SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಕನಕದಾಸರ ಕೀರ್ತನೆಗಳು ಸಾಮರಸ್ಯದ ಸಮಾಜ ನಿರ್ಮಾಣಕ್ಕೆ ಪ್ರೇರಣೆ

ಕನಕದಾಸರ ಕೀರ್ತನೆಗಳು ಸಾಮರಸ್ಯದ ಸಮಾಜ ನಿರ್ಮಾಣಕ್ಕೆ ಪ್ರೇರಣೆ

0
6

ದಾವಣಗೆರೆ: ಸಮಾಜದಲ್ಲಿ ಶಾಂತಿ, ಸಮಾನತೆ ಮತ್ತು ಸಾಮರಸ್ಯ ಮೂಡಿಸುವಲ್ಲಿ ಕನಕದಾಸರ ಕೀರ್ತನೆಗಳು ಹಾಗೂ ತತ್ವಗಳು ಸಾರ್ವಕಾಲಿಕ ಪ್ರಸ್ತುತವಾಗಿವೆ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ ಹೇಳಿದರು.

ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ದಾಸಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನಕದಾಸರ ನಾಲ್ಕು ಸಾಲಿನ ಕೀರ್ತನೆಗಳು ಸಮಾಜದಲ್ಲಿ ಬದಲಾವಣೆ ತರಲು ಹಾಗೂ ಎಲ್ಲರಲ್ಲಿಯೂ ಏಕತೆಯ ಭಾವನೆ ಮೂಡಿಸಲು ಶಕ್ತಿಯುತವಾಗಿವೆ. ಬಸವಣ್ಣ, ವಾಲ್ಮೀಕಿ ಹಾಗೂ ಕನಕದಾಸರಂತಹ ಮಹನೀಯರು ತಮ್ಮ ಚಿಂತನೆ ಮತ್ತು ಸಂದೇಶಗಳ ಮೂಲಕ ಸಮಾಜದಲ್ಲಿ ಶಾಂತಿ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಆಶಯಗಳನ್ನು ಸಾರಿದ್ದಾರೆ ಎಂದರು.

ಕನಕದಾಸರ ಅಧ್ಯಯನ ಪೀಠಗಳ ಸ್ಥಾಪನೆ, ಕೀರ್ತನೆಗಳ ಪ್ರಸಾರ ಹಾಗೂ ಅವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಗ್ಯಾರಂಟಿ ಯೋಜನೆಗಳ ಮೂಲಕ ಸಮಾಜದ ಎಲ್ಲ ವರ್ಗಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕನಕದಾಸರ ಕೀರ್ತನೆಗಳು ಸಾವಿರಾರು ಪುಟಗಳ ಗ್ರಂಥಗಳಿಗೆ ಸಮಾನವಾದ ಜ್ಞಾನ ಹಾಗೂ ಚಿಂತನೆಗಳನ್ನು ಒಳಗೊಂಡಿವೆ. ನಾಲ್ಕು ಸಾಲುಗಳ ಕೀರ್ತನೆಗಳಲ್ಲಿಯೇ ಸಮಾಜವನ್ನು ಪರಿವರ್ತಿಸುವ ಮತ್ತು ಮನುಷ್ಯರಲ್ಲಿ ಸಮಾನತೆ, ಸಾಮರಸ್ಯ ಮೂಡಿಸುವ ಶಕ್ತಿ ಅಡಗಿದೆ. ಉಡುಪಿಯ ಕೃಷ್ಣಮಠದಲ್ಲಿ ಕನಕದಾಸರ ಸ್ಮರಣೆ ಹಾಗೂ ಭಕ್ತಿಯ ಮೂಲಕ ದೇವರನ್ನು ಒಲಿಸಿಕೊಂಡ ಅವರ ಆದರ್ಶವೂ ನಮಗೆ ಪ್ರೇರಣೆಯಾಗಬೇಕು ಎಂದರು.

ಎಲ್ಲ ಸಮುದಾಯಗಳ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಏಳಿಗೆಗೆ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಅರ್ಹರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಕುರಿ ಕಾಯುವ ಕಾಯಕದಲ್ಲಿಯೂ ನಿಷ್ಠೆ, ಶ್ರಮ ಹಾಗೂ ಸ್ವಾಭಿಮಾನವನ್ನು ಪ್ರತಿಬಿಂಬಿಸುವ ಕುರುಬ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸರ್ಕಾರ ಸದಾ ಬೆನ್ನೆಲುಬಾಗಿ ನಿಲ್ಲಲಿದೆ. ಸಮಾಜದ ಒಳಿತಿಗಾಗಿ ಹೋರಾಟ ನಡೆಸಿದ ಕೆಂಗೋ ಹನುಮಂತಪ್ಪ ಸೇರಿದಂತೆ ಹಲವು ಮುಖಂಡರು ಹಾಗೂ ಹೋರಾಟಗಾರರ ಸೇವೆಯನ್ನು ಸ್ಮರಿಸಬೇಕು ಎಂದರು.

ಎಸ್ಪಿ ಡಾ.ಎಚ್.ಟಿ. ಶೇಖರ್ ಮಾತನಾಡಿದರು. ಸುಮತಿ ಜಯಪ್ಪ ಉಪನ್ಯಾಸ ನೀಡಿದರು. ಕಾರ್ಯಕ್ರಮಕ್ಕೂ ಮುನ್ನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಚಿವ ಕೆ.ಎಸ್. ಬಸವಂತಪ್ಪ, ಶಾಸಕ ಸಮರ್ಥ್ ಶಾಮನೂರು, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯಿತಿ ಸಿಇಒ ಸಾಹಿತ್ಯ ಎಂ. ಆಲದಕಟ್ಟಿ ಹಾಗೂ ಸಮುದಾಯದ ಮುಖಂಡರು ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಸಮುದಾಯದ ಮುಖಂಡರಾದ ಪರಮೇಶ್ವರಪ್ಪ, ಗಾಣಪ್ಪ, ರಮೇಶ್, ಶಿವಣ್ಣ, ಮಂಜುನಾಥ, ರುದ್ರಮುನಿ, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಯೋಜನಾ ನಿರ್ದೇಶಕ ವೀರೇಶ್, ಅಬಕಾರಿ ಸಹಾಯಕ ಆಯುಕ್ತ ಚಿದಾನಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.