ಮೂಡಿಗೆರೆ: ಕಾಡಾನೆ ಹಾವಳಿಯಿಂದ ಸಂಕಷ್ಟಕ್ಕೀಡಾಗಿರುವ ಕ್ಷೇತ್ರದ ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ರಾಜೀನಾಮೆ ನೀಡಲು ಮುಂದಾಗಿದ್ದೇನೆಯೇ ಹೊರತು, ಯಾವುದೇ ರಾಜಕೀಯ ಡ್ರಾಮಾ ಮಾಡಿಲ್ಲ. ಡ್ರಾಮಾ ಮಾಡುವ ಅಗತ್ಯವೂ ನನಗಿಲ್ಲ ಎಂದು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಸ್ಪಷ್ಟಪಡಿಸಿದರು.
ಮೂಡಿಗೆರೆಯಲ್ಲಿ ಕಾಡಾನೆ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಬೇಲೂರು ಭಾಗದಿಂದ 56 ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸಲು ಆದೇಶಿಸಲಾಗಿತ್ತು. ಆದರೆ, ಆನೆಗಳ ಸ್ಥಳಾಂತರ ಕಾರ್ಯಾಚರಣೆಗೆ ಕುಂದೂರು, ವಸ್ತಾರೆ, ಆಲ್ದೂರು, ಮೂಡಿಗೆರೆ, ಮಾಕೋನಹಳ್ಳಿ ಹಾಗೂ ನಂದಿಪುರ ಭಾಗದ ಜನರಿಂದ ವಿರೋಧ ವ್ಯಕ್ತವಾಗಿತ್ತು. ಮೂಡಿಗೆರೆ ಬಂದ್ ಹಾಗೂ ಪ್ರತಿಭಟನೆಗಳಲ್ಲೂ ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಅಟ್ಟಬಾರದು ಎಂಬ ಒತ್ತಾಯ ಕೇಳಿಬಂದಿತ್ತು. ಮತ್ತೊಂದೆಡೆ ಮಾಕೋನಹಳ್ಳಿ ಪ್ರತಿಭಟನೆಯಲ್ಲಿ ಆನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವಂತೆ ಆಗ್ರಹಿಸಲಾಗಿತ್ತು. ಹೀಗಾಗಿ ನಾಲ್ಕು ವಿಧಾನ ಸಭಾ ಕ್ಷೇತ್ರಗಳ ಜನರ ಹಿತದೃಷ್ಟಿಯಿಂದ ಸಮಸ್ಯೆಯನ್ನು ಸೂಕ್ಷ್ಮವಾಗಿ ಪರಿಗಣಿಸಬೇಕಿದೆ ಎಂದರು.
ಈಗಾಗಲೇ 39 ಕಾಡಾನೆಗಳ ಪೈಕಿ 22 ಆನೆಗಳು ಬೇಲೂರು ಭಾಗದತ್ತ ತೆರಳಿ ರುವ ಮಾಹಿತಿ ಇದೆ. ನ. 30ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಭೆಯಲ್ಲಿ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ, ರೈತರ ಬೆಳೆ ನಷ್ಟ ಹಾಗೂ ಜನರ ಜೀವ ಹಾನಿ ತಪ್ಪಿಸುವ ಕುರಿತು ಗಂಭೀರ ಚರ್ಚೆ ನಡೆಸಲಾಗುವುದು. ಯಾರೂ ಆತಂಕಪಡುವ ಅಗತ್ಯವಿಲ್ಲ. ಸರ್ಕಾರದ ಮಟ್ಟದಲ್ಲಿ ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆ ಎಂದು ಭರವಸೆ ನೀಡಿದರು.






















