Home Advertisement
Home ನಮ್ಮ ಜಿಲ್ಲೆ ಚಿತ್ರದುರ್ಗ 48 ಕೋಟಿ ರೂ. ಹಗರಣ: ತಪ್ಪಿತಸ್ಥ ಅಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ

48 ಕೋಟಿ ರೂ. ಹಗರಣ: ತಪ್ಪಿತಸ್ಥ ಅಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದ ಸರ್ಕಾರ

0
47

ಚಿತ್ರದುರ್ಗ: ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ ಬರ ಪರಿಹಾರ ಮತ್ತು ಬೆಳೆ ವಿಮೆ ವಿತರಣೆಯಲ್ಲಿ ನಡೆದಿದೆ ಎನ್ನಲಾದ ಬರೋಬ್ಬರಿ 48 ಕೋಟಿ ರೂ. ಗಳ ಬೃಹತ್ ಅಕ್ರಮವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.

ಈ ಹಗರಣದಲ್ಲಿ ಬರೋಬ್ಬರಿ 201 ಗ್ರಾಮ ಆಡಳಿತಾಧಿಕಾರಿಗಳು ಹಾಗೂ 6 ತಹಶೀಲ್ದಾರ್‌ಗಳು ಶಾಮೀಲಾಗಿದ್ದು, ಇವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆಗೆ ತಿಳಿಸಿದರು.

ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಅವರು ನಿಯಮ 73ರ ಅಡಿಯಲ್ಲಿ ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದ ಸಚಿವರು, ಅಕ್ರಮದ ಕರಾಳ ಮುಖವನ್ನು ಸದನದಲ್ಲಿ ಬಿಚ್ಚಿಟ್ಟರು.

2022-23ನೇ ಸಾಲಿನ ಬೆಳೆ ಹಾನಿ ಪರಿಹಾರದ ಹಣವನ್ನು ರೈತರಲ್ಲದವರ ಖಾತೆಗೆ, ಅನರ್ಹ ಫಲಾನುಭವಿಗಳಿಗೆ ಮತ್ತು ಆಘಾತಕಾರಿ ಸಂಗತಿಯೆಂದರೆ ಕೆಲವು ಪ್ರಕರಣಗಳಲ್ಲಿ ಖುದ್ದು ಗ್ರಾಮ ಆಡಳಿತಾಧಿಕಾರಿಗಳೇ ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿಕೊಂಡಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು ರೂ. 47.99 ಕೋಟಿಗಳಷ್ಟು ಆರ್ಥಿಕ ನಷ್ಟ ಉಂಟಾಗಿದೆ ಎಂದು ಸಚಿವರು ಒಪ್ಪಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 201 ಗ್ರಾಮ ಆಡಳಿತಾಧಿಕಾರಿಗಳು ಹಾಗೂ 06 ತಹಶೀಲ್ದಾರ್‌ಗಳನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಭೂಮಿ ತಂತ್ರಾಂಶದ ಮೂಲಕ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಒಟ್ಟು 42,958 ಫಲಾನುಭವಿಗಳಿಗೆ ಅಕ್ರಮವಾಗಿ ಹಣ ಸಂದಾಯ ಮಾಡಲಾಗಿದೆ. ಈ ಬಗ್ಗೆ ‘ಭೂಮಿ ಉಸ್ತುವಾರಿ ಕೋಶ’ದ ಮೂಲಕ ಆಳವಾದ ತನಿಖೆ ನಡೆಯುತ್ತಿದ್ದು, ಅಧಿಕಾರಿಗಳು ಲಾಗಿನ್ ಆಗಲು ಬಳಸಿದ ಕಂಪ್ಯೂಟರ್‌ಗಳ ಐಪಿ ಅಡ್ರೆಸ್ (IP Address), ಲಾಗಿನ್ ದಿನಾಂಕ ಮತ್ತು ಸಮಯವನ್ನು ಪರಿಶೀಲಿಸಲಾಗುತ್ತಿದೆ. ಕಚೇರಿ ಅವಧಿಯ ಹೊರತಾಗಿ ಅಥವಾ ರಜಾ ದಿನಗಳಲ್ಲಿ ಲಾಗಿನ್ ಆಗಿ ಈ ಅಕ್ರಮ ಎಸಗಲಾಗಿದೆಯೇ ಮತ್ತು ಹೊರಗಿನ ವ್ಯಕ್ತಿಗಳಿಗೆ ಪಾಸ್‌ವರ್ಡ್ ನೀಡಿ ಅಕ್ರಮ ನಡೆಸಲಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಇದೇ ವೇಳೆ, ಚಳ್ಳಕೆರೆ ತಾಲೂಕಿನಲ್ಲಿ 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೂ. 83.10 ಲಕ್ಷ ಬೆಳೆ ವಿಮೆ (ಫಸಲ್ ಬಿಮಾ) ಪರಿಹಾರ ವಿತರಣೆಯಲ್ಲಿ ಲೋಪ ಎಸಗಲಾಗಿದೆ. ಮಾರ್ಗಸೂಚಿ ಉಲ್ಲಂಘಿಸಿದ ‘ಯುನಿವರ್ಸಲ್ ಸೋಂಪೋ ಜನರಲ್ ಇನ್ಶೂರೆನ್ಸ್’ (USGIC) ಸಂಸ್ಥೆಯ ವಿರುದ್ಧ ಪರಶುರಾಮಪುರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ (FIR No: 0181/2023) ದಾಖಲಿಸಲಾಗಿದೆ.

ವಿಮಾ ಕಂಪನಿಯು ಹೈಕೋರ್ಟ್‌ನಿಂದ ತನಿಖೆಗೆ ತಡೆಯಾಜ್ಞೆ (Stay) ತಂದಿದ್ದು, ಇದನ್ನು ತೆರವುಗೊಳಿಸಲು (Vacating Stay) ಸರ್ಕಾರವು ಅಡ್ವೋಕೇಟ್ ಜನರಲ್ ಮೂಲಕ ಪ್ರಬಲ ಕಾನೂನು ಹೋರಾಟ ನಡೆಸುತ್ತಿದೆ ಎಂದು ಕಂದಾಯ ಸಚಿವರು ಸ್ಪಷ್ಟಪಡಿಸಿದರು.

ಅಕ್ರಮವಾಗಿ ಹಣ ಪಡೆದವರ ಬ್ಯಾಂಕ್ ಖಾತೆಗಳ E-KYC ವಿವರಗಳನ್ನು ಪರಿಶೀಲಿಸಿ, ಅವರಿಗೂ ಮತ್ತು ಹಣ ವರ್ಗಾವಣೆ ಮಾಡಿದ ಅಧಿಕಾರಿಗಳಿಗೂ ಇರುವ ಸಂಬಂಧವನ್ನು ಪತ್ತೆ ಹಚ್ಚಿ, ಹಣ ವಸೂಲಾತಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಭರವಸೆ ನೀಡಿದೆ.

Previous article`ಗ್ರ‍್ಯಾಮಿ’ ಗೌರವ ಜಾಗತಿಕ ಜವಾಬ್ದಾರಿಯ ಹಂಚಿಕೆ
Next articleಚಿನ್ನಾಭರಣ ಮರಳಿಸಿ ಪ್ರಾಮಾಣಿಕತೆ ಮೆರೆದ ಬಸ್ ಚಾಲಕ