SK Home Ad
Home ನಮ್ಮ ಜಿಲ್ಲೆ ಚಿತ್ರದುರ್ಗ ಹಿರಿಯೂರಿನಲ್ಲಿ ಪುಂಗಿ ಊದಿ ಹೋದ ಸಿಎಂ

ಹಿರಿಯೂರಿನಲ್ಲಿ ಪುಂಗಿ ಊದಿ ಹೋದ ಸಿಎಂ

0
9

ಚಿತ್ರದುರ್ಗ: ಹಿರಿಯೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪುಂಗಿ ಊದಿ ಹೋಗಿದ್ದಾರೆ ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ ಕಿಡಿಕಾರಿದರು.

ಚಿತ್ರದುರ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕನಕಪುರದಷ್ಟೇ ಹಿರಿಯೂರು ಮುಖ್ಯ ಎಂದು ಪುಂಗಿ ಊದಿದ್ದಾರೆ. ಉಪಚುನಾವಣೆ ಇಲ್ಲದಿದ್ದರೆ ಹಿರಿಯೂರಿಗೆ ಬರ್ತಿರಲಿಲ್ಲ ಎಂದು ಟೀಕಿಸಿದರು.

ಬಿಜೆಪಿ, ಜೆಡಿಎಸ್ ಹಿರಿಯೂರಿನಲ್ಲಿ ಒಂದು ಜನಪರ ಯೋಜನೆ ಮಾಡಿದೆಯೇ ಎಂದು ಸಿಎಂ ಕೇಳಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಆರಂಭಿಸಿದ್ದೇ ನಾವು. ಬಿಜೆಪಿ ಆಡಳಿತದಲ್ಲಿ ಹೆಚ್ಚಿನ ಅನುದಾನ ನೀಡಿದ್ದೇವೆ ಎಂದರು.

ಎಚ್.ಡಿ. ಕುಮಾರಸ್ವಾಮಿ ಕಾಲದಲ್ಲೂ ಭದ್ರಾಗೆ ಅನುದಾನ ನೀಡಲಾಗಿತ್ತು. 2023ರಲ್ಲಿ 5,500 ಕೋಟಿ ರೂ. ಬಜೆಟ್‌ನಲ್ಲಿ ಕೊಟ್ಟಿದ್ದೆವು. ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಅದು 2,700 ಕೋಟಿಗೆ ಇಳಿಕೆಯಾಗಿದೆ. ನಮ್ಮ ಆಡಳಿತ ಕಾಲಿ ಡಬ್ಬಾ ಅಲ್ಲ ಎಂದು ಹೇಳಿದರು.

ಬೊಮ್ಮಾಯಿ ಸರ್ಕಾರದಲ್ಲಿ 11 ಸಾವಿರ 223 ಕೋಟಿ ರೂ. ಅನುದಾನ ನೀಡಲಾಗಿತ್ತು. ಕಾಂಗ್ರೆಸ್ ಕಳೆದ 3 ವರ್ಷದಲ್ಲಿ ನಾಲ್ಕೂವರೆ ಸಾವಿರ ಕೋಟಿ ಕೊಡಲು ಸಾಧ್ಯವಾಗಿಲ್ಲ ಎಂದು ಅವರು ಆರೋಪಿಸಿದರು.

ಆಶಾ ಕಾರ್ಯಕರ್ತರು ಮಕ್ಕಳ ಜತೆ ರಸ್ತೆ ಮೇಲೆ ಮಲಗಿದ್ದಾರೆ. ಈ ಸರ್ಕಾರಕ್ಕೆ ಸಾಂತ್ವನ ಹೇಳುವ ಸೌಜನ್ಯ ಇಲ್ಲ. ಪ್ರಿಯಾಂಕಾ ಗಾಂಧಿ ಅವರನ್ನು ಕರೆತಂದು 15 ಸಾವಿರ ರೂ. ಕೊಡುವ ಭರವಸೆ ನೀಡಿದ್ದರು. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ದೂರಿದರು.

ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಬಿಜೆಪಿ ಶಾಸಕಿ ಆಗಿದ್ದರು. ಆಗ ಯಡಿಯೂರಪ್ಪ ಅಪ್ಪಾಜಿ, ಬೊಮ್ಮಾಯಿ ಅಪ್ಪಾಜಿಯಿಂದ ಅಭಿವೃದ್ಧಿ ಎಂದಿದ್ದರು. ನೀನೇನು ಅಭಿವೃದ್ಧಿ ಮಾಡಿಲ್ಲ, ಬಿಜೆಪಿಗೆ ಮೋಸ ಮಾಡಿ ಓಡಿ ಹೋದೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಭೀಕರ ಬರಗಾಲವಿದೆ. ನೀರು, ಮೇವಿಲ್ಲದ ಸ್ಥಿತಿ ಇದೆ. ಮೊದಲು ಕುಡಿಯಲು ನೀರು ಕೊಟ್ಟು ಮತ ಕೇಳಲು ಬನ್ನಿ. ಗೋಶಾಲೆ, ಮೇವು ಬ್ಯಾಂಕ್ ಪ್ರಾರಂಭ ಮಾಡಬೇಕು ಎಂದು ಒತ್ತಾಯಿಸಿದರು.

ಸರ್ಕಾರಿ ಕಾರ್ಯಕ್ರಮದಲ್ಲಿ ಅಭ್ಯರ್ಥಿ ಆಕಾಂಕ್ಷಿಗಳ ದಂಡು ಇತ್ತು. ಸಿಎಂ ಡಿ.ಕೆ. ಶಿವಕುಮಾರ್ ಅವರು ಅಭ್ಯರ್ಥಿ ಆಕಾಂಕ್ಷಿಗಳನ್ನು ಅಕ್ಕಪಕ್ಕ ಕೂಡಿಸಿಕೊಂಡಿದ್ದರು. ಅದು ಕಾಂಗ್ರೆಸ್ ಸಮಾವೇಶ ಅಲ್ಲ, ಸರ್ಕಾರಿ ಕಾರ್ಯಕ್ರಮ. ಪ್ರೋಟೋಕಾಲ್ ಪ್ರಕಾರ ಸರ್ಕಾರಿ ಕಾರ್ಯಕ್ರಮ ನಡೆಯಬೇಕು. ಸರ್ಕಾರಿ ವೆಚ್ಚದಲ್ಲಿ ಕಾರ್ಯಕ್ರಮ ಮಾಡಲು ನಾಚಿಕೆ ಆಗಬೇಕು ಎಂದು ಕಿಡಿಕಾರಿದರು.

ಬರಗಾಲ ಪ್ರಯುಕ್ತ ಘೋಷಿಸಿದ ಐದು ಸಾವಿರ ರೂ. ಹಣ ನೀಡಿಲ್ಲ. ಹಿರಿಯೂರು ಉಪಚುನಾವಣೆಗಾಗಿ ಗೃಹಲಕ್ಷ್ಮಿ ಹಣ ಹಾಕಿದ್ದೀರಿ ಎಂದು ಆರೋಪಿಸಿದರು. ಪೂರ್ಣ ಪ್ರಮಾಣದ ಒಳಮೀಸಲಾತಿ ಮಾಡದೆ ಮೋಸ ಮಾಡಲಾಗಿದೆ. ಪೂರ್ಣ ಒಳಮೀಸಲಾತಿ ನೀಡದಿದ್ದರೆ ಎಸ್ಸಿ, ಎಸ್ಟಿ ಜನ ಪೊರಕೆ ಹಿಡಿದು ಬೆನ್ನು ಹತ್ತುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಕಾಡುಗೊಲ್ಲ ಸಮುದಾಯಕ್ಕೆ ಎಸ್ಟಿ ಮೀಸಲಾತಿ ವಿಚಾರದಲ್ಲಿ ನಿಯಮಾನುಸಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಕಾಡುಗೊಲ್ಲರಿಗೆ ಎಸ್ಟಿ ಮೀಸಲಾತಿ ಸಿಗುತ್ತದೆ. ಮಾರ್ಗಸೂಚಿ ಪ್ರಕಾರ ಕುಲಶಾಸ್ತ್ರ ಅಧ್ಯಯನ ನಡೆಸಿ ಶಿಫಾರಸ್ಸು ಮಾಡಿ. ಕಾಡುಗೊಲ್ಲ ಸಮುದಾಯವನ್ನು ಎಸ್ಟಿಗೆ ಸೇರಿಸಲು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.

ದೇವೇಗೌಡರು, ಕುಮಾರಸ್ವಾಮಿ, ಯಡಿಯೂರಪ್ಪ, ವಿಜಯೇಂದ್ರ, ನಾವು ಪ್ರಧಾನಿ ಬಳಿ ಹೋಗುತ್ತೇವೆ. ಕಾಡುಗೊಲ್ಲರಿಗೆ ಎಸ್ಟಿ ಮೀಸಲು ಸಿಗುವುದು ನ್ಯಾಯ. ಹಿರಿಯೂರಿನಲ್ಲಿ ಬಿಜೆಪಿ-ಜೆಡಿಎಸ್ ಸೇರಿ ಚುನಾವಣೆ ಎದುರಿಸುತ್ತೇವೆ. ಎನ್‌ಡಿಎ ಅಭ್ಯರ್ಥಿ ಪರ ನಾವು ಚುನಾವಣೆ ಮಾಡುತ್ತೇವೆ ಎಂದರು.