SK Home Ad
Home ಕೃಷಿ/ವಾಣಿಜ್ಯ ಏನಿದು PUC? BS-1 ರಿಂದ BS-6 ವರೆಗಿನ ವ್ಯತ್ಯಾಸವೇನು?:  ಹೊಸ BS-VI ಕಾರು ಮಾಲೀಕರಿಗೆ ಗುಡ್...

ಏನಿದು PUC? BS-1 ರಿಂದ BS-6 ವರೆಗಿನ ವ್ಯತ್ಯಾಸವೇನು?:  ಹೊಸ BS-VI ಕಾರು ಮಾಲೀಕರಿಗೆ ಗುಡ್ ನ್ಯೂಸ್;  ಹಳೆಯ ವಾಹನಗಳಿಗೆ ಶಾಕ್!

0
14

ವಾಹನ ಸವಾರರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಮಹತ್ವದ ಸುದ್ದಿಯೊಂದನ್ನು ನೀಡಿದ್ದು, ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರದ (PUC) ಮಾನ್ಯತಾ ಅವಧಿಯನ್ನು ಪರಿಷ್ಕರಿಸಿ ನೂತನ ನಿಯಮಗಳನ್ನು ಜಾರಿಗೊಳಿಸಿದೆ.

ಕೇಂದ್ರೀಯ ಮೋಟಾರು ವಾಹನಗಳ (16ನೇ ತಿದ್ದುಪಡಿ) ನಿಯಮಗಳು, 2026ರ ಅಡಿಯಲ್ಲಿ ಹೊಸ ಬಿಎಸ್-6 (BS-VI) ವಾಹನಗಳಿಗೆ ಪಿಯುಸಿ ನವೀಕರಣದ ಅವಧಿಯನ್ನು ಹೆಚ್ಚಿಸಲಾಗಿದ್ದು, 10 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಕಠಿಣ ನಿಯಮಗಳನ್ನು ರೂಪಿಸಲಾಗಿದೆ. ನವೆಂಬರ್ 13ರಂದು ಈ ಕುರಿತು ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.

ಏನಿದು PUC ಮತ್ತು BS ಮಾನದಂಡಗಳು?

PUC ಎಂದರೇನು?: PUC (Pollution Under Control – ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ): ನಿಮ್ಮ ವಾಹನದಿಂದ ಹೊರಬರುವ ಹೊಗೆ ಮತ್ತು ಮಾಲಿನ್ಯವು ಸರ್ಕಾರ ನಿಗದಿಪಡಿಸಿದ ಮಿತಿಯೊಳಗೆ ಇದೆ ಎಂದು ದೃಢೀಕರಿಸುವ ಅಧಿಕೃತ ಪ್ರಮಾಣಪತ್ರವೇ PUC. ರಸ್ತೆಯಲ್ಲಿ ವಾಹನ ಚಲಾಯಿಸಲು ಇದು ಕಡ್ಡಾಯ ದಾಖಲೆಯಾಗಿದೆ.

BS-1, 2, 3, 4 ಮತ್ತು BS-6 ಎಂದರೇನು?: BS (Bharat Stage – ಭಾರತ್ ಸ್ಟೇಜ್): ವಾಹನಗಳ ಎಂಜಿನ್ನಿಂದ ಹೊರಸೂಸುವ ಮಾಲಿನ್ಯವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಾನದಂಡಗಳ ಹಂತಗಳಿವು. ಇಲ್ಲಿ ಸಂಖ್ಯೆ ಹೆಚ್ಚಾದಂತೆ ಮಾಲಿನ್ಯ ನಿಯಂತ್ರಣ ನಿಯಮಗಳು ಹೆಚ್ಚು ಕಟ್ಟುನಿಟ್ಟಾಗಿರುತ್ತವೆ ಮತ್ತು ಪರಿಸರಕ್ಕೆ ಆಗುವ ಹಾನಿ ಕಡಿಮೆಯಿರುತ್ತದೆ.

  • BS-1, BS-2, BS-3: ಹಳೆಯ ಕಾಲದ ಎಂಜಿನ್ ಮಾನದಂಡಗಳು (ಹೆಚ್ಚು ಹೊಗೆ/ಮಾಲಿನ್ಯ ಹೊರಸೂಸುವ ವಾಹನಗಳು).
  • BS-4: 2017ರಲ್ಲಿ ಜಾರಿಗೆ ಬಂದ ಸುಧಾರಿತ ಮತ್ತು ಕಟ್ಟುನಿಟ್ಟಿನ ಮಾಲಿನ್ಯ ನಿಯಂತ್ರಣ ಹಂತ.
  • BS-6: ಪ್ರಸ್ತುತ ಚಾಲ್ತಿಯಲ್ಲಿರುವ ಅತ್ಯಾಧುನಿಕ ಹಾಗೂ ಅತಿ ಕಡಿಮೆ ಮಾಲಿನ್ಯ ಹೊರಸೂಸುವ ಪರಿಸರ ಸ್ನೇಹಿ ಎಂಜಿನ್ ಮಾನದಂಡ.

ನೂತನ ನಿಯಮದ ಪ್ರಕಾರ ಯಾವ ವಾಹನಕ್ಕೆ ಎಷ್ಟು ವರ್ಷ ಮಾನ್ಯತೆ?:

 ಖಾಸಗಿ BS-VI ವಾಹನಗಳು: 6 ವರ್ಷದೊಳಗಿನ ಹೊಸ ಖಾಸಗಿ BS-VI ವಾಹನಗಳಿಗೆ ಇನ್ಮುಂದೆ ಪ್ರತಿ 3 ವರ್ಷಕ್ಕೊಮ್ಮೆ ಪಿಯುಸಿ ಪ್ರಮಾಣಪತ್ರ ಪಡೆದರೆ ಸಾಕು. 6 ರಿಂದ 10 ವರ್ಷದೊಳಗಿನ ವಾಹನಗಳಿಗೆ ವಾರ್ಷಿಕ (1 ವರ್ಷ) ನವೀಕರಣ ಕಡ್ಡಾಯವಾಗಿದೆ. ಆದರೆ 10 ವರ್ಷಕ್ಕಿಂತ ಹಳೆಯದಾದ ವಾಹನಗಳಿಗೆ ಪ್ರತಿ 6 ತಿಂಗಳಿಗೊಮ್ಮೆ ಪಿಯುಸಿ ತಪಾಸಣೆ ಮಾಡಿಸಬೇಕು.

ವಾಣಿಜ್ಯ/ಸಾರಿಗೆ BS-VI ವಾಹನಗಳು: 6 ವರ್ಷದೊಳಗಿನ ಸಾರಿಗೆ ವಾಹನಗಳಿಗೆ 2 ವರ್ಷಗಳ ಮಾನ್ಯತೆ ನೀಡಲಾಗಿದ್ದು, 6 ರಿಂದ 10 ವರ್ಷದ ವಾಹನಗಳಿಗೆ 1 ವರ್ಷ ಹಾಗೂ 10 ವರ್ಷ ಮೇಲ್ಪಟ್ಟ ವಾಹನಗಳಿಗೆ ಪ್ರತಿ 6 ತಿಂಗಳಿಗೊಮ್ಮೆ ಪಿಯುಸಿ ನವೀಕರಣ ನಿಗದಿಪಡಿಸಲಾಗಿದೆ.

 ಹಳೆಯ BS-I, II, III ಮತ್ತು IV ವಾಹನಗಳು: BS-IV ಮಾನದಂಡದ ವಾಹನಗಳಿಗೆ ಪಿಯುಸಿ ಪ್ರಮಾಣಪತ್ರವು 6 ತಿಂಗಳವರೆಗೆ ಮಾನ್ಯತೆ ಹೊಂದಿದ್ದರೆ, ಅತ್ಯಂತ ಹಳೆಯ BS-I, BS-II ಮತ್ತು BS-III ವಾಹನಗಳು ಪ್ರತಿ 3 ತಿಂಗಳಿಗೊಮ್ಮೆ ಪಿಯುಸಿ ನವೀಕರಿಸುವುದು ಕಡ್ಡಾಯವಾಗಿದೆ.

ಒಂದು ವೇಳೆ ಪ್ರಮಾಣಪತ್ರದ ಅವಧಿ ಮುಗಿಯುವ 10 ದಿನಗಳ ಮುಂಚಿತವಾಗಿ ನವೀಕರಣಕ್ಕೆ ಅರ್ಜಿ ಸಲ್ಲಿಸಿದರೆ, ಹಳೆಯ ಪ್ರಮಾಣಪತ್ರದ ಅವಧಿ ಮುಗಿದ ದಿನಾಂಕದಿಂದಲೇ ಹೊಸ ಅವಧಿ ಅನ್ವಯವಾಗಲಿದೆ. ಅವಧಿ ಮೀರಿದ ಬಳಿಕ ನವೀಕರಿಸಿದರೆ, ನವೀಕರಣಗೊಂಡ ದಿನಾಂಕದಿಂದ ಲೆಕ್ಕಕ್ಕೆ ಬರಲಿದೆ. ವಾಯುಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ದೆಹಲಿ ಸೇರಿದಂತೆ ದೇಶಾದ್ಯಂತ ಪಿಯುಸಿ ನಿಯಮಗಳ ಪಾಲನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.