ಬಳ್ಳಾರಿ: ನಗರದ ರೋಷನ್ ಎಂಬ ಯುವಕನ ವೈಯಕ್ತಿಕ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು, ಆತನ ಹೆಸರಿನಲ್ಲಿ ಐದು ತಿಂಗಳಲ್ಲಿ ಬರೋಬ್ಬರಿ ₹350 ಕೋಟಿ ಮೌಲ್ಯದ ಜಿಎಸ್ಟಿ ವಹಿವಾಟು ನಡೆಸಿರುವ ಆರೋಪ ಕೇಳಿಬಂದಿದೆ.
ಖಾಸಗಿ ಕಂಪನಿಯಲ್ಲಿ ತಿಂಗಳಿಗೆ ₹15 ಸಾವಿರ ವೇತನಕ್ಕೆ ಕೆಲಸ ಮಾಡುತ್ತಿರುವ ರೋಷನ್ನ ಆಧಾರ್, ಪಾನ್, ಬ್ಯಾಂಕ್ ಪಾಸ್ಬುಕ್ ಹಾಗೂ ವಿದ್ಯುತ್ ಬಿಲ್ ಬಳಸಿ ‘ರೋಷನ್ ಎಂಟರ್ಪ್ರೈಸಸ್’ ಎಂಬ ಸಂಸ್ಥೆ ನೋಂದಾಯಿಸಲಾಗಿದೆ. ಪ್ಲಾಸ್ಟಿಕ್ ವ್ಯಾಪಾರದ ಹೆಸರಿನಲ್ಲಿ ಭಾರಿ ವಹಿವಾಟು ನಡೆಸಲಾಗಿದ್ದು, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸಗಳನ್ನು ಬೇರೆಯವರದ್ದಾಗಿ ನಮೂದಿಸಲಾಗಿದೆ ಎನ್ನಲಾಗಿದೆ.
ನ. 12ರಂದು ಜಿಎಸ್ಟಿ ಅಧಿಕಾರಿಗಳು ರೋಷನ್ ಮನೆಗೆ ಭೇಟಿ ನೀಡಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತನ್ನ ಅನುಮತಿಯಿಲ್ಲದೆ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ವಹಿವಾಟು ನಡೆಸಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ವಹಿವಾಟಿನ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಹಾಗೂ ಸಂಬಂಧಪಟ್ಟ ಇಲಾಖೆಗಳು ತನಿಖೆ ನಡೆಸಬೇಕಿದೆ.



















