SK Home Ad
Home ಸುದ್ದಿ ರಾಜ್ಯ ಹಿರಿಯೂರು ಉಪಚುನಾವಣೆ: ಟಿಕೆಟ್ ಯಾರಿಗೆ ಎಂಬುದಕ್ಕಿಂತ ಗೆಲುವು ಮುಖ್ಯ

ಹಿರಿಯೂರು ಉಪಚುನಾವಣೆ: ಟಿಕೆಟ್ ಯಾರಿಗೆ ಎಂಬುದಕ್ಕಿಂತ ಗೆಲುವು ಮುಖ್ಯ

0
5

ಬೆಂಗಳೂರು: ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲುವು ಸಾಧಿಸುವುದೇ ತಮ್ಮ ಪ್ರಮುಖ ಆದ್ಯತೆಯಾಗಿದ್ದು, ಬಿಜೆಪಿ ಅಥವಾ ಜೆಡಿಎಸ್‌ಗೆ ಟಿಕೆಟ್ ನೀಡಬೇಕು ಎಂಬ ವಿಚಾರದಲ್ಲಿ ಯಾವುದೇ ಪ್ರತಿಷ್ಠೆಯಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಅಮಿತ್ ಶಾ ಅವರನ್ನು ಭೇಟಿಯಾದ ವಿಚಾರವಾಗಿ ಮಾತನಾಡಿದ ಅವರು, ಹಿರಿಯೂರು ಕ್ಷೇತ್ರದ ವಾಸ್ತವಿಕ ರಾಜಕೀಯ ಪರಿಸ್ಥಿತಿ ಹಾಗೂ ಕ್ಷೇತ್ರದ ಜನರ ಅಭಿಪ್ರಾಯದ ಕುರಿತು ವಿವರವಾಗಿ ಮಾಹಿತಿ ನೀಡಿದ್ದೇನೆ. ಚುನಾವಣೆಯಲ್ಲಿ ಗೆಲುವು ಸಾಧಿಸುವ ದೃಷ್ಟಿಯಿಂದಲೇ ಅಭ್ಯರ್ಥಿ ಆಯ್ಕೆ ಸೇರಿದಂತೆ ಎಲ್ಲ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂಬುದನ್ನು ಅಮಿತ್ ಶಾ ಅವರ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದರು.

ಬಿಜೆಪಿ ಅಭ್ಯರ್ಥಿ ಅಥವಾ ಜೆಡಿಎಸ್ ಅಭ್ಯರ್ಥಿ ಎಂಬುದಕ್ಕಿಂತ ಎನ್‌ಡಿಎ ಅಭ್ಯರ್ಥಿ ಗೆಲ್ಲುವುದು ಮುಖ್ಯ. ಈ ನಿಟ್ಟಿನಲ್ಲಿ ಎರಡೂ ಪಕ್ಷಗಳ ನಾಯಕರು ಪರಸ್ಪರ ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬರಬೇಕು. ಮೈತ್ರಿಯ ಹೋರಾಟ ಅರ್ಥಪೂರ್ಣವಾಗಿ ಮುಂದುವರಿಯಬೇಕಿದೆ. ಹೀಗಾಗಿ ವೈಯಕ್ತಿಕ ಪ್ರತಿಷ್ಠೆಗೆ ಅವಕಾಶ ನೀಡದೆ ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಇದೇ ವೇಳೆ ಬಿಜೆಪಿ ನಾಯಕರು ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರೊಂದಿಗಿನ ಸಂಬಂಧದ ಬಗ್ಗೆಯೂ ಮಾತನಾಡಿದ ಕುಮಾರಸ್ವಾಮಿ, ಅಶೋಕ್ ಅವರು ತಮಗೆ ವೈರಿಯಲ್ಲ, ಆತ್ಮೀಯ ಸ್ನೇಹಿತರು. ಇಂತಹ ವಿಚಾರಗಳನ್ನು ಬಹಿರಂಗವಾಗಿ ಚರ್ಚಿಸುವುದು ಸೂಕ್ತವಲ್ಲ. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಮಾತನಾಡಿ ಒಮ್ಮತಕ್ಕೆ ಬರುವುದು ಉತ್ತಮ ಎಂಬುದು ತಮ್ಮ ಅಭಿಪ್ರಾಯ ಎಂದರು.

ಅಮಿತ್ ಶಾ ಅವರೊಂದಿಗಿನ ಭೇಟಿ ಯಾವುದೇ ಮಾತುಕತೆಯನ್ನು ಫಲಪ್ರದಗೊಳಿಸಿಕೊಳ್ಳುವ ಉದ್ದೇಶದಿಂದ ನಡೆದಿದ್ದಲ್ಲ. ಈ ಹಿಂದೆಯೇ ಚರ್ಚೆ ನಡೆಸಿದ್ದು, ನಿನ್ನೆ ಸಮಯ ನಿಗದಿಯಾಗಿದ್ದರಿಂದ ಭೇಟಿಯಾಗಿ ಕ್ಷೇತ್ರದ ಗ್ರೌಂಡ್ ರಿಯಾಲಿಟಿಯನ್ನು ಮುಕ್ತವಾಗಿ ವಿವರಿಸಿದ್ದೇನೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ತಮಗೆ ಯಾವುದೇ ಆತುರವಿಲ್ಲ. ಎಲ್ಲರೂ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.