ಗುರುವಾರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಮೋಹನ ಹೆಗಡೆ ಅವರ ಅಂಕಣ
ಹಳ್ಳಿ-ಗ್ರಾಮಗಳ ಮೂಲೆಯಲ್ಲಿ ಕುಳಿತಿರುವ ಮಂದಿ ಈಗ ದೊಡ್ಡ ಕಂಗಳನ್ನು ಬಿಟ್ಟು ಕೌತುಕದಿಂದ ನೋಡುತ್ತಿದ್ದಾರೆ… ನಮ್ಮೂರ ರಸ್ತೆಗೂ ಡಾಂಬರು, ಖಡಿ, ಮಣ್ಣು ಬಿದ್ದೀತೆಂದು… ಕುಸಿದು ಬೀಳುವ ಹಂತದಲ್ಲಿದ್ದ ಸೇತುವೆ, ಶಾಲಾ ಕಟ್ಟಡಗಳು ದುರಸ್ತಿಯಾಗಬಹುದೆಂದು… ನಮ್ಮೂರ ಶಾಲೆಗೂ ಶಿಕ್ಷಕರು ಬಂದಾರೆಂದು…!
ಪಂಚಾಯತಿಗಳ ಸಿಬ್ಬಂದಿ, ಹೋಬಳಿ ಆಸ್ಪತ್ರೆಗೆ ಡಾಕ್ಟರು, ಈಗ ಬಂದೇ ಬರುತ್ತಾರೆ ಎಂಬ ಭರವಸೆ ಗ್ರಾಮದ ಮುಗ್ಧ ಜನರಿಗೆ. ದೊಡ್ಡ ಹಳ್ಳಿಯಲ್ಲಿ ಪಾಳು ಬಿದ್ದಿರುವ ಕುಡಿಯುವ ನೀರು ಪರಿಷ್ಕರಣೆ ಕೇಂದ್ರದ ತುಕ್ಕು ತೆಗೆದು ವಿದ್ಯುತ್ ಸಂಪರ್ಕ ದೊರೆತೀತೆಂದು ಕೂಡ ಈ ಜನ ಕಾಯುತ್ತಿದ್ದಾರೆ. ಎಂದೋ ಕೆಟ್ಟು ಹೋಗಿರುವ ಗ್ರಾಮೀಣ ಭಾಗದ ಕುಡಿಯುವ ನೀರಿನ ಪೈಪ್ಲೈನ್ಗಳು, ಕೊಳವೆ ಬಾವಿಗಳು, ಹಾಗೇ ಪಂಪ್ಸೆಟ್ಗಳು ದುರಸ್ತಿಯಾದಾವು ಎಂದು ಕೂಡ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ.
ವರ್ಷಾನುಗಟ್ಟಲೇ ಸ್ವಚ್ಛಗೊಳಿಸಿದ ನೀರಿನ ಟ್ಯಾಂಕರ್ಗಳ ಪಾಚಿಯನ್ನು ಶುಚಿಗೊಳಿಸಲಿದ್ದಾರೆಂದು ಆಸೆಗಣ್ಣಿನಿಂದ ನೋಡುತ್ತಿದ್ದಾರೆ!! ಏಕೆಂದರೆ, ಈಗ ಗ್ರಾಮ ಪಂಚಾಯ್ತಿ ಚುನಾವಣೆ ಇನ್ನೇನು ಘೋಷಣೆಯಾಗಲಿದೆ. ಮೀಸಲಾತಿಯ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ. ಹಾಗೇ ರಾಜ್ಯದ ಮುಖ್ಯಮಂತ್ರಿ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವರು, 16 ಸಾವಿರ ಕೋಟಿ ರೂಪಾಯಿಗಳನ್ನು ಗ್ರಾಮೀಣ ರಸ್ತೆ, ನೈರ್ಮಲ್ಯ ಮತ್ತು ಮೂಲಸೌಕರ್ಯಗಳಿಗೆ ಅನುದಾನವಾಗಿ ಘೋಷಣೆ ಮಾಡಿದ್ದಾರೆ.
ಪಂಚಾಯತ್ ಚುನಾವಣೆಯ ಜಿದ್ದಾಜಿದ್ದಿಗೆ ಅಂಗಣ ಸಿದ್ಧಪಡಿಸಿಕೊಂಡಿರುವ ಸರ್ಕಾರ ಈಗ ಗ್ರಾಮೀಣ ರಸ್ತೆಗಳ ನೆನಪು ಮಾಡಿಕೊಂಡಿದೆ. ಸರ್ವೋಚ್ಚ ನ್ಯಾಯಾಲಯ ಮತ್ತು ರಾಜ್ಯ ಶ್ರೇಷ್ಠ ನ್ಯಾಯಾಲಯಗಳು ಮಾಡಿರುವ ತಪರಾಕಿಯಿಂದ ಕೊನೆಗೂ ಎಚ್ಚೆತ್ತುಕೊಂಡಿರುವ ಸರ್ಕಾರ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯ ಕ್ಷೇತ್ರ ಮೀಸಲು ಘೋಷಣೆ ಪ್ರಕಟಿಸಲಾಗಿದೆ.
ಜಿಪಂ-ತಾಪಂ, ಚುನಾವಣೆ ನಡೆಸದೇ ಆರು ವರ್ಷಗಳ ಕಾಲ ಸರ್ಕಾರ, ಶಾಸಕರುಗಳದ್ದೇ ಕಾರುಬಾರು ಮೆರೆಸಿದ ಘನ ಕಾರ್ಯ ನಿಜವಾಗಿಯೂ ನಮ್ಮ ಸಾಂವಿಧಾನಿಕ ವ್ಯವಸ್ಥೆಯ ಅಣಕೇ ಸರಿ. ಜಿಪಂ, ತಾಪಂಗೆ ಸದಸ್ಯರು ಆಯ್ಕೆಯಾದರೆ ತಮ್ಮನ್ಯಾರು ಮಾತನಾಡಿಸುತ್ತಾರೆ ಎಂಬುದು ಎಲ್ಲ ಶಾಸಕರ ಧೋರಣೆ… ಹಾಗಾಗಿ ಇಷ್ಟೆಲ್ಲ ವಿಳಂಬಕ್ಕೆ ಕಾರಣ. ಹದಿನಾರು ಸಾವಿರ ಕೋಟಿ ರೂಪಾಯಿ ಅನುದಾನವನ್ನು ಘೋಷಿಸಿ, ಇದಕ್ಕೊಂದು ವಿಶೇಷ ಉದ್ಘಾಟನಾ ಕಾರ್ಯಕ್ರಮವನ್ನೂ ಕೂಡ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಆಯೋಜಿಸಲಾಗಿತ್ತು. `ಒಂದು ರೂಪಾಯಿ ಕೂಡ ಅಪವ್ಯಯವಾಗದಂತೆ ನೋಡಿಕೊಳ್ಳಿ. ಭ್ರಷ್ಟಾಚಾರ, ದುರ್ವಿನಿಯೋಗ ಆದರೆ ಶಿಕ್ಷೆ ಖಂಡಿತ’ ಎಂದು ಅಧಿಕಾರಿಗಳಿಗೆ ಈ ತಾಕೀತನ್ನು ಈ ವೇಳೆ ನೀಡಲಾಯಿತು! ಜನ ಕೂಡ ಅದನ್ನೇ ಬಯಸುತ್ತಿದ್ದಾರೆ. ತಮ್ಮೂರಿಗೆ ಮಂಜೂರಾಗಿರುವ ಅನುದಾನ ಸಂಪೂರ್ಣವಾಗಿ ಬಳಕೆಯಾಗಲಿ. ಉತ್ತಮ ರಸ್ತೆ, ನೀರು ಪೂರೈಕೆ ಮತ್ತಿತರ ಕಾಮಗಾರಿಗಳಾಗಲಿ ಎಂದು ಆಶಿಸುತ್ತಿದ್ದಾರೆ.
ಇಷ್ಟಕ್ಕೂ ಜನ ಕೇಳುವ ಪ್ರಶ್ನೆ, ಈಗ ಮಂಜೂರಾಗಿರುವ ಅನುದಾನ ತಮ್ಮ ಪಂಚಾಯತಿಗೆ ಬರುವುದು ಎಂದು? ತಮ್ಮ ತಾಲ್ಲೂಕಿಗೆ, ತಮ್ಮೂರಿನ ರಸ್ತೆಗೆ ಖಡಿ, ಡಾಂಬರ್ ಬೀಳುವುದು ಎಂದು? ಮತ್ತೆ ಅಗತ್ಯವಿದ್ದೆಡೆಯೇ ಈ ಹಣ ಬಳಕೆಯಾಗುತ್ತದೆಯೇ? ಅಥವಾ ಪ್ರಭಾವಿಗಳ, ಧ್ವನಿ ದೊಡ್ಡದಾಗಿ ಇರುವವರ ಪಾಲಿಗೆ ಮೃಷ್ಟಾನ್ನವಾಗಲಿದೆಯೇ? ಎಂದು!!
ಈಗಲೇ ಸರ್ಕಾರದಲ್ಲಿ ದುಡ್ಡಿಲ್ಲ ಎನ್ನುವ ಮಾತುಗಳಿವೆ. ರೈತರು, ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿ ಮುಷ್ಕರ ನಡೆಸುತ್ತಿದ್ದಾರೆ. `ದುಡ್ಡಿಲ್ಲ, ಎಲ್ಲಿಂದ, ಹೇಗೆ ಕೊಡಲಿ’ ಎಂದು ಮುಖ್ಯಮಂತ್ರಿಯೇ ಅಸಹಾಯಕ ಧ್ವನಿ ತೆಗೆದಿದ್ದಾರೆ. ಹಾಗಿದ್ದೂ 16 ಸಾವಿರ ಕೋಟಿ ಗ್ರಾಮೀಣ ರಸ್ತೆಗಳಿಗೆ ಬಿಡುಗಡೆಯಾಗುವುದು ಹೇಗೆ? ಕಾಮಗಾರಿ ಶುರುವಾಗುವುದು ಯಾವಾಗ ಎಂಬುದು ಜನರ ಪ್ರಶ್ನೆ.
ಮತ್ತೊಂದು ಸಮಸ್ಯೆ ಎಂದರೆ ಇನ್ನೂ ಒಂದೂ ಕಾಲು ಲಕ್ಷ ಕೋಟಿ ರೂಪಾಯಿಗಳಷ್ಟು ಗುತ್ತಿಗೆದಾರರ ಬಿಲ್ ಬಾಕಿ ಇರುವಾಗ, ಈ ಪಂಚಾಯತ್ ಕಾಮಗಾರಿಗಳನ್ನು ನಿರ್ವಹಿಸಲು ಗುತ್ತಿಗೆ ಪಡೆಯುವವರು ಯಾರು ಎಂಬುದು. ಅನನುಭವಿಗಳಿಂದ ಕಾಮಗಾರಿ ನಡೆಸಿ, ಅಂತೂ ಅನುದಾನ ಖರ್ಚಾಯಿತೆಂಬ ದೂರು ಬಾರದಿರಲಿ ಎನ್ನುವುದರ ಜೊತೆಗೆ, ನಮ್ಮೂರ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಜನ ದೂರುವ ಕಾಲ ಬಾರದಿರಲಿ ಎಂದೀಗ ಪ್ರಜ್ಞಾವಂತ ಸಮಾಜ ಆಶಿಸಬೇಕಾಗಿದೆ. ಚಿಕ್ಕಪುಟ್ಟ ಗುತ್ತಿಗೆದಾರರ ಆತ್ಮಹತ್ಯೆ, ಸಾವಿನ ಪ್ರಕರಣಗಳು ಹೆಚ್ಚದಿರಲಿ ಎನ್ನುವ ಕಾಳಜಿ, ಕಳಕಳಿ ಇದರೊಟ್ಟಿಗೆ ಸೇರಿಕೊಂಡಿದೆ.
ಈಗಿನ ಅನುದಾನದ ಮತ್ತು ಯೋಜನೆಯ ರೂಪುರೇಷೆಗಳಲ್ಲೂ ಬಹಳ ಗೊಂದಲವಿದೆ. ಈ 16 ಸಾವಿರ ಕೋಟಿ ಸಮರ್ಥವಾಗಿ, ಪರಿಣಾಮಕಾರಿಯಾಗಿ ಅನುಷ್ಠಾನವಾಗಬೇಕಿದ್ದರೆ, ಮೊದಲು ಪ್ರದೇಶವಾರು, ಅಲ್ಲಿಯ ಕಾಮಗಾರಿವಾರು, ಯೋಜನಾ ವೆಚ್ಚದ ಅಧ್ಯಯನ ಆಗಬೇಕು. ಮಲೆನಾಡು ಪ್ರದೇಶದಲ್ಲಿ ಕಾಮಗಾರಿ ನಿರ್ವಹಣೆಗೆ ಹೆಚ್ಚು ಹಣ ಬೇಕು. ಹೆಚ್ಚು ಮಳೆ ಬೀಳುವ ಕರಾವಳಿಯಲ್ಲಿ ರಸ್ತೆ, ಕಟ್ಟಡ, ಯೋಜನೆಗಳಿಗೆ ವಿಶೇಷ ತಾಂತ್ರಿಕ ಪರಿಣಿತಿ ಬೇಕು. ಬಯಲುನಾಡಿನ ಕಾಮಗಾರಿ ಮಾನದಂಡವನ್ನೇ ಮಲೆನಾಡು, ಕರಾವಳಿಗೆ ಅನ್ವಯಿಸಲು ಆಗದು. ಹೀಗೆ ಮಾಡಿದರೆ ಆಗುವ ಸಮಸ್ಯೆಗಳಿಗೆ ಈಗಾಗಲೇ ಬೆಲೆ ತೆತ್ತಿರುವ ಅನೇಕ ಉದಾಹರಣೆಗಳಿವೆ.
ಎಲ್ಲಕ್ಕೂ ಮುಖ್ಯವಾಗಿ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಅಖಾಡ ಮತ್ತೆ ದುಡ್ಡಿದ್ದವರ ಅಂಗಳವಾಗಬಾರದು. ಮೀಸಲಾತಿ ಘೋಷಿಸಿದ್ದರೂ ಕೂಡ ಹಣ, ಅಧಿಕಾರದ ಅಟ್ಟಹಾಸ ಗ್ರಾಮೀಣ ಭಾಗದಲ್ಲಿ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಇದೆ. ದುಡ್ಡಿದ್ದವರಿಗೆ ಮಾತ್ರ ಟಿಕೆಟ್ ಹಂಚುವ ಪ್ರವೃತ್ತಿಯನ್ನು ರಾಜಕೀಯ ಪಕ್ಷಗಳು ಕೈಬಿಟ್ಟರೆ ಮಾತ್ರ ಸಾಧ್ಯ ಅಲ್ಲವೇ? ಎಂಟು ಮತ್ತು ಒಂಬತ್ತನೇ ದಶಕದಲ್ಲಿ ಜಿಲ್ಲಾ-ತಾಲ್ಲೂಕು ಪಂಚಾಯತ್ಗಳು ವಿಧಾನಸಭೆಯನ್ನೂ ಮೀರಿಸುವ ರೀತಿಯಲ್ಲಿ ಚರ್ಚೆಗಳನ್ನು ನಡೆಸುತ್ತಿದ್ದವು. ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದ್ದವು. ಅನೇಕ ಯುವಕರು ಈ ವ್ಯವಸ್ಥೆಯನ್ನು ಸದೃಢಗೊಳಿಸಿದವರಾಗಿದ್ದರು. ಹಿರಿಯ ಐಎಎಸ್ ಅಧಿಕಾರಿಗಳನ್ನು ಜಿಪಂ ಮುಖ್ಯ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗುತ್ತಿತ್ತು. ನಿಜ ಅರ್ಥದಲ್ಲಿ ಜನ ಅಧಿಕಾರದ ವಿಕೇಂದ್ರೀಕರಣ ಮತ್ತು ಹಂಚಿಕೆಯ ಫಲವನ್ನು ಅನುಭವಿಸುತ್ತಿದ್ದರು. ಆ ಗತವೈಭವವನ್ನು ಮತ್ತೆ ಮರುಕಳಿಸುವ ಯೋಜನೆ-ಯೋಚನೆ ಅಥವಾ ಕಾಣುವ ಭಾಗ್ಯ ಈಗಿಲ್ಲ. ಏಕೆಂದರೆ ಈಗ ಇವೆಲ್ಲ ಬೇಡದ ಪಾಪದ ಕೂಸುಗಳು.
ಚುನಾವಣೆ ಇಷ್ಟು ಕಾಲ ನಡೆಸದೇ ಇರಲು ಹತ್ತಾರು ಸಬೂಬುಗಳು `ಮಿಲಾಪಿ’ಯಿಂದಲೇ ಕೇಳಿ ಬಂದವು. ಸಾಂವಿಧಾನಿಕವಾಗಿ ಅವು ಅಸ್ತಿತ್ವಕ್ಕೆ ಬರಲೇಬೇಕಿರುವುದರಿಂದ ಅನಿವಾರ್ಯವಾಗಿ ಚುನಾವಣೆ ನಡೆಸಬೇಕಾಗಿದೆ! ಇಲ್ಲದಿದ್ದರೆ ಯಾವ ಪಕ್ಷಕ್ಕೂ ಈ ಚುನಾವಣೆಗಳು ಬೇಕಿಲ್ಲ ಬಿಡಿ!!
16 ಸಾವಿರ ಕೋಟಿ ಅನುದಾನ, ಸುಮಾರು ಹತ್ತು ಸಾವಿರ ಕಿಮೀಗಳಷ್ಟು ಗ್ರಾಮೀಣ ರಸ್ತೆ ಡಾಂಬರೀಕರಣಕ್ಕೆ ಕಾರಣವಾಗಲಿದೆ. 6 ಕಿಮೀಗೂ ಅಧಿಕ ರಸ್ತೆಗಳು ಕಾಂಕ್ರೀಟ್ ರಸ್ತೆಗಳಾಗಲಿವೆ ಎಂಬುದು ಮುಖ್ಯಮಂತ್ರಿಗಳ ಘೋಷಣೆ. ಗ್ರಾಮೀಣರ ಅಭಿವೃದ್ಧಿ ಕನಸು ಗರಿಬಿಚ್ಚಿರುವ ಈ ಸಮಯದಲ್ಲಿ ನಡೆದು ಹೋದ ಒಂದು ಘಟನೆಯನ್ನು ಗಮನಿಸಿ. ಸರ್ಕಾರಿ ಯೋಜನೆಗಳಿಗೆ, ಸೌಲಭ್ಯಗಳಿಗೆ ಪ್ರಶ್ನಿಸುವ ಹಕ್ಕು ಪ್ರಜೆಗಿದೆ.
ಆದರೆ ಆ ಹಕ್ಕನ್ನು ದಮನಿಸುವ ಕಾರ್ಯ ಸರ್ಕಾರ ಮತ್ತು ಅಧಿಕಾರಸ್ಥರಿಂದ ನಡೆಯುತ್ತಿದೆ ಎನ್ನುವುದನ್ನು ಈ ಘಟನೆ ತುಂಬ ಅರ್ಥಪೂರ್ಣವಾಗಿ ತೆರೆದಿಡುತ್ತದೆ. `ನಮಗಿನ್ನೂ ಶೂ ಕೊಟ್ಟಿಲ್ಲ; ಪಾಟಿ ಚೀಲ ಕೊಟ್ಟಿಲ್ಲʼ ಎಂದು ಪ್ರಶ್ನಿಸಿದ ವಿದ್ಯಾರ್ಥಿಯನ್ನೇ ಶಿಕ್ಷಣ ಸಚಿವರು ಗದರಿಸಿ, ಬೆದರಿಸಿದ ಸುದ್ದಿಯದು. ಹೀಗೆ ಮಾಡುವುದಾದರೆ ಜನರಿಗೆ ಯಾವ ಹಕ್ಕು-ಧ್ವನಿ ಇದ್ದರೇನು? ಅಂತಹ ಹಕ್ಕು ದಮನಕಾರಿ ಯತ್ನ, ಶಿಕ್ಷಣ ಖಾತೆಯ ಸಚಿವರಿಂದ ನಡೆದದ್ದು ವ್ಯವಸ್ಥೆಯ ವ್ಯಂಗ್ಯವೇ ಸರಿ. ಹಾಗೆಯೇ ಪಂಚಾಯತ್ ಅಧಿಕಾರ, ಚುನಾವಣೆ, ಅನುದಾನಗಳೂ ಕೂಡ ಆಗದಿರಲಿ… ಸಾಂವಿಧಾನಿಕ ವಿಕೇಂದ್ರೀಕರಣ ತತ್ವವನ್ನು ಅಪಹಾಸ್ಯ ಮಾಡದಿರಲಿ!

















