SK Home Ad
Home ಸುದ್ದಿ ದೇಶ ಪಾಕ್ ಹ್ಯಾಂಡ್ಲರ್‌ಗಳ ಸೂಚನೆಯಂತೆ ಬೇಹುಗಾರಿಕೆ ನಡೆಸುತ್ತಿದ್ದ 20ರ ಯುವಕ ಅರೆಸ್ಟ್!

ಪಾಕ್ ಹ್ಯಾಂಡ್ಲರ್‌ಗಳ ಸೂಚನೆಯಂತೆ ಬೇಹುಗಾರಿಕೆ ನಡೆಸುತ್ತಿದ್ದ 20ರ ಯುವಕ ಅರೆಸ್ಟ್!

0
3

2008ರ ಮುಂಬೈ 26/11 ಭಯೋತ್ಪಾದಕ ದಾಳಿಯ ಪ್ರಮುಖ ಗುರಿಯಾಗಿದ್ದ ಕೊಲಾಬಾದ ಯಹೂದಿ ಧಾರ್ಮಿಕ ಕೇಂದ್ರ ‘ನಾರಿಮನ್ ಹೌಸ್’ (ಛಾಬಾದ್ ಹೌಸ್) ಸೇರಿದಂತೆ ಮುಂಬೈನ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಬೇಹುಗಾರಿಕೆ (Recce) ನಡೆಸುತ್ತಿದ್ದ 20 ವರ್ಷದ ಯುವಕನನ್ನು ಭಯೋತ್ಪಾದನಾ ನಿಗ್ರಹ ದಳ (ATS) ಮತ್ತು ಕೇರಳ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.

ನವಿ ಮುಂಬೈನ ಐರೋಲಿ ನಿವಾಸಿ ಯಶ್ ಸಿಂಗ್ ಬಂಧಿತ ಆರೋಪಿಯಾಗಿದ್ದು, ವಿದೇಶಿ ಹ್ಯಾಂಡ್ಲರ್‌ಗಳ ಸೂಚನೆಯಂತೆ ಈತ ಯಹೂದಿ ಪ್ರಜೆಗಳು, ವಿದೇಶಿ ಉದ್ಯಮಿಗಳ ಫೋಟೋಗಳು, ವಾಹನಗಳ ವಿವರ ಮತ್ತು ನಿಖರ ಸ್ಥಳದ ಮಾಹಿತಿಯನ್ನು ಸಂಗ್ರಹಿಸಿ ಕಳುಹಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಅಂತರರಾಷ್ಟ್ರೀಯ ಅಪರಾಧ ಜಾಲಗಳೊಂದಿಗೆ ಯಶ್ ಸಿಂಗ್ ಸಂಪರ್ಕ ಹೊಂದಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ನವಿ ಮುಂಬೈ ಎಟಿಎಸ್ ಅಧಿಕಾರಿಗಳು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಈ ವೇಳೆ ಕೇರಳದ ತ್ರಿಶೂರ್‌ನಲ್ಲಿ ಕಠಿಣ ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ’ (UAPA) ಅಡಿಯಲ್ಲಿ ದಾಖಲಾಗಿರುವ ಪ್ರಕರಣವೊಂದರ ಆರೋಪಿಗಳೊಂದಿಗೆ ಈತನಿಗೆ ನೇರ ನಂಟು ಇರುವುದು ಪತ್ತೆಯಾಗಿದೆ. ತಕ್ಷಣವೇ ನವಿ ಮುಂಬೈಗೆ ಆಗಮಿಸಿದ ಕೇರಳ ಪೊಲೀಸರ ತಂಡ ಹೆಚ್ಚಿನ ತನಿಖೆ ನಡೆಸಿ ಯಶ್ ಸಿಂಗ್‌ನನ್ನು ಅಧಿಕೃತವಾಗಿ ಬಂಧಿಸಿದೆ.

ಪಾಕಿಸ್ತಾನದ ಭಯೋತ್ಪಾದಕ ಶಹಜಾದ್ ಭಟ್ಟಿ ಕ್ರೈಂ ಸಿಂಡಿಕೇಟ್‌ನಂತಹ ಅಂತರರಾಷ್ಟ್ರೀಯ ಜಾಲಗಳು ಟೆಲಿಗ್ರಾಮ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಮೂಲಕ ನಿರುದ್ಯೋಗಿ ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ ಯುವಕರನ್ನು ಸಂಪರ್ಕಿಸಿ ಹಣದ ಆಮಿಷವೊಡ್ಡುತ್ತಿವೆ.

ಇವರ ಮೂಲಕ ಸೂಕ್ಷ್ಮ ಪ್ರದೇಶಗಳ ಫೋಟೋ ಮತ್ತು ವಿಡಿಯೋ ತರಿಸಿಕೊಂಡು ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸುತ್ತಿವೆ ಎಂದು ಎಟಿಎಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಅಪರಿಚಿತರೊಂದಿಗೆ ಯಾವುದೇ ಸೂಕ್ಷ್ಮ ಮಾಹಿತಿ ಹಂಚಿಕೊಳ್ಳದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.