SK Home Ad
Home ಸುದ್ದಿ ರಾಜ್ಯ ಯುವತಿಯರಿಗೆ ಬೈಕ್ ಟ್ಯಾಕ್ಸಿ ಹೆಚ್ಚು ಸುರಕ್ಷಿತ ಎಂದ ಸುಪ್ರೀಂ ಕೋರ್ಟ್

ಯುವತಿಯರಿಗೆ ಬೈಕ್ ಟ್ಯಾಕ್ಸಿ ಹೆಚ್ಚು ಸುರಕ್ಷಿತ ಎಂದ ಸುಪ್ರೀಂ ಕೋರ್ಟ್

0
29

ಬೆಂಗಳೂರು: ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳು ಮುಂದುವರಿಯಲು ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿದೆ. ಬೈಕ್ ಟ್ಯಾಕ್ಸಿ ಸೇವೆಗಳಿಗೆ ಅನುಮತಿ ನೀಡಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇದರಿಂದ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳು ಕಾರ್ಯಾಚರಣೆ ಮುಂದುವರಿಸಲು ಅವಕಾಶ ದೊರೆತಿದೆ.

ವಿಚಾರಣೆ ವೇಳೆ ಬೈಕ್ ಟ್ಯಾಕ್ಸಿಗಳ ಸುರಕ್ಷತೆಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ʻಬೈಕ್ ಟ್ಯಾಕ್ಸಿಗಳು ಯುವತಿಯರಿಗೆ ಹೆಚ್ಚು ಸುರಕ್ಷಿತವಾಗಿವೆ. ಇವುಗಳಲ್ಲಿ ಜಿಪಿಎಸ್ ವ್ಯವಸ್ಥೆಯೂ ಇದೆ. ಹೀಗಾಗಿ ಅವುಗಳನ್ನು ನಿಷೇಧಿಸುವ ಬದಲು ನಿಯಂತ್ರಿಸುವುದು ಉತ್ತಮ’ ಎಂದು ಹೇಳಿದೆ.

ದೇಶದ 25 ರಾಜ್ಯಗಳಲ್ಲಿ ಈಗಾಗಲೇ ಬೈಕ್ ಟ್ಯಾಕ್ಸಿ ಸೇವೆಗಳು ಕಾರ್ಯಾಚರಣೆ ನಡೆಸುತ್ತಿವೆ ಎಂಬುದನ್ನೂ ನ್ಯಾಯಪೀಠ ಉಲ್ಲೇಖಿಸಿದೆ. ಬೈಕ್ ಟ್ಯಾಕ್ಸಿ ಸೇವೆಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಬದಲು ಸೂಕ್ತ ನಿಯಮಾವಳಿಗಳ ಮೂಲಕ ನಿಯಂತ್ರಿಸುವ ಅಗತ್ಯವಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿರುವುದರಿಂದ ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಯುವಂತಾಗಿದೆ.