SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ಮಲಪ್ರಭೆಗೆ ಹರಿದ ನವಿಲುತೀರ್ಥದ ನೀರು: ರೈತರ ಮೊಗದಲ್ಲಿ ಮಂದಹಾಸ

ಮಲಪ್ರಭೆಗೆ ಹರಿದ ನವಿಲುತೀರ್ಥದ ನೀರು: ರೈತರ ಮೊಗದಲ್ಲಿ ಮಂದಹಾಸ

0
21

ಬಾಗಲಕೋಟೆ (ಕುಳಗೇರಿ ಕ್ರಾಸ್): ಮಲಪ್ರಭಾ ನದಿ ಹಾಗೂ ಅದರ ಎಡ ಮತ್ತು ಬಲದಂಡೆ ಕಾಲುವೆಗಳಿಗೆ ನವಿಲುತೀರ್ಥ ಜಲಾಶಯದಿಂದ ನೀರು ಹರಿಸಲಾಗಿದ್ದು, ಇದರಿಂದ ರೈತರಲ್ಲಿ ಸಂತಸ ಮೂಡಿದೆ. ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರ ಸೂಚನೆ ಮೇರೆಗೆ ಜಲಾಶಯದಿಂದ ಮಲಪ್ರಭಾ ನದಿಗೆ 800 ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ.

ರೈತರ ಬೇಡಿಕೆಯ ಹಿನ್ನೆಲೆಯಲ್ಲಿ ಮಲಪ್ರಭಾ ನದಿಗೆ ನೀರು ಹರಿಸುವುದರ ಜತೆಗೆ ಎಡದಂಡೆ ಕಾಲುವೆಗೆ 200 ಕ್ಯುಸೆಕ್ ಹಾಗೂ ಬಲದಂಡೆ ಕಾಲುವೆಗೆ 500 ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಇದರಿಂದ ನದಿ ಹಾಗೂ ಕಾಲುವೆ ವ್ಯಾಪ್ತಿಯ ರೈತರಿಗೆ ಅನುಕೂಲವಾಗಲಿದ್ದು, ಒಣಗುವ ಹಂತದಲ್ಲಿದ್ದ ಬೆಳೆಗಳಿಗೆ ಜೀವಕಳೆ ಬಂದಂತಾಗಿದೆ.

ಈ ಭಾಗದಲ್ಲಿ ಮಳೆಯ ಕೊರತೆ ಹಾಗೂ ಅಂತರ್ಜಲದ ಅತಿಯಾದ ಬಳಕೆಯಿಂದಾಗಿ ಹಲವು ಕೆರೆಗಳು ಬತ್ತಿಹೋಗಿದ್ದವು. ಕೊಳವೆಬಾವಿಗಳಲ್ಲಿಯೂ ನೀರಿನ ಮಟ್ಟ ಗಣನೀಯವಾಗಿ ಕುಸಿದಿತ್ತು. ಇದರಿಂದ ಕೃಷಿ ಚಟುವಟಿಕೆಗಳಿಗೆ ಮಾತ್ರವಲ್ಲದೆ, ಜನ-ಜಾನುವಾರುಗಳ ಕುಡಿಯುವ ನೀರಿಗೂ ತೊಂದರೆ ಉಂಟಾಗಿತ್ತು. ನಗರ ಪ್ರದೇಶಗಳಲ್ಲಿಯೂ ಕುಡಿಯುವ ನೀರಿನ ಅಭಾವದ ಆತಂಕ ಎದುರಾಗಿತ್ತು.

ಕಾಲುವೆ ನೀರನ್ನೇ ನಂಬಿಕೊಂಡು ರೈತರು ಒಣಭೂಮಿಯಲ್ಲಿ ಬಿತ್ತನೆ ಮಾಡಿದ್ದರು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಬಿಸಿಲಿನ ತಾಪಕ್ಕೆ ಬೆಳೆಗಳು ಒಣಗುವ ಹಂತ ತಲುಪಿದ್ದವು. ಈ ನಡುವೆ ನವಿಲುತೀರ್ಥ ಜಲಾಶಯದಿಂದ ನೀರು ಬಿಡುಗಡೆ ಮಾಡಿರುವುದು ರೈತರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.

ಈ ಬಾರಿ ಮುಂಗಾರು ಮಳೆ ಕಡಿಮೆಯಾಗಿದ್ದರೂ ಜಲಾಶಯದಲ್ಲಿ ಸಂಗ್ರಹವಾದ ನೀರು ರೈತರ ನೆರವಿಗೆ ಬಂದಿದೆ. ಮಲಪ್ರಭಾ ನದಿ ಹಾಗೂ ಕಾಲುವೆಗಳಿಗೆ ನೀರು ಹರಿಸಿರುವುದರಿಂದ ಜಲಮೂಲಗಳಿಗೆ ಮರುಜೀವ ಸಿಗುವ ನಿರೀಕ್ಷೆಯಿದೆ. ಕೆರೆಗಳು ಮತ್ತು ಕೊಳವೆಬಾವಿಗಳ ಅಂತರ್ಜಲ ಮಟ್ಟ ಸುಧಾರಿಸುವುದರ ಜತೆಗೆ ಕೃಷಿ ಚಟುವಟಿಕೆಗಳಿಗೂ ಅನುಕೂಲವಾಗಲಿದೆ ಎಂಬ ಆಶಯ ರೈತರದ್ದಾಗಿದೆ.