SK Home Ad
Home ನಮ್ಮ ಜಿಲ್ಲೆ ರಾಮನಗರ ಹೈಸ್ಕೂಲ್‌ಗೆ ಸೀಟು ಸಿಗಲಿಲ್ಲ, ಅಂದೇ ಶಾಸಕನಾಗುವ ಸಂಕಲ್ಪ ಮಾಡಿದ್ದೆ

ಹೈಸ್ಕೂಲ್‌ಗೆ ಸೀಟು ಸಿಗಲಿಲ್ಲ, ಅಂದೇ ಶಾಸಕನಾಗುವ ಸಂಕಲ್ಪ ಮಾಡಿದ್ದೆ

0
47

ಸಾತನೂರು: ಬಾಲ್ಯದಲ್ಲಿ ಹೈಸ್ಕೂಲ್‌ಗೆ ಪ್ರವೇಶ ಪಡೆಯಲು ಪ್ರಯತ್ನಿಸಿದರೂ ಸೀಟು ಸಿಗಲಿಲ್ಲ. ಅಂದೇ ಶಾಸಕನಾಗಬೇಕು ಎಂಬ ದೊಡ್ಡ ಸಂಕಲ್ಪ ಮಾಡಿದ್ದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಸಾತನೂರಿನಲ್ಲಿ ರೂರಲ್ ಎಜುಕೇಷನ್ ಸೊಸೈಟಿ ವತಿಯಿಂದ ಆರಂಭಿಸಿರುವ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಶಿವಕುಮಾರ್ ಅವರು ಶನಿವಾರ ಉದ್ಘಾಟಿಸಿ ಮಾತನಾಡಿ, ಇಂದು ಮುಖ್ಯಮಂತ್ರಿ ಆಗಿದ್ದರೂ ಕನಕಪುರ ಕ್ಷೇತ್ರದ ಜನರಿಗೆ ನಾನು ಮುಖ್ಯಮಂತ್ರಿ ಅಲ್ಲ, ಮನೆಮಗ ಮತ್ತು ಸೇವಕ. ಮುಖ್ಯಮಂತ್ರಿ ಸ್ಥಾನ ನನ್ನ ಕರ್ತವ್ಯವಷ್ಟೇ ಎಂದರು.

“ರೂರಲ್ ಎಜುಕೇಷನ್ ಸೊಸೈಟಿ ಸಂಸ್ಥೆಯನ್ನು ಸೊರೆಕಾಯಿ ದೊಡ್ಡಿ ಕರಿಯಪ್ಪನವರು ಆರಂಭಿಸಿದ್ದರು. ನನಗೂ ಶಿಕ್ಷಣದ ಬಗ್ಗೆ ಅಪಾರ ಆಸಕ್ತಿ ಇತ್ತು. ಆದರೆ ಅವರ ಸಂಸ್ಥೆಗೆ ಸ್ಪರ್ಧೆಯಾಗಿ ಮತ್ತೊಂದು ಶಿಕ್ಷಣ ಸಂಸ್ಥೆ ಸ್ಥಾಪಿಸಬಾರದು ಎಂಬ ಉದ್ದೇಶದಿಂದ ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಿದೆ. ಬಾಲ್ಯದಲ್ಲಿ ಕರಿಯಪ್ಪನವರು, ನಮ್ಮ ಹಿರಿಯರು ನನ್ನನ್ನು ಹೈಸ್ಕೂಲ್‌ಗೆ ಸೇರಿಸಲು ಪ್ರಯತ್ನಿಸಿದ್ದರು. ಅಂದಿನ ಶಿಕ್ಷಣ ಸಚಿವ ಮಲ್ಲಿಕಾರ್ಜುನ ಸ್ವಾಮಿ ಅವರ ಬಳಿಗೂ ಕರೆದೊಯ್ದರೂ ಪ್ರವೇಶ ಸಿಗಲಿಲ್ಲ. ಅಂದೇ ರಾಜಕೀಯಕ್ಕೆ ಬಂದು ಶಾಸಕನಾಗಬೇಕು ಎಂದು ನಿರ್ಧರಿಸಿದ್ದೆ ಎಂದು ಸ್ಮರಿಸಿದರು.
ರಾಜಕೀಯದಲ್ಲಿ ಬೆಳೆದು ಇಂದು ನಿಮ್ಮ ಮುಂದೆ ರಾಜ್ಯದ ಪ್ರತಿನಿಧಿಯಾಗಿ, ಮುಖ್ಯಮಂತ್ರಿಯಾಗಿ ನಿಂತಿದ್ದೇನೆ. ಆದರೆ ಬೆಂಗಳೂರಿನಲ್ಲಿ ಏನೇ ಇದ್ದರೂ ಈ ಕ್ಷೇತ್ರಕ್ಕೆ ಬಂದಾಗ ನಿಮ್ಮ ಸೇವಕ, ನಿಮ್ಮ ಮನೆಮಗ. ನಿಮ್ಮ ತಂದೆ-ತಾಯಂದಿರು ಮತ್ತು ಕಾರ್ಯಕರ್ತರ ಮುಂದೆ ನಾನು ಮುಖ್ಯಮಂತ್ರಿ ಎಂಬುದಕ್ಕಿಂತ ನನ್ನ ಕರ್ತವ್ಯ ಮುಖ್ಯ ಎಂದು ಹೇಳಿದರು.

ಹಿಂದೆ ಕನಕಪುರ ಮತ್ತು ಸಾತನೂರು ಹೇಗಿದ್ದವು, ಇಂದು ಹೇಗೆ ಅಭಿವೃದ್ಧಿಯಾಗಿವೆ ಎಂಬುದನ್ನು ಮುಂದಿನ ಪೀಳಿಗೆಗೆ ತಿಳಿಸಬೇಕು. ಈ ಉದ್ದೇಶದಿಂದ ಕನಕಪುರ, ಸಾತನೂರು ಹಾಗೂ ಕಬ್ಬಾಳ ದೇವಸ್ಥಾನ ಸೇರಿದಂತೆ ಕ್ಷೇತ್ರದ ಹಿಂದಿನ ಮತ್ತು ಇಂದಿನ ಚಿತ್ರಣವನ್ನು ಒಳಗೊಂಡ ಸಾಕ್ಷ್ಯಚಿತ್ರ ರೂಪಿಸುವಂತೆ ಸೂಚಿಸಿದ್ದೇನೆ ಎಂದರು.

ಹಿಂದೆ ಸಾತನೂರಿಗೆ ಬರಲು ಕೇವಲ 12 ಅಡಿ ರಸ್ತೆ ಇತ್ತು. ಕನಕಪುರ ಪಟ್ಟಣದ ರಸ್ತೆಗಳ ಸ್ಥಿತಿಯೂ ಉತ್ತಮವಾಗಿರಲಿಲ್ಲ. ಕೈಗಾರಿಕೆಗಳನ್ನು ತರಲು ಬಿಡಿಎ ಅಧಿಕಾರಿಗಳನ್ನು ಕರೆತಂದಾಗ, ರಸ್ತೆಗಳ ದುಸ್ಥಿತಿಯಿಂದ ಲಾರಿಗಳೇ ಬರಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು. ಬಳಿಕ ಬೈಪಾಸ್ ರಸ್ತೆ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಪಡಿಸಿ ಕ್ಷೇತ್ರವನ್ನು ಈ ಮಟ್ಟಕ್ಕೆ ತಂದಿದ್ದೇವೆ ಎಂದು ಸ್ಮರಿಸಿದರು.

ಶಿವನಹಳ್ಳಿಯಲ್ಲಿ ನಿರ್ಮಿಸಿರುವ ಹಾಲಿನ ಡೇರಿ ಇಡೀ ದೇಶಕ್ಕೆ ಮಾದರಿಯಾಗಿದೆ. ಕಬ್ಬಾಳ ದೇವಸ್ಥಾನದ ಹಳೆಯ ಚಿತ್ರಗಳೂ ನಮ್ಮ ಬಳಿ ಇವೆ. ಹಿಂದಿನ ಸ್ಥಿತಿ ಮತ್ತು ಇಂದಿನ ಬದಲಾವಣೆಯನ್ನು ಯುವಜನರು ಅರಿತುಕೊಳ್ಳಬೇಕು. ಕೆರೆಗಳಿಗೆ ನೀರು ತುಂಬಿಸುವುದರಿಂದ ಅಂತರ್ಜಲ ಹೆಚ್ಚಾಗಿದೆ. ಇದರಿಂದ ರೈತರು ರೇಷ್ಮೆ, ಹೂವು, ತರಕಾರಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲು ಅನುಕೂಲವಾಗಿದೆ. ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿಯಿಂದ ಆಸ್ತಿಗಳ ಮೌಲ್ಯವೂ ಹೆಚ್ಚಾಗಿದೆ. ಈ ಬೆಳವಣಿಗೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಯುವಜನರ ಮೇಲಿದೆ ಎಂದು ಹೇಳಿದರು.