆ: ​ತಾಯಿಯ ನಡವಳಿಕೆಯಿಂದ ಬೇಸತ್ತ ಮಗಳು ಸುಮಶ್ರೀ, ತಂದೆ ಮಹೇಶ್‌ಗೆ ಮೊಬೈಲ್ ಮೂಲಕ ಸಂದೇಶ ಕಳುಹಿಸಿ ತನ್ನ ಅಳಲನ್ನು ತೋಡಿಕೊಂಡಿದ್ದಳು. “ಪಪ್ಪಾ, ಮಮ್ಮಿ ಸ್ವಾಮೀಜಿ ಜೊತೆ ಇರುತ್ತಾಳೆ. ನಮಗೆ ತುಂಬಾ ಟಾರ್ಚರ್ ಕೊಡುತ್ತಿದ್ದಾರೆ, ಪ್ರಶ್ನೆ ಮಾಡಿದರೆ ವಿಷ ಹಾಕಿ ಸಾಯಿಸುವುದಾಗಿ ಬೆದರಿಸುತ್ತಿದ್ದಾರೆ. ದಯವಿಟ್ಟು ಬಂದು ನಮ್ಮನ್ನು ಕಾಪಾಡಿ” ಎಂದು ಬೇಡಿಕೊಂಡಿದ್ದಳು.

​ಮಗಳ ಸಂದೇಶದಿಂದ ಆತಂಕಗೊಂಡ ಮಹೇಶ್, ಆಕೆಯನ್ನು ಸಿದ್ದಾಪುರಕ್ಕೆ ಕರೆಸಿಕೊಂಡು ಪೊಲೀಸರು ಹಾಗೂ ಶಿರಸಿಯ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದರು.

​ಮನೆಗೆ ನುಗ್ಗಿ ರಕ್ತಪಾತ: ​ಗುರುವಾರ ವಿಚಾರಣೆಗೆ ಹಾಜರಾಗುವಂತೆ ಅಧಿಕಾರಿಗಳು ಸೂಚಿಸಿದ್ದ ಹಿನ್ನೆಲೆಯಲ್ಲಿ, ಮಹೇಶ್ ತನ್ನ ಅಣ್ಣ ವಸಂತ ಹಾಗೂ ಕುಟುಂಬದೊಂದಿಗೆ ಅವರಗುಪ್ಪಾದ ಮನೆಯಲ್ಲಿ ಚರ್ಚಿಸುತ್ತಿದ್ದರು. ಈ ವೇಳೆ ರಾತ್ರಿ ಸುಮಾರು 9:45ಕ್ಕೆ ಏಕಾಏಕಿ ಕಾರಿನಲ್ಲಿ ಧಾವಿಸಿ ಬಂದ ಸುಚಿತ್ರಾ, ಆಕೆಯ ತಂದೆ ಲೋಕನಾಥ ನಾಯ್ಕ, ಕರುಣಾಕರ ಸ್ವಾಮಿ ಹಾಗೂ ಇತರೆ ನಾಲ್ವರು ಅಪರಿಚಿತರು ಮನೆಯೊಳಗೆ ನುಗ್ಗಿ ಗಲಾಟೆ ಆರಂಭಿಸಿದ್ದಾರೆ.

​ವಾದ-ವಿವಾದ ವಿಕೋಪಕ್ಕೆ ತಿರುಗಿದಾಗ, ಆರೋಪಿಗಳು ಚಾಕುವಿನಿಂದ ಮನಸೋಇಚ್ಛೆ ಇರಿದಿದ್ದಾರೆ. ಎದೆ ಹಾಗೂ ಕೈಗೆ ತೀವ್ರವಾಗಿ ಗಾಯಗೊಂಡ ವಸಂತ ನಾಯ್ಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಲ್ಲೆಯಲ್ಲಿ ಮಹೇಶ್ ಹಾಗೂ ನೆರೆಮನೆಯ ಕುಮಾರ್ ನಾರಾಯಣ ನಾಯ್ಕ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

​ಏಳು ಮಂದಿ ಅರೆಸ್ಟ್: ​ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿದ್ದಾಪುರ ಪೊಲೀಸರು ತನಿಖೆ ಕೈಗೊಂಡು, ಪ್ರಮುಖ ಆರೋಪಿಗಳಾದ ಸುಚಿತ್ರಾ, ಲೋಕನಾಥ ನಾಯ್ಕ, ಕರುಣಾಕರ ಸ್ವಾಮಿ ಸೇರಿದಂತೆ ಒಟ್ಟು ಏಳು ಜನರನ್ನು ಶಿವಮೊಗ್ಗ ಹಾಗೂ ಸಿದ್ದಾಪುರದಲ್ಲಿ ಬಂಧಿಸಿದ್ದಾರೆ. ಸದ್ಯ ಆರೋಪಿಗಳ ವಿಚಾರಣೆ ನಡೆಯುತ್ತಿದೆ.

​ತಾಯಿಯ ಅಕ್ರಮ ಸಂಬಂಧ ಮಗಳ ಪಾಲಿಗೆ ನರಕವಾಗಿ ಪರಿಣಮಿಸಿತ್ತು. ಮಗಳನ್ನು ಉಳಿಸಿಕೊಳ್ಳಲು ಹೋದ ಕುಟುಂಬದ ಹಿರಿಯ ಸದಸ್ಯನೊಬ್ಬ ಪ್ರಾಣ ಕಳೆದುಕೊಂಡಿರುವುದು ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ.

Previous articleಬೆಂಗಳೂರ: ಜಿಬಿಎಯಿಂದ 574 ಪಿಜಿ ಗಳಿಗೆ ಬಿಗ್‌ ಶಾಕ್
Next articleಹೆಂಡತಿಯ ಅಕ್ರಮ ಸಂಬಂಧ! ಅಣ್ಣನ ಬಲಿತೆಗೆದ ‘ಕಾಮ’ಕಾಂಡ; ಖ್ಯಾತ ಜ್ಯೋತಿಷಿ ಈಗ ಅಂದರ್!