ದಾವಣಗೆರೆ: ಕುರ್‌ಕುರೆ ಪ್ಯಾಕೆಟ್‌ನಲ್ಲಿದ್ದ ರಬ್ಬರ್ ಬಾಲ್ ನುಂಗಿ ನಾಲ್ಕು ವರ್ಷದ ಬಾಲಕಿ ಮೃತಪಟ್ಟ ಘಟನೆ ಪಟ್ಟಣದ ಕೌಸರ್ ಮಸೀದಿ ಬಳಿ ಗುರುವಾರ ಸಂಜೆ ನಡೆದಿದೆ.
ಚನ್ನಗಿರಿ ಪಟ್ಟಣದ ಕೌಸರ್ ಮಸೀದಿ ಸಮೀಪದ ಮಹಮ್ಮದ್ ಜಮೀರ್ ಅವರ ಪುತ್ರಿ ಅಲೀಜಾ ಶೇಖ್ (4) ಮೃತಪಟ್ಟ ಬಾಲಕಿ.
ಬಾಲಕಿ ಬೇಬಿ ಸಿಟ್ಟಿಂಗ್‌ಗೆ ಹೋಗುತ್ತಿದ್ದಳು. ಗುರುವಾರ ಸಂಜೆ ಮಕ್ಕಳಿಗೆ ಮಾರಾಟ ಮಾಡುವ ₹5 ಬೆಲೆಯ ಕುರ್‌ಕುರೆ ಪ್ಯಾಕೆಟ್ ತಿಂದ ಬಳಿಕ ಅದರೊಳಗಿದ್ದ ರಬ್ಬರ್ ಬಾಲ್ ಅನ್ನು ಬಾಯಿಗೆ ಹಾಕಿಕೊಂಡು ನುಂಗಿದ್ದಾಳೆ ಎನ್ನಲಾಗಿದೆ. ಬಾಲ್ ಗಂಟಲಿನಲ್ಲಿ ಸಿಲುಕಿಕೊಂಡ ಪರಿಣಾಮ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.
ತಕ್ಷಣ ಬಾಲಕಿಯನ್ನು ಚನ್ನಗಿರಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದ್ದು, ಗಂಟಲಿನಲ್ಲಿ ಬಾಲ್ ಸಿಲುಕಿರುವುದು ಕಂಡುಬಂದಿದೆ. ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಂದೆ ಮಹಮ್ಮದ್ ಜಮೀರ್ ತಿಳಿಸಿದ್ದಾರೆ.
ಮಹಮ್ಮದ್ ಜಮೀರ್ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗ ಇದ್ದು, ಮೂರನೇ ಮಗುವನ್ನು ಕಳೆದುಕೊಂಡ ಕುಟುಂಬದ ದುಃಖ ಮುಗಿಲು ಮುಟ್ಟಿದೆ.




















