ಬಾಗಲಕೋಟೆ(ಕುಳಗೇರಿ ಕ್ರಾಸ್): ಮಲಪ್ರಭಾ ನದಿಯ ದಡದಲ್ಲಿರುವ ಬೀರನೂರ ಗ್ರಾಮದ ನಾಲ್ಕೈದು ರೈತರಿಗೆ ಸೇರಿದ ಸುಮಾರು 4 ಎಕರೆಯಷ್ಟು ಕಬ್ಬು ಬೆಳೆ ಸುಟ್ಟು ಭಸ್ಮವಾಗಿದೆ.
ಬೀರನೂರ ಗ್ರಾಮದ ಶಿವನಗೌಡ ಬಾಲನ್ನವರ, ಹನಮಂತಗೌಡ ಬಾಲನ್ನವರ, ರಾಮನಗೌಡ ನಿಂಗನ್ನವರ, ಸಿದ್ಧನಗೌಡ ಮುದಿಗೌಡ್ರ, ಬಸನಗೌಡ ಮುದಿಗೌಡ್ರ ಅವರಿಗೆ ಸೇರಿದ ಸುಮಾರು 4 ಎಕರೆಯಷ್ಟು ಕಬ್ಬು ಬೆಂಕಿಗಾಹುತಿಯಾಗಿದೆ.
ಕಬ್ಬಿಗೆ ಬೆಂಕಿ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಬೀರನೂರ ಗ್ರಾಮದ ಕಾರ್ಯಕ್ರಮವೊಂದರಲ್ಲಿ ಸೇರಿದ್ದ ನೂರಾರು ಜನ ರೈತರು ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಕಿ ಹೊತ್ತಿ ಉರಿಯುತ್ತಿರುವುದನ್ನ ಕಂಡು ಹೊಲದ ಎರಡು ಬದಿಯಲ್ಲಿ ಎಕ್ಕಿಯ ತಪ್ಪಲಿನಿಂದ ಬೆಂಕಿ ಬಡಿದು ನಂದಿಸಿದ್ದಾರೆ. ಇದರಿಂದ ಮಲಪ್ರಭಾ ನದಿಯ ದಡದಲ್ಲಿ ಸಾಲಾಗಿ ಬೆಳೆದಿದ್ದ ಸುಮಾರು ನೂರಾರು ಎಕರೆ ಕಬ್ಬು ಬೆಳೆಯನ್ನ ಬೆಂಕಿಯಿಂದ ಕಾಪಾಡಿದ್ದಾರೆ.
ಅಗ್ನಿಶಾಮಕ ದಳ, ಕಂದಾಯ, ಕೆಇಬಿ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪರಿಶೀಲನೆ ನಡೆಸಿದರು. ರೈತರ ಕಬ್ಬು ಇನ್ನೇನು ಕಟಾವಿಗೆ ಬಂದಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನೋ ಹಾಗೆ ನಿತ್ಯ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿ ಬೆಳೆಗಳು ಸುಟ್ಟು ಭಸ್ಮವಾಗುತ್ತಿವೆ. ಇದರಿಂದ ರೈತರು ಬಾರಿ ನಷ್ಟ ಅನುಭವಿಸುತ್ತಿದ್ದು, ಉತ್ತಮವಾಗಿ ಬೆಳೆದು ನಿಂತ ನಮ್ಮ ಕಬ್ಬು ಬೆಳೆ ಹೇಗೆ ಕಾಪಾಡಿಕೊಳ್ಳಬೇಕು ಎಂಬ ಚಿಂತೆ ರೈತರನ್ನ ಕಾಡತೊಡಗಿದೆ.






















