ವಿಜಯಪುರ: ಭವಿಷ್ಯದಲ್ಲಿ ಮುಖ್ಯಮಂತ್ರಿಯಾಗುವ ಅರ್ಹತೆ ಇರುವ ವ್ಯಕ್ತಿ ನಾನು. ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆಯಂತಹುದ್ದೆಲ್ಲ ನನ್ನ ಯೋಗ್ಯತೆಗೆ ಸರಿಯಾದ ಹುದ್ದೆಯಲ್ಲ ಎಂದು ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಹೇಳಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸಿದ್ಧಾಂತವೇ ನನ್ನ ಉಸಿರು, ಇದು ನನ್ನ ಬದ್ಧತೆ, ಆದರೆ ಕಾರ್ಯಾಧ್ಯಕ್ಷನಾಗಲಾರೆ ಎಂದು ಸ್ಪಷ್ಟಪಡಿಸಿದರು.
ಹೋರಾಟಕ್ಕಾಗಿ ಸಿದ್ದರಾಮಯ್ಯ-ಜಾರಕಿಹೊಳಿ ಅವರನ್ನೂ ಕಾಯಲ್ಲ. ಅವಕಾಶ ವಂಚಿತರು ನಿತ್ಯ ಹೋರಾಡುತ್ತಾರೆ. ಸ್ವಾತಂತ್ರ್ಯ ಹಾಗೂ ಸಂವಿಧಾನದ ಆಶಯಗಳನ್ನು ಸಂಪೂರ್ಣಗೊಳಿಸಬೇಕು, ಈ ವಿಷಯದಲ್ಲಿ ಕಾಂಗ್ರೆಸ್ ಎಡವಿದರೆ ಕಾಂಗ್ರೆಸ್ಗೂ ಅಪಾಯ ತಪ್ಪಿದಲ್ಲ ಎಂದು ಎಚ್ಚರಿಸಿದರು.
ಸತಿ ಸಹಗಮನ ಪದ್ಧತಿ ನಿಷೇಧದ ಕೂಗಿಗೆ ವಿರೋಧಿಸಿದ್ದ ವ್ಯಕ್ತಿಗಳ ಸಂತತಿಗಳೇ ಇಂದು ಮಹಿಳಾ ಸಮಾನತೆಯ ಬಗ್ಗೆ ಮಾತನಾಡುತ್ತಿದ್ದಾರೆ, ಯುಪಿಎ ಸರ್ಕಾರ ಇದ್ದಾಗಲೇ ಮಹಿಳಾ ಮೀಸಲಾತಿ ಬಿಲ್ ಸಂಸತ್ನಲ್ಲಿ ಪಾಸ್ ಆಗಿತ್ತು, ರಾಜ್ಯಸಭೆಯಲ್ಲಿ ಬಹುಮತ ಇಲ್ಲದ ಕಾರಣ ಜಾರಿ ಮಾಡಲು ಸಾಧ್ಯವಾಗಿಲ್ಲ, ಜನಗಣತಿ ಅಂಕಿ ಸಂಖ್ಯೆ ಬಂದಿಲ್ಲಾ, ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಅದೇ ತೆರನಾಗಿ ಡಿಲಿಮಿಟೇಷನ್ ನಮ್ಮ ಭಾಗದ ರಾಜ್ಯಗಳಿಗೆ ಅನ್ಯಾಯವಾಗುತ್ತದೆ. ಜನಸಂಖ್ಯೆ ಆಧಾರದ ಮೇಲೆ ನಿರಂತರ ಆಧಿಕಾರದಲ್ಲಿರಬೇಕೆಂಬ ಹುನ್ನಾರವಿದು. ಪ್ರಜಾಪ್ರಭುತ್ವವನ್ನು ಸರ್ವಾಧಿಕಾರತ್ವದ ಕಡೆ ಒಯ್ಯುವ ಪ್ರಯತ್ನದ ಭಾಗ ಇದು ಎಂದರು.






















