SK Home Ad
Home ಕೃಷಿ/ವಾಣಿಜ್ಯ ಬೆಳ್ಳುಳ್ಳಿ ಕೃಷಿಯಲ್ಲಿ ಹೊಸ ಕ್ರಾಂತಿ: ಖರ್ಚು ಅರ್ಧ, ಇಳುವರಿ ಭರ್ಜರಿ!

ಬೆಳ್ಳುಳ್ಳಿ ಕೃಷಿಯಲ್ಲಿ ಹೊಸ ಕ್ರಾಂತಿ: ಖರ್ಚು ಅರ್ಧ, ಇಳುವರಿ ಭರ್ಜರಿ!

0
42
ಎಸಳು ಬಿತ್ತನೆಗೆ ಪರ್ಯಾಯವಾಗಿ ಬಲ್ಬಿಲ್ ಕೃಷಿ: ವೆಚ್ಚ ಶೇ.50ರಷ್ಟು ಕಡಿಮೆ, ಹೆಕ್ಟೇರಿಗೆ 17.67 ಟನ್ ಇಳುವರಿ

ಬೆಳ್ಳುಳ್ಳಿ ಕೃಷಿ ವೆಚ್ಚ ಶೇ.50ರಷ್ಟು ಇಳಿಕೆ ಸಾಧ್ಯತೆ! – ಬೆಳ್ಳುಳ್ಳಿ ರೈತರಿಗೆ ಹೊಸ ತಂತ್ರಜ್ಞಾನ – ಬೀಜದ ಬದಲು ‘ಬಲ್ಬಿಲ್’ ನಾಟಿ

✍ ಲೇಖನ: ಡಾ. ರವಿ ಪಾಟೀಲ, ಕೃಷಿ ವಿಜ್ಞಾನಿಗಳು, ಕೃಷಿ ವಿಶ್ವವಿದ್ಯಾಲಯ, ಧಾರವಾಡ (UAS, Dharwad).

ಹುಬ್ಬಳ್ಳಿ: ಬೆಳ್ಳುಳ್ಳಿ ಕೃಷಿಯಲ್ಲಿ ಬೀಜದ ಕೊರತೆ ಮತ್ತು ದುಬಾರಿ ಬಿತ್ತನೆ ಸಾಮಗ್ರಿಯ ವೆಚ್ಚದಿಂದ ತೊಂದರೆ ಅನುಭವಿಸುವ ರೈತರಿಗೆ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ICAR) ಅಲ್ಮೋರಾದ ವಿವೇಕಾನಂದ ಪರ್ವತೀಯ ಕೃಷಿ ಅನುಸಂಧಾನ ಸಂಸ್ಥೆ (VPKAS) ಅಭಿವೃದ್ಧಿಪಡಿಸಿರುವ ಹೊಸ ತಂತ್ರಜ್ಞಾನ ಆಶಾದಾಯಕವಾಗಿದೆ.

ಬೆಳ್ಳುಳ್ಳಿಯ ಸಣ್ಣ ಬಲ್ಬಿಲ್‌ಗಳನ್ನು ಬಳಸಿ ಸಸಿಗಳನ್ನು ಬೆಳೆಸಿ, ಅವುಗಳನ್ನು ಮುಖ್ಯ ಜಮೀನಿಗೆ ನಾಟಿ ಮಾಡುವ ಈ ವಿಧಾನದಿಂದ ಹೆಕ್ಟೇರಿಗೆ 17.67 ಟನ್ ಮಾರುಕಟ್ಟೆಗೆ ಯೋಗ್ಯವಾದ ಬೆಳ್ಳುಳ್ಳಿ ಇಳುವರಿ ಪಡೆಯಬಹುದು. ಸಾಂಪ್ರದಾಯಿಕ ವಿಧಾನಕ್ಕೆ ಹೋಲಿಸಿದರೆ ಕೃಷಿಯ ಒಟ್ಟು ವೆಚ್ಚವನ್ನು ಸುಮಾರು ಶೇ.50ರಷ್ಟು ಕಡಿಮೆ ಮಾಡುವ ಸಾಧ್ಯತೆಯೂ ಇದೆ.

ಏನಿದು ಬಲ್ಬಿಲ್ ಆಧಾರಿತ ಕೃಷಿ? : ಸಾಮಾನ್ಯವಾಗಿ ಬೆಳ್ಳುಳ್ಳಿ ಕೃಷಿಯಲ್ಲಿ ಪ್ರತ್ಯೇಕ ಗೆಡ್ಡೆಗಳಲ್ಲಿರುವ ಎಸಳುಗಳನ್ನು (Cloves) ಬಿತ್ತನೆಗೆ ಬಳಸಲಾಗುತ್ತದೆ. ಆದರೆ ಹೊಸ ವಿಧಾನದಲ್ಲಿ ಬೆಳ್ಳುಳ್ಳಿ ಗಿಡದ ಮೇಲ್ಭಾಗದಲ್ಲಿ ಬೆಳೆಯುವ ಸಣ್ಣ ಬಲ್ಬಿಲ್‌ಗಳನ್ನು ನಾಟಿ ಸಾಮಗ್ರಿಯಾಗಿ ಬಳಸಲಾಗುತ್ತದೆ. ಇವುಗಳಿಂದ ಮೊದಲು ನರ್ಸರಿಯಲ್ಲಿ ಸಸಿಗಳನ್ನು ಬೆಳೆಸಿ, ಸುಮಾರು 90 ದಿನಗಳ ನಂತರ ಮುಖ್ಯ ಜಮೀನಿಗೆ ಸ್ಥಳಾಂತರಿಸಲಾಗುತ್ತದೆ.

ಸಂಶೋಧಕರು ‘VL Lahsun 2’ ಎಂಬ ಬೆಳ್ಳುಳ್ಳಿ ತಳಿಯ ಮೇಲೆ ಈ ಪ್ರಯೋಗ ನಡೆಸಿದ್ದಾರೆ. 0.1 ಗ್ರಾಂಗಿಂತ ಹೆಚ್ಚು ತೂಕದ ಬಲ್ಬಿಲ್‌ಗಳನ್ನು ಆಯ್ಕೆ ಮಾಡಿ, ಬಿತ್ತನೆಗೂ ಮೊದಲು 48 ಗಂಟೆಗಳ ಕಾಲ ಸಾಮಾನ್ಯ ನೀರಿನಲ್ಲಿ ನೆನೆಸಿಡುವುದು ಉತ್ತಮ ಮೊಳಕೆಯೊಡೆಯುವಿಕೆಗೆ ಸಹಕಾರಿಯಾಗಿದೆ. ನಂತರ ನರ್ಸರಿಯಲ್ಲಿ ಬೆಳೆಸಿದ ಸುಮಾರು 90 ದಿನಗಳ ಸಸಿಗಳನ್ನು ಮುಖ್ಯ ಜಮೀನಿಗೆ ನಾಟಿ ಮಾಡಲಾಗಿದೆ.

ಹೆಕ್ಟೇರಿಗೆ 17.67 ಟನ್ ಇಳುವರಿ : 2021ರಿಂದ 2024ರವರೆಗೆ ಎರಡು ಹಂಗಾಮುಗಳಲ್ಲಿ ನಡೆಸಿದ ಕ್ಷೇತ್ರ ಪ್ರಯೋಗಗಳ ಆಧಾರದಲ್ಲಿ ಈ ತಂತ್ರಜ್ಞಾನವನ್ನು ಮೌಲ್ಯಮಾಪನ ಮಾಡಲಾಗಿದೆ. ಸೂಕ್ತ ಪೋಷಕಾಂಶ ನಿರ್ವಹಣೆಯೊಂದಿಗೆ ಬಲ್ಬಿಲ್‌ನಿಂದ ಬೆಳೆಸಿದ ಸಸಿಗಳನ್ನು ನಾಟಿ ಮಾಡಿದಾಗ ಹೆಕ್ಟೇರಿಗೆ 17.67 ಟನ್ ಮಾರುಕಟ್ಟೆಗೆ ಯೋಗ್ಯವಾದ ಬೆಳ್ಳುಳ್ಳಿ ಗೆಡ್ಡೆಗಳ ಇಳುವರಿ ದಾಖಲಾಗಿದೆ. ಇದೇ ಪೋಷಕಾಂಶ ನಿರ್ವಹಣೆಯಲ್ಲಿ ಸಾಂಪ್ರದಾಯಿಕ ಎಸಳು ನಾಟಿ ವಿಧಾನದಿಂದ ಹೆಕ್ಟೇರಿಗೆ 18.3 ಟನ್ ಇಳುವರಿ ದೊರೆತಿದೆ.

ಪ್ರತಿ ಗೆಡ್ಡೆಯ ಸರಾಸರಿ ತೂಕ 35.9 ಗ್ರಾಂ ದಾಖಲಾಗಿದೆ. ಬಿತ್ತನೆ ಸಾಮಗ್ರಿಯ ಅಗತ್ಯ ಕಡಿಮೆಯಾಗುವುದು, ಸಂಗ್ರಹಣೆ ಮತ್ತು ಸಾಗಣೆ ವೆಚ್ಚ ಇಳಿಯುವುದು ಹಾಗೂ ಭೂಮಿ ಸಿದ್ಧಪಡಿಸುವ ವೆಚ್ಚದಲ್ಲಿ ಉಳಿತಾಯವಾಗುವುದು ಈ ವಿಧಾನದ ಪ್ರಮುಖ ಪ್ರಯೋಜನಗಳಾಗಿವೆ. ಒಟ್ಟಾರೆ ಕೃಷಿ ವೆಚ್ಚದಲ್ಲಿ ಸುಮಾರು ಶೇ.50ರಷ್ಟು ಕಡಿತ ಸಾಧ್ಯವೆಂದು ಅಧ್ಯಯನ ಅಂದಾಜಿಸಿದೆ.

ಕರ್ನಾಟಕದ ರೈತರಿಗೂ ಇದರಿಂದ ಪ್ರಯೋಜನವಾಗಬಹುದೇ? : ಕರ್ನಾಟಕದಲ್ಲಿ ಬೆಳ್ಳುಳ್ಳಿ ಬೆಳೆಯುವ ರೈತರಿಗೆ ಈ ತಂತ್ರಜ್ಞಾನ ಭವಿಷ್ಯದಲ್ಲಿ ಉಪಯುಕ್ತವಾಗುವ ಸಾಧ್ಯತೆ ಇದೆ. ಚಿಕ್ಕಮಗಳೂರು, ಹಾಸನ, ಕೊಡಗು, ಬೆಳಗಾವಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬೆಳ್ಳುಳ್ಳಿ ಬೆಳೆಯುವ ರೈತರು ಕಡಿಮೆ ವೆಚ್ಚದ ಬಿತ್ತನೆ ಸಾಮಗ್ರಿ ಮತ್ತು ಗುಣಮಟ್ಟದ ಇಳುವರಿಗಾಗಿ ಇಂತಹ ಪರ್ಯಾಯ ವಿಧಾನಗಳತ್ತ ಗಮನ ಹರಿಸಬಹುದು.

ಆದರೆ ಈ ಸಂಶೋಧನೆ ಮುಖ್ಯವಾಗಿ ಉತ್ತರಾಖಂಡದ ಅಲ್ಮೋರಾದಲ್ಲಿನ ಪರ್ವತ ಹಾಗೂ ಉಪ-ಸಮಶೀತೋಷ್ಣ ಹವಾಮಾನ ಪರಿಸ್ಥಿತಿಯಲ್ಲಿ ‘VL Lahsun 2’ ತಳಿಯ ಮೇಲೆ ನಡೆದಿದೆ. ಕರ್ನಾಟಕದ ಎಲ್ಲ ಪ್ರದೇಶಗಳಲ್ಲಿಯೂ ಇದೇ ಇಳುವರಿ ಮತ್ತು ವೆಚ್ಚ ಉಳಿತಾಯ ದೊರೆಯುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಇಲ್ಲಿನ ಮಣ್ಣು, ಹವಾಮಾನ, ಹಗಲಿನ ಅವಧಿ, ನೀರಾವರಿ ಮತ್ತು ಬೆಳೆಯುವ ತಳಿಗೆ ಅನುಗುಣವಾಗಿ ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರಗಳು ಹಾಗೂ ಕೃಷಿ ವಿಶ್ವವಿದ್ಯಾಲಯಗಳ ಮೂಲಕ ಪ್ರಯೋಗ ಮತ್ತು ಮೌಲ್ಯಮಾಪನ ಅಗತ್ಯವಿದೆ.

ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಬೆಳ್ಳುಳ್ಳಿ ಸಂಶೋಧನಾ ಮಾಹಿತಿಯಲ್ಲಿಯೂ ಕರ್ನಾಟಕಕ್ಕೆ ಶಿಫಾರಸು ಮಾಡಲಾದ ‘ಭೀಮಾ ಪರ್ಪಲ್’ ಸೇರಿದಂತೆ ವಿವಿಧ ತಳಿಗಳ ವಿವರಗಳಿವೆ. ಹೀಗಾಗಿ ಸ್ಥಳೀಯ ಪರಿಸ್ಥಿತಿಗೆ ಹೊಂದುವ ತಳಿಗಳೊಂದಿಗೆ ಬಲ್ಬಿಲ್ ಆಧಾರಿತ ವಿಧಾನವನ್ನು ಪರೀಕ್ಷಿಸುವುದು ರೈತರಿಗೆ ಹೊಸ ಅವಕಾಶಗಳನ್ನು ತೆರೆದಿಡಬಹುದು.

ಬೀಜದ ಕೊರತೆಗೆ ಪರ್ಯಾಯ, ರೈತರ ವೆಚ್ಚಕ್ಕೆ ಕಡಿವಾಣ : ಬೆಳ್ಳುಳ್ಳಿ ಕೃಷಿಯಲ್ಲಿ ಗುಣಮಟ್ಟದ ಬಿತ್ತನೆ ಎಸಳುಗಳ ಲಭ್ಯತೆ ಮತ್ತು ಅವುಗಳ ಬೆಲೆ ರೈತರ ಉತ್ಪಾದನಾ ವೆಚ್ಚದ ಮೇಲೆ ಪರಿಣಾಮ ಬೀರುತ್ತವೆ. ಇಂತಹ ಸಂದರ್ಭದಲ್ಲಿ ಬಲ್ಬಿಲ್‌ಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಸಿಗಳನ್ನು ಉತ್ಪಾದಿಸುವ ತಂತ್ರಜ್ಞಾನವು ಬಿತ್ತನೆ ಸಾಮಗ್ರಿಯ ಕೊರತೆಯನ್ನು ಕಡಿಮೆ ಮಾಡಲು ನೆರವಾಗಬಹುದು. ವಿಶೇಷವಾಗಿ ಬೆಟ್ಟ ಪ್ರದೇಶಗಳು ಹಾಗೂ ಸೂಕ್ತ ಹವಾಮಾನ ಹೊಂದಿರುವ ಕೃಷಿ ವಲಯಗಳಲ್ಲಿ ಇದರ ಪ್ರಯೋಜನವನ್ನು ಇನ್ನಷ್ಟು ಅಧ್ಯಯನ ಮಾಡಬಹುದು.

ನಾಟಿ ಮಾಡಿದ ಮೊದಲ ಎರಡು ತಿಂಗಳು ತಂಪಾದ ಹವಾಮಾನವಿದ್ದರೆ ಹಾಗೂ ಎತ್ತರದ ಪ್ರದೇಶಗಳಲ್ಲಿ ಬಲ್ಬಿಲ್ ಆಧಾರಿತ ಬೆಳ್ಳುಳ್ಳಿ ಉತ್ತಮವಾಗಿ ಬೆಳೆಯುತ್ತದೆ. ತಂಪಾದ ವಾತಾವರಣ ಮತ್ತು ಹಗಲು-ರಾತ್ರಿ ಉಷ್ಣಾಂಶದಲ್ಲಿ ಹೆಚ್ಚಿನ ಏರಿಳಿತವಿರುವ ಕಡೆ ಬಲ್ಬಿಲ್‌ಗಳು ಚೆನ್ನಾಗಿ ರೂಪುಗೊಳ್ಳುತ್ತವೆ. ಹೀಗಾಗಿ ನವೆಂಬರ್‌ನಿಂದ ಜನವರಿ ಅವಧಿಯಲ್ಲಿ ಈ ವಿಧಾನವನ್ನು ಅಳವಡಿಸಿಕೊಳ್ಳಲು ಅವಕಾಶವಿದೆ. ಇದರಿಂದ ಕೃಷಿ ವೆಚ್ಚ ಶೇ.50ರಷ್ಟು ಇಳಿಕೆಯಾಗುವುದರಿಂದ, ಆಸಕ್ತ ಹಾಗೂ ಪ್ರಗತಿಪರ ರೈತರು ತಮ್ಮ ಜಮೀನಿನಲ್ಲಿ ಈ ಪದ್ಧತಿಯನ್ನು ಪ್ರಾಯೋಗಿಕವಾಗಿ ಈ ವಿಧಾನವನ್ನು ಪರೀಕ್ಷಿಸಬಹುದು.

ಆದರೆ ರೈತರು ಈ ವಿಧಾನವನ್ನು ಅಳವಡಿಸಿಕೊಳ್ಳುವ ಮೊದಲು ತಮ್ಮ ಪ್ರದೇಶಕ್ಕೆ ಸೂಕ್ತವಾದ ತಳಿ, ಬಿತ್ತನೆ ಕಾಲ ಮತ್ತು ಕೃಷಿ ಪದ್ಧತಿಯ ಕುರಿತು ಸ್ಥಳೀಯ ಕೃಷಿ ತಜ್ಞರ ಸಲಹೆ ಪಡೆಯುವುದು ಮುಖ್ಯ. ವೈಜ್ಞಾನಿಕವಾಗಿ ಸಾಬೀತಾದ ವಿಧಾನವನ್ನು ಸ್ಥಳೀಯ ಪರಿಸ್ಥಿತಿಗೆ ಹೊಂದಿಸಿ ಬಳಸಿದಾಗ ಮಾತ್ರ ಅದರ ಸಂಪೂರ್ಣ ಪ್ರಯೋಜನ ರೈತರಿಗೆ ತಲುಪಲು ಸಾಧ್ಯ.