ಚಿತ್ರದುರ್ಗ: ಬಿ-ಖಾತೆ ಮಾಡಿಕೊಡಲು ₹50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ದೂರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಥಳದಲ್ಲೇ ಖಡಕ್ ಸೂಚನೆ ನೀಡಿದ ಘಟನೆ ಹಿರಿಯೂರಿನಲ್ಲಿ ನಡೆದಿದೆ.
ಹಿರಿಯೂರಿನಲ್ಲಿ ನಡೆದ ಸಿಎಂ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಚಂದ್ರು ಎಂಬುವರು ನಗರಸಭೆ ಅಧಿಕಾರಿಯೊಬ್ಬರ ವಿರುದ್ಧ ಲಂಚದ ಆರೋಪ ಮಾಡಿದರು. ಬಿ-ಖಾತೆ ಮಾಡಿಕೊಡಲು ನಗರಸಭೆ ಅಧಿಕಾರಿ ಮಲ್ಲಿಕಾರ್ಜುನ ಅವರು ₹50 ಸಾವಿರ ಲಂಚ ಕೇಳಿದ್ದಾರೆ ಎಂದು ಸಿಎಂಗೆ ನೇರವಾಗಿ ದೂರು ನೀಡಿದರು.
ದೂರು ಆಲಿಸಿದ ಕೂಡಲೇ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಡಿ.ಕೆ. ಶಿವಕುಮಾರ್, ʻಸಂಜೆಯೊಳಗೆ ಲಂಚ ಕೇಳಿದವನನ್ನು ಬಲಿ ಹಾಕಿʼ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಲಂಚಕ್ಕೆ ಬೇಡಿಕೆ ಇಟ್ಟಿರುವುದು ನಿಜವೆಂದು ಪರಿಶೀಲನೆಯಿಂದ ದೃಢಪಟ್ಟರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತುಗೊಳಿಸಿ. ದೂರಿನ ಬಗ್ಗೆ ತಕ್ಷಣ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಾರ್ವಜನಿಕರ ಮುಂದೆಯೇ ಸಿಎಂ ನೀಡಿದ ಈ ಖಡಕ್ ಸೂಚನೆ ಕಾರ್ಯಕ್ರಮದಲ್ಲಿ ಗಮನ ಸೆಳೆಯಿತು. ಲಂಚದ ದೂರಿಗೆ ಸಿಎಂ ತಕ್ಷಣವೇ ಸ್ಪಂದಿಸಿದ ಘಟನೆ ಸ್ಥಳದಲ್ಲಿ ನೆರೆದಿದ್ದ ಜನರ ನಡುವೆ ಚರ್ಚೆಗೆ ಗ್ರಾಸವಾಯಿತು.






















