BBK13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆಯಲ್ಲಿ ಅನಿರೀಕ್ಷಿತ ತಿರುವೊಂದು ಎದುರಾಗಿದ್ದು, ವಾರದ ಆರಂಭದಲ್ಲಿ ಪುರುಷ ಸ್ಪರ್ಧಿಗಳಿಂದ ಮಹಾರಾಣಿಯಾಗಲು ಅನರ್ಹರೆಂದು ಹಣೆಪಟ್ಟಿ ಕಟ್ಟಿಕೊಂಡಿದ್ದ ಗಾನವಿ ಗೌಡ ಇದೀಗ ‘ಮಹಾರಾಣಿ’ ಪಟ್ಟಕ್ಕೇರಿದ್ದಾರೆ. ಸಹಸ್ಪರ್ಧಿ ಗಗನ್ ಚಿನ್ನಪ್ಪ ಅವರ ಚಾಣಾಕ್ಷ ಆಟದ ನೆರವಿನಿಂದ ಗಾನವಿ ವಿಜೇತರಾಗಿದ್ದು, ಈ ಇಬ್ಬರಿಗೂ ದೊಡ್ಮನೆಯ ಕ್ಯಾಪ್ಟನ್ ಪಟ್ಟ ಒಲಿದು ಬಂದಿದೆ.
ವಾರದ ಆರಂಭದಲ್ಲಿ ಆಸಿಯಾ ಫಿರ್ದೋಸ್, ಸೌಂದರ್ಯ ಶೆಟ್ಟಿ ಹಾಗೂ ಗಾನವಿ ಗೌಡ ಯುವರಾಣಿಯರಾಗಿ ಆಯ್ಕೆಯಾಗಿದ್ದರು. ಆದರೆ, ಗಾನವಿ ಮಹಾರಾಣಿಯಾಗಬಾರದು ಎಂದು ಮನೆಯ ಹಲವರು ಮತ ಚಲಾಯಿಸಿ ರೆಡ್ ಫ್ಲ್ಯಾಗ್ ನೀಡಿದ್ದರು. ನಾಮಿನೇಷನ್ ಪ್ರಕ್ರಿಯೆಯಲ್ಲಿ ಆಸಿಯಾ ಅವರು ಸೌಂದರ್ಯ ಅವರನ್ನು ಹೊರಹಾಕಿದ ಬಳಿಕ, ಅಂತಿಮ ಸುತ್ತಿನಲ್ಲಿ ಗಾನವಿ ಪರವಾಗಿ ಗಗನ್ ಚಿನ್ನಪ್ಪ ಹಾಗೂ ಆಸಿಯಾ ಪರವಾಗಿ ಪ್ರಶಾಂತ್ ಕಣಕ್ಕಿಳಿದರು.
ಮರದ ದಿಮ್ಮೆಗಳನ್ನು ಹುಡುಕಿ ಜೋಡಿಸುವ ಟಾಸ್ಕ್ನಲ್ಲಿ ಗಗನ್ ತೋರಿದ ಚಾಣಾಕ್ಷತನ ಹಾಗೂ ಪ್ರಶಾಂತ್ಗೆ ಸಿಗಬೇಕಿದ್ದ ಮರದ ತುಂಡನ್ನು ಬಚ್ಚಿಟ್ಟ ತಂತ್ರದಿಂದಾಗಿ ಆಸಿಯಾ ತಂಡ ಸೋಲು ಕಂಡಿತು. ಇದರೊಂದಿಗೆ ಗಾನವಿ ಮಹಾರಾಣಿಯಾಗಿ ಹೊರಹೊಮ್ಮಿದರು. ಗಗನ್ ಅವರೇ ಗಾನವಿಗೆ ಪಟ್ಟಾಭಿಷೇಕ ಮಾಡಿದ್ದು, ಮನೆಯ ಸದಸ್ಯರು ಹೂವು ಚೆಲ್ಲಿ ಗೌರವ ಸಲ್ಲಿಸಿದರು.
ಮಹಾರಾಣಿಯಾದ ಗಾನವಿ ಅವರನ್ನು ಮನೆಯ ಕ್ಯಾಪ್ಟನ್ ಆಗಿ ಘೋಷಿಸಿದ ಬಿಗ್ ಬಾಸ್, ‘ಕ್ವೀನ್ ಮೇಕರ್’ ಆಗಿ ಗೆಲುವು ತಂದುಕೊಟ್ಟ ಗಗನ್ ಚಿನ್ನಪ್ಪ ಅವರಿಗೂ ಕ್ಯಾಪ್ಟನ್ಸಿ ನೀಡಿದ್ದಾರೆ. ಈ ಮೂಲಕ ದೊಡ್ಮನೆಯಲ್ಲಿ ಗಾನವಿ ಮತ್ತು ಗಗನ್ ಜಂಟಿ ಕ್ಯಾಪ್ಟನ್ಗಳಾಗಿ ಅಧಿಕಾರ ವಹಿಸಿಕೊಂಡಿದ್ದು, ಇವರ ಆಡಳಿತ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ.






















