SK Home Ad
Home ನಮ್ಮ ಜಿಲ್ಲೆ ಬಾಗಲಕೋಟೆ ಸ್ಟಾಪ್ ಇದ್ದರೂ ಬಸ್ ನಿಲ್ಲಿಸಲಿಲ್ಲ: ಬೈಕ್ ಅಡ್ಡಗಟ್ಟಿ ವಾಪಸ್ ಕರೆತಂದ ಗ್ರಾಮಸ್ಥರು!

ಸ್ಟಾಪ್ ಇದ್ದರೂ ಬಸ್ ನಿಲ್ಲಿಸಲಿಲ್ಲ: ಬೈಕ್ ಅಡ್ಡಗಟ್ಟಿ ವಾಪಸ್ ಕರೆತಂದ ಗ್ರಾಮಸ್ಥರು!

0
151

ಬಾಗಲಕೋಟೆ (ಕುಳಗೇರಿ ಕ್ರಾಸ್): ನಿಗದಿತ ಬಸ್ ನಿಲ್ದಾಣದಲ್ಲಿ ನಿಲ್ಲಿಸದೆ ವೇಗವಾಗಿ ತೆರಳುತ್ತಿದ್ದ ಸಾರಿಗೆ ಬಸ್‌ಗೆ ಬೈಕ್ ಅಡ್ಡಗಟ್ಟಿ ತಡೆದ ಗ್ರಾಮಸ್ಥರು, ಬಸ್‌ ಅನ್ನು ವಾಪಸ್ ನಿಲ್ದಾಣಕ್ಕೆ ಕರೆತಂದು ಚಾಲಕನನ್ನು ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ಬೆಳಿಗ್ಗೆ ಗ್ರಾಮದ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ನಡೆದಿದೆ.

ಕುಳಗೇರಿ ಕ್ರಾಸ್ ಗ್ರಾಮದ ರಾಷ್ಟ್ರೀಯ ಹೆದ್ದಾರಿ 218ರ ಮೂಲಕ ನಿತ್ಯ ಸುಮಾರು 400ಕ್ಕೂ ಹೆಚ್ಚು ಸಾರಿಗೆ ಬಸ್‌ಗಳು ಸಂಚರಿಸುತ್ತವೆ. ಆದರೆ, ಕೆಲವು ಬಸ್ ಚಾಲಕರು ನಿಗದಿತ ನಿಲ್ದಾಣದಲ್ಲಿ ಬಸ್ ನಿಲ್ಲಿಸದೆ ತೆರಳುತ್ತಿರುವುದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಗುರುವಾರವೂ ಬಾಗಲಕೋಟೆ ಘಟಕದ ಸಾರಿಗೆ ಬಸ್ ನಿಲ್ಲಿಸದೆ ವೇಗವಾಗಿ ತೆರಳುತ್ತಿದ್ದುದನ್ನು ಗಮನಿಸಿದ ಗ್ರಾಮಸ್ಥರು ಬೈಕ್ ಅಡ್ಡಗಟ್ಟಿ ತಡೆದಿದ್ದಾರೆ. ಬಳಿಕ ಬಸ್‌ ಅನ್ನು ವಾಪಸ್ ನಿಲ್ದಾಣಕ್ಕೆ ಕರೆತಂದು ಚಾಲಕನನ್ನು ಪ್ರಶ್ನಿಸಿದ್ದಾರೆ.

ಪ್ರಯಾಣಿಕರೊಂದಿಗೆ ಚಾಲಕನ ವಾಗ್ವಾದ: ಬಸ್ ನಿಲ್ದಾಣಕ್ಕೆ ವಾಪಸ್ ಕರೆತಂದಾಗ ಚಾಲಕ ಸಾರ್ವಜನಿಕರೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ. ಕೆರೂರಿನಲ್ಲಿ ಪ್ರಯಾಣಿಕರು ತಮ್ಮ ಬಸ್‌ಗಾಗಿ ಕಾಯುತ್ತಿರುತ್ತಾರೆ. ಹೀಗಾಗಿ ನೀವು ಹಿಂದೆ ಬರುವ ಬಸ್ ಹತ್ತಿಕೊಳ್ಳಿ ಎಂದು ಸಮರ್ಥಿಸಿಕೊಳ್ಳಲು ಮುಂದಾಗಿದ್ದಾನೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ಬೇಕಾದವರನ್ನು ಹತ್ತಿಸಿಕೊಳ್ಳಲು ಇದೇನು ನಿಮ್ಮ ಸ್ವಂತ ಬಸ್ಸಾ? ನಾವೇನು ಪ್ರಯಾಣಿಕರಲ್ಲವೇ? ನಾವು ಹಣ ಕೊಟ್ಟು ಪ್ರಯಾಣಿಸುವುದಿಲ್ಲವೇ? ಎಂದು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಸ್‌ನಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರಿದ್ದರು. ಬಸ್ ಬಹುತೇಕ ಖಾಲಿ ಇದ್ದರೂ ಕೈ ಮಾಡಿದಾಗ ನಿಲ್ಲಿಸದೆ ಹೋಗುವುದಾದರೆ ಏನು ಮಾಡಬೇಕು? ಎಂದು ಸ್ಥಳೀಯ ಸಾರಿಗೆ ನಿಯಂತ್ರಕರನ್ನೂ ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಬಳಿಕ ಮಧ್ಯಪ್ರವೇಶಿಸಿದ ಸಾರಿಗೆ ನಿಯಂತ್ರಕರು ಗ್ರಾಮಸ್ಥರನ್ನು ಸಮಾಧಾನಪಡಿಸಿ, ಇಂತಹ ಘಟನೆ ಮರುಕಳಿಸದಂತೆ ಚಾಲಕನಿಗೆ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.

ನಿಗದಿತ ನಿಲ್ದಾಣಗಳಿದ್ದರೂ ಕೆಲವು ಸಾರಿಗೆ ಚಾಲಕರು ಬಸ್ ನಿಲ್ಲಿಸದೆ ಉದ್ದಟತನ ತೋರುತ್ತಿದ್ದಾರೆ. ತಮಗೆ ಬೇಕಾದಾಗ ನಿಲ್ಲಿಸುವುದು, ಬೇಡವೆಂದಾಗ ನಿಲ್ಲಿಸದೆ ವೇಗವಾಗಿ ತೆರಳುವುದು ಮಾಡುತ್ತಿದ್ದಾರೆ. ಇಂತಹ ಚಾಲಕರ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನಿತ್ಯ ಪ್ರಯಾಣಿಕರಿಗೆ ತೊಂದರೆ: ಕುಳಗೇರಿ ಕ್ರಾಸ್‌ನಲ್ಲಿ ನೂರಾರು ನೌಕರರು ಹಾಗೂ ವಿದ್ಯಾರ್ಥಿಗಳು ನಿತ್ಯ ಬಸ್‌ಗಳನ್ನೇ ಅವಲಂಬಿಸಿ ಪ್ರಯಾಣಿಸುತ್ತಾರೆ. ಆದರೆ, ಕೆಲವು ಚಾಲಕರು ಬಸ್ ನಿಲ್ದಾಣದ ಒಳಗೆ ಬಾರದೆ, ಹೊರಗೆ ನಿಂತು ಕೈ ಮಾಡಿದರೂ ಬಸ್ ನಿಲ್ಲಿಸದೆ ತೆರಳುತ್ತಿದ್ದಾರೆ. ಇದರಿಂದ ಪ್ರತಿನಿತ್ಯ ಪ್ರಯಾಣಿಸುವ ವಿದ್ಯಾರ್ಥಿಗಳು ಮತ್ತು ನೌಕರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ದೂರಾಗಿದೆ.

ಕ್ರಮ ಕೈಗೊಳ್ಳುವ ಭರವಸೆ: ಕುಳಗೇರಿ ಕ್ರಾಸ್ ಗ್ರಾಮದಲ್ಲಿ ಎಲ್ಲ ಸಾರಿಗೆ ಬಸ್‌ಗಳಿಗೂ ನಿಲುಗಡೆ ವ್ಯವಸ್ಥೆ ಇದೆ. ಯಾವುದೇ ಬಸ್ ಚಾಲಕರು ಇಲ್ಲಿ ನಿಲ್ಲಿಸದೆ ತೆರಳಬಾರದು. ಒಂದು ವೇಳೆ ಬಸ್ ನಿಲ್ಲಿಸದೆ ಹೋದರೆ ಅಂತಹ ಚಾಲಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಎಲ್ಲ ಬಸ್‌ಗಳನ್ನು ನಿಲ್ಲಿಸಿ ಮಾಹಿತಿ ಪಡೆಯುವಂತೆ ಸಾರಿಗೆ ನಿಯಂತ್ರಕರಿಗೂ ಸೂಚನೆ ನೀಡಲಾಗಿದೆ ಎಂದು ಬಾದಾಮಿ ಡಿಪೋ ವ್ಯವಸ್ಥಾಪಕ ಎಸ್.ಆರ್. ಮಂಕಣಿ ತಿಳಿಸಿದ್ದಾರೆ.