ಒಮನ್ನ ಅಲ್ ಅಮ್ರತ್ ಮೈದಾನದಲ್ಲಿ ಶನಿವಾರ ನಡೆದ ಅಂಡರ್-19 ಏಷ್ಯಾ ಕಪ್ 2026ರ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಭಾರತ ಅಂಡರ್-19 ತಂಡ ಬದ್ಧವೈರಿ ಪಾಕಿಸ್ತಾನ ವಿರುದ್ಧ 1 ವಿಕೆಟ್ ಅಂತರದ ಸ್ಮರಣೀಯ ಹಾಗೂ ರೋಚಕ ಜಯ ಸಾಧಿಸಿ ದಾಖಲೆಯ 9ನೇ ಬಾರಿಗೆ ಏಷ್ಯಾ ಕಪ್ ಚಾಂಪಿಯನ್ ಪಟ್ಟಕ್ಕೇರಿದೆ.
ಸೋಲಿನ ದವಡೆಯಲ್ಲಿದ್ದ ಭಾರತಕ್ಕೆ ಕೆಳಕ್ರಮಾಂಕದ ಬ್ಯಾಟರ್ಗಳಾದ ಮೋಹಿತ್ ಉಲ್ವಾ (49* ರನ್, 26 ಎಸೆತ) ಮತ್ತು ಮನಲ್ ಚೌಹಾಣ್ (47 ರನ್, 32 ಎಸೆತ) ಸಿಡಿಸಿದ ಸ್ಫೋಟಕ ಇನಿಂಗ್ಸ್ಗಳು ಐತಿಹಾಸಿಕ ಗೆಲುವು ತಂದುಕೊಟ್ಟವು. ಈ ಗೆಲುವಿನೊಂದಿಗೆ ಲೀಗ್ ಹಂತದಲ್ಲಿ ಪಾಕ್ ವಿರುದ್ಧ ಅನುಭವಿಸಿದ್ದ ಸೋಲಿಗೆ ಭಾರತ ಭರ್ಜರಿ ಸೇಡು ತೀರಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ, ಆರಂಭಿಕ ಆಟಗಾರ ಉಸ್ಮಾನ್ ಖಾನ್ ಸಿಡಿಸಿದ ಅಮೋಘ ಶತಕ (107 ರನ್, 111 ಎಸೆತ), ಅಬ್ದುಲ್ ಖಾದಿರ್ (80 ರನ್, 54 ಎಸೆತ) ಹಾಗೂ ನಾಯಕ ಫರ್ಹಾನ್ ಯೂಸುಫ್ (63 ರನ್) ಅವರ ಅರ್ಧಶತಕಗಳ ನೆರವಿನಿಂದ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 337 ರನ್ ಕಲೆಹಾಕಿತ್ತು. ಭಾರತದ ಪರ ಡೆತ್ ಓವರ್ಗಳಲ್ಲಿ ಮಿಂಚಿದ ಕಾವ್ಯ ಪಟೇಲ್ 4 ವಿಕೆಟ್ ಹಾಗೂ ಚಿಗುರುಪಾಟಿ ವೆಂಕಟ 3 ವಿಕೆಟ್ ಪಡೆದು ಪಾಕ್ ರನ್ ವೇಗಕ್ಕೆ ಕಡಿವಾಣ ಹಾಕಿದರು.
338 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕರಾದ ಆರ್ಯವೀರ್ ಸೆಹ್ವಾಗ್ (58 ರನ್) ಮತ್ತು ನಾಯಕ ಲಕ್ಷ್ಯ ರಾಯ್ಚಂದಾನಿ (80 ರನ್) ಉತ್ತಮ ಅಡಿಪಾಯ ಹಾಕಿದರು. ಆದರೆ ಮಧ್ಯಮ ಕ್ರಮಾಂಕದ ದಿಢೀರ್ ಕುಸಿತದಿಂದ ಭಾರತ 252 ರನ್ಗಳಿಗೆ 8 ವಿಕೆಟ್ ಕಳೆದುಕೊಂಡು ಸೋಲಿನ ಅಂಚಿಗೆ ತಲುಪಿತ್ತು.
ಈ ಹಂತದಲ್ಲಿ ಒಂದಾದ ಮನಲ್ ಚೌಹಾಣ್ ಮತ್ತು ಮೋಹಿತ್ ಉಲ್ವಾ 9ನೇ ವಿಕೆಟ್ಗೆ ಕೇವಲ 34 ಎಸೆತಗಳಲ್ಲಿ 57 ರನ್ಗಳ ಸಿಡಿಲಬ್ಬರದ ಜೊತೆಯಾಟವಾಡಿ ಪಂದ್ಯದ ದಿಕ್ಕನ್ನೇ ಬದಲಿಸಿದರು. ಮನಲ್ (47) ಔಟಾದ ಬಳಿಕ 11ನೇ ಕ್ರಮಾಂಕದ ಚಿಗುರುಪಾಟಿ ವೆಂಕಟ ಜೊತೆಗೂಡಿ ಹೋರಾಟ ಮುಂದುವರಿಸಿದ ಮೋಹಿತ್, ಅಂತಿಮ ಓವರ್ನ ಕೊನೆಯ ಎಸೆತದಲ್ಲಿ ಗೆಲುವಿಗೆ 3 ರನ್ ಬೇಕಿದ್ದಾಗ ಎಕ್ಸ್ಟ್ರಾ ಕವರ್ ಮೂಲಕ ಆಕರ್ಷಕ ಬೌಂಡರಿ ಬಾರಿಸಿ ಭಾರತಕ್ಕೆ 339/9 ರನ್ಗಳ ಅವಿಸ್ಮರಣೀಯ ಜಯ ತಂದುಕೊಟ್ಟರು.






















