SK Home Ad
Home ಸುದ್ದಿ ದೇಶ ತಿಮ್ಮಪ್ಪನ ಪರಮಭಕ್ತ ಉದ್ಯಮಿ: ಈ ಹಿಂದೆಯೂ ಕೋಟಿ ಕೋಟಿ ದೇಣಿಗೆ!

ತಿಮ್ಮಪ್ಪನ ಪರಮಭಕ್ತ ಉದ್ಯಮಿ: ಈ ಹಿಂದೆಯೂ ಕೋಟಿ ಕೋಟಿ ದೇಣಿಗೆ!

0
53

ತಿರುಪತಿ: ತಿರುಮಲ ತಿಮ್ಮಪ್ಪನ ಭಕ್ತರಾಗಿರುವ ಚೆನ್ನೈ ಮೂಲದ ಉದ್ಯಮಿ ವರ್ಧಮಾನ್ ಜೈನ್ ಅವರು, ದೇವರಿಗೆ ಅಪಾರ ಪ್ರಮಾಣದ ದೇಣಿಗೆ ನೀಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಗುರುವಾರ ಪತ್ನಿ ರಾಧಿಕಾ ಜೈನ್ ಅವರೊಂದಿಗೆ ತಿರುಮಲಕ್ಕೆ ಭೇಟಿ ನೀಡಿದ ಅವರು, ಬರೋಬ್ಬರಿ 121 ಕೆ.ಜಿ. ತೂಕದ, ವಜ್ರ ಸೇರಿದಂತೆ ಅಮೂಲ್ಯ ಹರಳುಗಳಿಂದ ಅಲಂಕರಿಸಲಾದ ಚಿನ್ನಾಭರಣಗಳನ್ನು ಸಮರ್ಪಿಸಿದ್ದಾರೆ. ಈ ಆಭರಣಗಳ ಮೌಲ್ಯ ಸುಮಾರು 206 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಆಕ್ಸೆಸ್ ಹೆಲ್ತ್‌ಕೇರ್ ಸಂಸ್ಥೆಯ ಸಂಸ್ಥಾಪಕ ಹಾಗೂ ಉಪಾಧ್ಯಕ್ಷರಾಗಿರುವ ವರ್ಧಮಾನ್ ಜೈನ್, ಇದೇ ಮೊದಲ ಬಾರಿಗೆ ತಿರುಪತಿ ದೇವಸ್ಥಾನಕ್ಕೆ ಇಷ್ಟೊಂದು ದೊಡ್ಡ ಮೊತ್ತದ ದೇಣಿಗೆ ನೀಡುತ್ತಿರುವುದಲ್ಲ. ಈ ಹಿಂದೆಯೂ ಹಲವು ಬಾರಿ ಟಿಟಿಡಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಕೊಡುಗೆಗಳನ್ನು ನೀಡಿದ್ದಾರೆ.

ಟಿಟಿಡಿಗೆ ಈ ಹಿಂದಿನ ಕೊಡುಗೆಗಳೇನು?: ವರ್ಧಮಾನ್ ಜೈನ್ ಅವರು 2019ರಿಂದಲೂ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ವ್ಯಾಪ್ತಿಯ ವಿವಿಧ ಧಾರ್ಮಿಕ ಹಾಗೂ ಸೇವಾ ಕಾರ್ಯಗಳಿಗೆ ಆರ್ಥಿಕ ನೆರವು ನೀಡುತ್ತಾ ಬಂದಿದ್ದಾರೆ.

  • 7 ಕೋಟಿ ರೂ. ದೇಣಿಗೆ: ಶ್ರೀ ವೆಂಕಟೇಶ್ವರ ಭಕ್ತಿ ಚಾನೆಲ್ (ಎಸ್‌ವಿಬಿಸಿ) ಅಭಿವೃದ್ಧಿಗಾಗಿ 7 ಕೋಟಿ ರೂ. ನೀಡಿದ್ದಾರೆ.
  • 5 ಕೋಟಿ ರೂ. ವೆಚ್ಚದ ಪಶು ಆಹಾರ ಘಟಕ: ಟಿಟಿಡಿ ಗೋಶಾಲೆಯಲ್ಲಿ ಪಶುಗಳಿಗೆ ಪೌಷ್ಟಿಕ ಆಹಾರ ಸಿದ್ಧಪಡಿಸುವ ಮಿಶ್ರಣ ಘಟಕ ಸ್ಥಾಪನೆಗೆ 5 ಕೋಟಿ ರೂ. ಕೊಡುಗೆ ನೀಡಿದ್ದಾರೆ.
  • 1 ಕೋಟಿ ರೂ. ಮೌಲ್ಯದ ಯಂತ್ರ: ಭಕ್ತರು ಹುಂಡಿಗೆ ಹಾಕುವ ನಾಣ್ಯಗಳನ್ನು ವಿಂಗಡಿಸಿ ಎಣಿಸುವ ಯಂತ್ರ ಖರೀದಿಗೆ 1 ಕೋಟಿ ರೂ. ನೀಡಿದ್ದಾರೆ.
  • ಎಲೆಕ್ಟ್ರಿಕ್ ಬಸ್‌ಗಳ ಕೊಡುಗೆ: ಭಕ್ತರ ಸಾರಿಗೆ ವ್ಯವಸ್ಥೆಗೆ ಅನುಕೂಲವಾಗುವಂತೆ ಟಿಟಿಡಿಗೆ ಎಲೆಕ್ಟ್ರಿಕ್ ಬಸ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

2025ರಲ್ಲೂ 6 ಕೋಟಿ ರೂ. ದೇಣಿಗೆ: 2025ರ ಜನವರಿಯಲ್ಲಿ ವರ್ಧಮಾನ್ ಜೈನ್ ಅವರು ಎಸ್‌ವಿಬಿಸಿ ಅಭಿವೃದ್ಧಿಗೆ 5 ಕೋಟಿ ರೂ. ಹಾಗೂ ಶ್ರೀ ವೆಂಕಟೇಶ್ವರ ಗೋ ಸಂರಕ್ಷಣಾ ಟ್ರಸ್ಟ್‌ಗೆ 1 ಕೋಟಿ ರೂ. ಸೇರಿದಂತೆ ಒಟ್ಟು 6 ಕೋಟಿ ರೂ. ದೇಣಿಗೆ ನೀಡಿದ್ದರು. ಇದಕ್ಕೂ ಮೊದಲು 2020ರಲ್ಲಿ ಗೋ ಸಂರಕ್ಷಣಾ ಟ್ರಸ್ಟ್‌ಗೆ 1.11 ಕೋಟಿ ರೂ. ಹಾಗೂ ಎಸ್‌ವಿಬಿಸಿಗೆ 2.10 ಕೋಟಿ ರೂ. ಕೊಡುಗೆ ನೀಡಿದ್ದರು.